ADVERTISEMENT

ಬೆಳಗಾವಿ: ಬಿಸಿಲಿಗೆ ಬಸವಳಿದ ಕಣದ ಕಲಿಗಳು

ದಿನೇದಿನೇ ಹೆಚ್ಚುತ್ತಿದೆ ಸೂರ್ಯನ ಆರ್ಭಟ, ಚುನಾವಣಾ ಪ್ರಚಾರಕ್ಕೆ ಇನ್ನಿಲ್ಲದ ಸಂಕಟ

ಇಮಾಮ್‌ಹುಸೇನ್‌ ಗೂಡುನವರ
Published 3 ಏಪ್ರಿಲ್ 2024, 4:36 IST
Last Updated 3 ಏಪ್ರಿಲ್ 2024, 4:36 IST
ರಾಮದುರ್ಗದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಬಿಸಿಲಿನ ಕಾರಣಕ್ಕೆ, ಸಂಜೆ 5 ಗಂಟೆಯಾದರೂ ಹೆಚ್ಚಿನ ಜನರು ಸೇರಿರಲಿಲ್ಲ– ಪ್ರಜಾವಾಣಿ ಚಿತ್ರ:ಚನ್ನಪ್ಪ ಮಾದರ
ರಾಮದುರ್ಗದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಬಿಸಿಲಿನ ಕಾರಣಕ್ಕೆ, ಸಂಜೆ 5 ಗಂಟೆಯಾದರೂ ಹೆಚ್ಚಿನ ಜನರು ಸೇರಿರಲಿಲ್ಲ– ಪ್ರಜಾವಾಣಿ ಚಿತ್ರ:ಚನ್ನಪ್ಪ ಮಾದರ   

ಬೆಳಗಾವಿ: ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳಲ್ಲಿ ಈಗ ಚುನಾವಣೆ ಏರುತ್ತಿದೆ. ಒಂದೆಡೆ ಮತದಾರರನ್ನು ಸೆಳೆಯಲು ತಂತ್ರ– ಪ್ರತಿತಂತ್ರ ರೂಪಿಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳು ಹಾಗೂ ನಾಯಕರು, ಮತ್ತೊಂದೆಡೆ ಬಿಸಿಲಿನ ಝಳದಿಂದ ಕಂಗೆಟ್ಟಿದ್ದಾರೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕೆಲವರು ಪ್ರಚಾರದ ಸಮಯವನ್ನೇ ಬದಲಿಸಿದ್ದಾರೆ.

2021ರಲ್ಲಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಸೂರ್ಯನ ಆರ್ಭಟ ಇಷ್ಟಿರಲಿಲ್ಲ. ಈ ಬಾರಿ ಏಪ್ರಿಲ್‌ ಆರಂಭದಲ್ಲೇ, ಗರಿಷ್ಠ ತಾಪಮಾನ 37ರಿಂದ 38 ಡಿಗ್ರಿ ಹಾಗೂ ಕನಿಷ್ಠ ತಾಪಮಾನ 22ರಿಂದ 24 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ದಿನಕ್ಕೆ ಗರಿಷ್ಠ 34.6 ಡಿಗ್ರಿ, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಈ ವರ್ಷ ಸಾಕಷ್ಟು ಮಳೆಯಾಗದ ಕಾರಣ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಅದರೊಂದಿಗೆ ಜಿಲ್ಲೆಯಲ್ಲಿನ ಕಾಡು ಅವಧಿಗೂ ಮುನ್ನವೇ ಒಣಗಿದೆ. ಜಲಮೂಲಗಳು ಬತ್ತುತ್ತಿವೆ. ಸಹಜವಾಗಿಯೇ ಇದು ಬಿಸಿಗಾಳಿಗೂ ಕಾರಣವಾಗಿದೆ.

ಇದರ ಮಧ್ಯೆಯೂ, ಉಭಯ ರಾಷ್ಟ್ರೀಯ ಪಕ್ಷದವರು ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಅಲ್ಲಲ್ಲಿ ಸಭೆಗಳನ್ನೂ ಸಂಘಟಿಸುತ್ತಿದ್ದಾರೆ. ಆದರೆ, ಅವುಗಳಲ್ಲಿ ನಿರೀಕ್ಷೆಯಂತೆ ಜನರು ಸೇರುತ್ತಿಲ್ಲ. ಹಳ್ಳಿಗಳಲ್ಲಿ ಪ್ರಚಾರ ಕೈಗೊಳ್ಳುವವರು ಬಿಸಿಲಿನಿಂದ ಬಸವಳಿದು, ‘ಸಾಕಪ್ಪ ಸಾಕು...’ ಎನ್ನುತ್ತ ವಿಶ್ರಾಂತಿ ಪಡೆಯುತ್ತಿದ್ದಾರೆ.

ADVERTISEMENT

ಈ ಹಿಂದಿನ ಚುನಾವಣೆಗಳಲ್ಲಿ ಬೆಳಿಗ್ಗೆ 8ರಿಂದ ರಾತ್ರಿಯವರೆಗೂ ಬಿಡುವಿಲ್ಲದೆ ಪ್ರಚಾರ ಕೈಗೊಳ್ಳುತ್ತಿದ್ದ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು, ಬೆಳಿಗ್ಗೆ ಮತ್ತು ಸಂಜೆಯ ಅವಧಿಯಲ್ಲೇ ಪ್ರಚಾರಕ್ಕೆ ಒತ್ತು ನೀಡುತ್ತಿದ್ದಾರೆ. ಮಧ್ಯಾಹ್ನ ಪ್ರಚಾರದ ಚಟುವಟಿಕೆಯಿಂದ ದೂರವುಳಿಯುತ್ತಿರುವುದು ಕಂಡುಬರುತ್ತಿದೆ.

ಟೋಪಿ ವಿತರಣೆ: ‘ಪ್ರಖರವಾದ ಬಿಸಿಲು ಪ್ರಚಾರದ ಮೇಲೂ ಪರಿಣಾಮ ಬೀರಿದೆ. ಸುಡು ಬಿಸಿಲಲ್ಲಿ ಪ್ರಚಾರ ಮಾಡಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೂ ತೊಂದರೆಯಾಗುತ್ತಿದೆ. ಹಾಗಾಗಿ ಸೂರ್ಯ ನೆತ್ತಿ ಮೇಲೆ ಬರುವ ಮುನ್ನ ಬೆಳಿಗ್ಗೆ ಮತ್ತು ಸಂಜೆ ಪ್ರಚಾರ ಮಾಡುತ್ತಿದ್ದೇವೆ’ ಎಂದು ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಮಪತ್ರ ಸಲ್ಲಿಕೆಯಾದ ನಂತರ, ಚುನಾವಣೆ ಕಣ ಇನ್ನಷ್ಟು ರಂಗೇರಲಿದೆ. ಆಗ ಪ್ರಚಾರದಲ್ಲಿ ತೊಡಗುವ ಕಾರ್ಯಕರ್ತರಿಗೆ ಕ್ಯಾಪ್‌ಗಳನ್ನು ವಿತರಿಸುತ್ತೇವೆ’ ಎಂದರು.

ಸಮಯ ಹೊಂದಾಣಿಕೆ: ‘ಲೋಕಸಭೆ ಚುನಾವಣೆ ಮತದಾನಕ್ಕೆ ಹೆಚ್ಚಿನ ಸಮಯವಿಲ್ಲ. ಹಾಗಾಗಿ ಬಿಸಿಲಿನ ಮಧ್ಯೆಯೂ ಪ್ರಚಾರ ನಡೆಸುತ್ತಿದ್ದೇವೆ. ಮಧ್ಯಾಹ್ನ ಸ್ವಲ್ಪ ಹೊತ್ತು ಪ್ರಚಾರದಿಂದ ದೂರ ಉಳಿಯುತ್ತಿದ್ದೇವೆ. ಬಿಸಿಲು, ಪ್ರಚಾರ; ಎರಡನ್ನೂ ಹೇಗೋ ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ತಯಾರಿ ನಡೆಸಿದ್ದೇವೆ’ ಎನ್ನುತ್ತಾರೆ ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ.

‘ಬಿಸಿಲು ಐತೇನೋ ನಿಜಾ. ಆದ್ರ ಎಲೆಕ್ಷನ್‌ ಕೂಡ ಬಾಳ್‌ ಮುಖ್ಯ ಅಲ್ಲೇನರಿ. ಹಂಗಾಗಿ ತ್ರಾಸ್‌ ಆದ್ರ ಆಗವಾಲ್ತಂತ ಪ್ರಚಾರ ಮಾಡಾತೇವ್ರಿ. ಮಧ್ಯಾಹ್ನದಾಗ ಒಂದೆರಡ ತಾಸ್‌ ರೆಸ್ಟ್‌ ಮಾಡ್ತೇವ್ರಿ’ ಎನ್ನುತ್ತಾರೆ ಬೈಲಹೊಂಗಲದ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು.

ರಾಮದುರ್ಗದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಬಿಸಿಲಿನ ಕಾರಣಕ್ಕೆ ಸಂಜೆ 5 ಗಂಟೆಯಾದರೂ ಹೆಚ್ಚಿನ ಜನರು ಸೇರಿರಲಿಲ್ಲ– ಪ್ರಜಾವಾಣಿ ಚಿತ್ರ:ಚನ್ನಪ್ಪ ಮಾದರ

Highlights - ಜಿಲ್ಲೆಯಲ್ಲೊ ಸರಾಸರಿ 37 ಡಿಗ್ರಿಗೆ ಏರಿದ ಪ್ರಖರತೆ ಬೇಸಿಗೆ ಮಳೆಗಾಗಿ ಕಾದು ಕುಳಿತಿದ್ದಾರೆ ಜಿಲ್ಲೆಯ ಜನ ಮನೆಯಿಂದ ಹೊರಬರಲು ಜನರ ಹಿಂದೇಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.