ADVERTISEMENT

ಡಿಸೆಂಬರ್‌ನೊಳಗೆ ರಾಜ್ಯ ಸರ್ಕಾರ ಪತನ: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 22:20 IST
Last Updated 28 ಮಾರ್ಚ್ 2024, 22:20 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಮಂಡ್ಯ: ‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ, ಆಕಸ್ಮಿಕವಾಗಿ ಅಧಿಕಾರ ಹಿಡಿದಿದೆ. ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಮುಂದಿನ ಡಿಸೆಂಬರ್‌ನೊಳಗೆ ಸರ್ಕಾರ ಪತನಗೊಳ್ಳುವುದು ನಿಶ್ಚಿತ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.

ನಗರದಲ್ಲಿ ಗುರುವಾರ ಬಿಜೆಪಿ– ಜೆಡಿಎಸ್‌ ಮುಖಂಡರ ಸಮನ್ವಯ ಸಭೆಯಲ್ಲಿ ಮಾತನಾಡಿ, ‘ಬಿಜೆಪಿ ಹಾಗೂ ಜೆಡಿಎಸ್‌ ನಡುವಿನ ಪೈಪೋಟಿಯೇ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಯಿತು. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಬಿಜೆಪಿ– ಜೆಡಿಎಸ್‌ ನಡುವೆ ಸಹಜ ಮೈತ್ರಿಯಾಗಿದ್ದು 2004ರಲ್ಲಿ. ಆಗ ನಾವು ಒಂದಾಗಿ ನೀಡಿದ 20 ತಿಂಗಳ ಆಡಳಿತವನ್ನು ಜನ ಇಂದಿಗೂ ನೆನೆಯುತ್ತಾರೆ’ ಎಂದರು.

‘ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲಿಲ್ಲವೆಂದು ಆರೋಪಿಸಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು. ನನ್ನದಲ್ಲದ ತಪ್ಪಿಗಾಗಿ ಬಲಿಪಶು ಮಾಡಲಾಯಿತು. ಅಂದಿನಿಂದ ಇಂದಿನವರೆಗೆ 17 ವರ್ಷ ವನವಾಸ ಮಾಡಿದ್ದೇನೆ. ಪಕ್ಷ ಕಟ್ಟಲು ಒಬ್ಬಂಟಿಯಾಗಿ ಹೋರಾಡಿದ್ದೇನೆ, ಆದರೆ ಯಶಸ್ವಿಯಾಗಲಿಲ್ಲ’ ಎಂದರು.

ADVERTISEMENT

‘ಮಂಡ್ಯ ಕಾರ್ಯಕರ್ತರು, ಮುಖಂಡರ ಒತ್ತಾಸೆಯಂತೆ ಮಂಡ್ಯದಿಂದ ಕಣಕ್ಕಿಳಿಯುತ್ತಿದ್ದೇನೆ. ಎಂದಿಗೂ ಪಲಾಯನ ಮಾಡುವುದಿಲ್ಲ. ಇದೊಂದು ಧರ್ಮಯುದ್ಧ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.