ADVERTISEMENT

ಕುಟುಂಬ ರಾಜಕಾರಣ ಕಾಂಗ್ರೆಸ್‌ನದ್ದು, ನಮ್ಮದಲ್ಲ: ರಾಘವೇಂದ್ರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 12:57 IST
Last Updated 23 ಮಾರ್ಚ್ 2024, 12:57 IST
<div class="paragraphs"><p>ಬಿ.ವೈ.ರಾಘವೇಂದ್ರ</p></div>

ಬಿ.ವೈ.ರಾಘವೇಂದ್ರ

   

ಶಿವಮೊಗ್ಗ: 'ಕುಟುಂಬ ರಾಜಕಾರಣ ಅಂದರೆ ಅದು ಕಾಂಗ್ರೆಸ್‌ನ ವ್ಯವಸ್ಥೆಯೇ ಹೊರತು, ನಾನು ಇಲ್ಲಿ ಸಂಸತ್ ಸದಸ್ಯ, ವಿಜಯಣ್ಣ (ಬಿ.ವೈ.ವಿಜಯೇಂದ್ರ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ಯಡಿಯೂರಪ್ಪ ಅವರು ಪಕ್ಷಕ್ಕೆ ಮಾರ್ಗದರ್ಶನ ಮಾಡುವುದು ಕುಟುಂಬ ರಾಜಕಾರಣ ಅಲ್ಲ' ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದರು.

ಬಿ.ಎಸ್.ಯಡಿಯೂರಪ್ಪ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಶನಿವಾರ ಇಲ್ಲಿ ಮಾಡಿದ ಆರೋಪಕ್ಕೆ ಮಾಧ್ಯಮದವರಿಗೆ ಮೇಲಿನಂತೆ ಪ್ರತಿಕ್ರಿಯಿಸಿದ ಬಿ.ವೈ.ರಾಘವೇಂದ್ರ, 'ಯಾವುದೇ ಕುಟುಂಬದ ಹಿಡಿತದಲ್ಲಿ ರಾಜಕಾರಣ ಕೇಂದ್ರೀಕೃತವಾಗಿರಬಾರದು ಎಂಬುದು ಬಿಜೆಪಿಯ ಸಿದ್ಧಾಂತ. ಅದಕ್ಕೆ ನಾನೂ ಬೆಂಬಲ ಕೊಡುತ್ತೇನೆ' ಎಂದು ಹೇಳಿದರು.

ADVERTISEMENT

'ರಾಷ್ಟ್ರ, ರಾಜ್ಯದಲ್ಲಿ ಒಂದೇ ಕುಟುಂಬದವರು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಆದರೆ, ಆ ಮನೆಯಲ್ಲೇ ಪಕ್ಷದ ಆಗುಹೋಗುಗಳ ನಿರ್ಣಯ ಆಗುತ್ತಿದ್ದರೆ ಅದನ್ನು ಕುಟುಂಬ ರಾಜಕಾರಣ ಅನ್ನಲಾಗುತ್ತದೆ. ಇದಕ್ಕೆ ನೆಹರೂ ಮನೆತನವೇ ಸಾಕ್ಷಿ' ಎಂದರು.

'ಯಡಿಯೂರಪ್ಪ ಚುನಾವಣಾ ರಾಜಕಾರಣದಿಂದ ನಿವೃತ್ತರಾದ ನಂತರ ಪಕ್ಷಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ನಾನೂ ಕೂಡ ಎಬಿವಿಪಿಯಿಂದ ಹೋರಾಟಗಳ ಮಾಡಿಕೊಂಡು ಬಂದವನು. ಶಿಕಾರಿಪುರ ಪುರಸಭೆ ಸದಸ್ಯನಾಗಿ ತಳಮಟ್ಟದಿಂದ ರಾಜಕೀಯ ಮಾಡಿ ಮೂರು ಬಾರಿ ಸಂಸದ, ಒಮ್ಮೆ ಶಾಸಕನಾಗಿ ಕೆಲಸ ಮಾಡಿದ್ದೇನೆ. ಯಾವುದೇ ಒತ್ತಡದ ಕಾರಣಕ್ಕೆ ಪಕ್ಷ ನನಗೆ ಟಿಕೆಟ್ ಕೊಟ್ಟಿಲ್ಲ. ಬದಲಿಗೆ ಕಾರ್ಯಕರ್ತರ ಪ್ರೀತಿ, ಕ್ಷೇತ್ರದಲ್ಲಿನ ಅಭಿವೃದ್ಧಿ, ಸಂಘಟನೆ ನೋಡಿ ಟಿಕೆಟ್‌ ಕೊಡಲಾಗಿದೆ' ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.