ADVERTISEMENT

ವಿಜಯಪುರ ನಗರ ಬಿಜೆಪಿ ಟಿಕೆಟ್‌ಗೆ ಹೆಚ್ಚಿದ ಒತ್ತಡ; ಅಪ್ಪು ಪಟ್ಟಣಶೆಟ್ಟಿ ಪರ ಒಲವು

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಪರ ಒಲವು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 13:20 IST
Last Updated 7 ಏಪ್ರಿಲ್ 2023, 13:20 IST
ಅಪ್ಪು ಪಟ್ಟಣಶೆಟ್ಟಿ
ಅಪ್ಪು ಪಟ್ಟಣಶೆಟ್ಟಿ   

ವಿಜಯಪುರ: ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಟಿಕೆಟ್‌ ಅನ್ನು ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬದಲಿಗೆ ಮಾಜಿ ಸಚಿವ ಅಪ್ಪಾ ಸಾಹೇಬ ಪಟ್ಟಣಶೆಟ್ಟಿ ಅವರಿಗೆ ನೀಡಬೇಕು ಎಂಬ ಒತ್ತಾಯ ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಮಾಜಿ ಸಚಿವ ಪಟ್ಟಣಶೆಟ್ಟಿ ಅವರು ಬಿಜೆಪಿಯ ನಿಷ್ಠವಂತ ಕಾರ್ಯಕರ್ತರಾಗಿದ್ದಾರೆ. ಅವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆ ಟಿಕೆಟ್ ನೀಡಿದರೆ ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ಬರುತ್ತದೆ ಎಂದು ಹೇಳಿದರು.

ಶಾಸಕ ಯತ್ನಾಳ ಅವರು ರಾಜ್ಯ, ರಾಷ್ಟ್ರ ನಾಯಕರಿದ್ದಾರೆ. ಅವರನ್ನು ಪಕ್ಷ ಸಮರ್ಥವಾಗಿ ಬಳಿಸಿಕೊಳ್ಳಬೇಕು, ಅವರಿಗೆ ವಿಜಯಪುರ ಹೊರತು ಪಡಿಸಿ, ಬೇರೆ ಕ್ಷೇತ್ರ ಕೊಟ್ಟರೆ ಪಕ್ಷಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದರು.

ADVERTISEMENT

ವಿಜಯಪುರಕ್ಕೆ ಯತ್ನಾಳ ಅವರು ಸಲ್ಲಿಸಿರುವ ಸೇವೆ ಹೆಚ್ಚಾಗಿದೆ. ಇದೀಗ ಬೇರೆ ಕ್ಷೇತ್ರಕ್ಕೆ ಅವರ ಸೇವೆಯನ್ನು ಬಳಸಿಕೊಳ್ಳುವುದು ಪಕ್ಷದ ದೃಷ್ಟಿಯಿಂದ ಉತ್ತಮ ಎಂದು ಅವರು ವ್ಯಂಗ್ಯವಾಡಿದರು.

ಗೆಲುವು ನಿಶ್ಚಿತ:

ಮಹಾನಗರ ಪಾಲಿಕೆ ಮಾಜಿ ಸದಸ್ಯ ಗೋಪಾಲ ಘಟಕಾಂಬಳೆ ಮಾತನಾಡಿ, ಶಾಸಕ ಯತ್ನಾಳ ಅವರು ಜಿಲ್ಲೆಯ ಏಳು ಕ್ಷೇತ್ರದಲ್ಲಿ ಯಾವುದೇ ಕ್ಷೇತ್ರಕ್ಕೆ ಸ್ಪರ್ಧಿಸಿದರೂ ಗೆಲುವು ನಿಶ್ಚಿತ. ಹೀಗಾಗಿ ಪಕ್ಷ ಯಾವ ಕ್ಷೇತ್ರದಲ್ಲಿ ಇದುವರೆಗೂ ಅಧಿಕಾರಕ್ಕೆ ಬಂದಿಲ್ಲವೋ ಅಲ್ಲಿ ಯತ್ನಾಳಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದರು.

ಪಟ್ಟಣಶೆಟ್ಟಿ ಅವರಿಗೆ ಹೋದ ಸಲ ವಿಜಯಪುರ ನಗರ ಕ್ಷೇತ್ರದ ಟಿಕೆಟ್‌ ನೀಡದೇ ಅನ್ಯಾಯ ಮಾಡಲಾಗಿದೆ. ಅಲ್ಲದೇ, ಬಣಜಿಗ ಸಮುದಾಯದ ಮತದಾರರು ಅತ್ಯಧಿಕ ಇರುವ ನಗರ ಕ್ಷೇತ್ರದಲ್ಲಿ ಪಟ್ಟಣಶೆಟ್ಟಿ ಅವರಿಗೆ ಟಿಕೆಟ್‌ ನೀಡುವ ಮೂಲಕ ಆ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದಿನ ಚುನಾವಣೆಯಲ್ಲಿ ಟಿಕೆಟ್‌ ಕೈತಪ್ಪಿದರೂ ಪಕ್ಷಕ್ಕೆ ಬದ್ದರಾಗಿ ಐದು ವರ್ಷಗಳಿಂದ ಪಟ್ಟಣಶೆಟ್ಟಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅನ್ಯಾಯ ಆಗಬಾರದು ಎಂದರು.

‘ಹಿಂದೂ ಹುಲಿ’ ಎಂದೇ ಗುರುತಿಸಿಕೊಂಡಿರುವ ಯತ್ನಾಳ ಅವರು ಬೀದರ್‌ನಿಂದ ಚಾಮರಾಜನಗರದ ವರೆಗೆ ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ಲುವ ಅವಕಾಶ ಇದೆ. ಪಕ್ಷದ ವರಿಷ್ಠರು ಇದನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಮಿರ್ಜಿ, ಶ್ರೀಕಾಂತ ಶಿಂಧೆ, ಸನ್ನಿ ಗವಿಮಠ, ಶಿವಾನಂದ ಮಾನಕರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.