ADVERTISEMENT

ಚುನಾವಣಾ ರಾಜಕಾರಣದಿಂದ ದತ್ತ ನಿವೃತ್ತಿ: ಜೂ. 24ರಿಂದ ಪಶ್ಚಾತ್ತಾಪ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 16 ಮೇ 2023, 15:33 IST
Last Updated 16 ಮೇ 2023, 15:33 IST
   

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಡೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಜಿತರಾದ ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಅವರು ಕ್ಷೇತ್ರದ ಮತದಾರರಿಗೆ ಮಂಗಳವಾರ ಸುದೀರ್ಘ ಬಹಿರಂಗ ಪತ್ರ ಬರೆದಿದ್ದಾರೆ. ಚುನಾವಣಾ ರಾಜಕಾರಣದಿಂದ ಹೊರನಡೆಯಲು ತೀರ್ಮಾನಿಸಿದ್ದಾರೆ. ಜೂ.24ರಿಂದ ಪಶ್ಚಾತ್ತಾಪ ಪಾದಯಾತ್ರೆಗೆ ನಿರ್ಧರಿಸಿದ್ದಾರೆ.

ಪತ್ರದಲ್ಲಿನ ಸಾರಾಂಶ ಇಂತಿದೆ.

2023ರ ಚುನಾವಣೆ ನನ್ನ ಪಾಲಿಗೆ ಅವಿಸ್ಮರಣೀಯ ಚುನಾವಣೆ ಆಗಬಹುದೆಂಬ ಆಶಾಭಾವನೆ ಮೂಡಿತ್ತು. ಆದೂ ಅಲ್ಲದೇ ಇದೇ ನನ್ನ ಕಡೆಯ ಚುನಾವಣೆ ಎಂಬುದನ್ನೂ ತಮ್ಮಲ್ಲಿ ತಿಳಿಸಿದ್ದೆ. ಆದರೆ, ಯಾವಾಗ ಚುನಾವಣೆ ಮುಗಿದು ಫಲಿತಾಂಶ ಹೊರಬಂದ ಮೇಲೆ ನನಗೆ ವಾಸ್ತವ ದರ್ಶನವಾಯಿತು.

2006ರಲ್ಲಿ ಕಡೂರು ಕ್ಷೇತ್ರಕ್ಕೆ ನಾನು ಅನಿವಾರ್ಯವಾಗಿ ಕಾಲಿಟ್ಟ ದಿನದಿಂದ 2023ರವರೆಗಿನ ನನ್ನ ನಡೆವಳಿಕೆ ನಿರ್ಧಾರಗಳು ಹಾಗೂ ಮತದಾರರೊಂದಿಗಿನ ನನ್ನ ಸಂಬಂಧದ ಬಗ್ಗೆ ನಾನೇ ಎಲ್ಲೋ ಎಡವಿದ್ದೇನೆ ಎಂಬ ಅನುಮಾನ ನನ್ನನ್ನು ಸದಾ ಕಾಡತೊಡಗಿದೆ. ಚುನಾವಣಾ ಫಲಿತಾಂಶದ ಬಗ್ಗೆ ನಾನೆಂದೂ ತಲೆಕಡೆಸಿಕೊಂಡವನಲ್ಲ. ನನ್ನ ರಾಜಕೀಯ ಜೀವನದಲ್ಲಿ ಗೆಲುವಿಗಿಂತ ಸೋಲನ್ನೇ ಜಾಸ್ತಿ ನೋಡಿದವನು ನಾನು. ಸೋಲುಗೆಲುವು ಎರಡನ್ನೂ ಸಮಚಿತ್ತದಿಂದ ಸಮಭಾವದಿಂದ ನೋಡುವ ಮನಸ್ಥಿತಿ ನನ್ನದು. ಹಾಗಾಗಿ ಬಂದ ಫಲಿತಾಂಶದ ಬಗ್ಗೆ ನನಗೆ ಎಳ್ಳಷ್ಟೂ ಬೇಸರವಿಲ್ಲ. ಇನ್ನೂ ಮುಂದುವರೆದು ಈ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ ಅಭಿನಂದನೆ ಸಲ್ಲಿಸಿ ಕಡೂರು ಕ್ಷೇತ್ರಕ್ಕೆ ಮಂತ್ರಿಯಾಗಿ ಬಾ ಎಂಬ ಶುಭ ಹಾರೈಕೆ ಸಲ್ಲಿಸಿ ಕ್ರೀಡಾ ಸ್ಫೂರ್ತಿ ಮೆರೆದವನು ನಾನು.

ADVERTISEMENT

ನಾನೀಗ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಾನು ಎಲ್ಲಿ ಎಡವಿದೆ ನನ್ನ ಮತದಾರ ಬಂಧುಗಳಾದ ನಿಮ್ಮ ನಿರೀಕ್ಷೆಯನ್ನು ಮುಟ್ಟಲು ನಾನು ಎಲ್ಲಿ ವಿಫಲನಾಗಿದ್ದೇನೆ ಎಂಬ ಬಗ್ಗೆ ಚಿಂತನ–ಮಂಥನ ಮಾಡುತ್ತಿದ್ದೇನೆ. ನಾನೊಬ್ಬನೇ ನಡುರಾತ್ರಿ ಸೂರೆಣೆಸಿ ನನ್ನಿಂದ ನಿಮಗೆ ಆಗಿರಬಹುದಾದ ಅಪಚಾರವೇನುಂಬದರ ಬಗ್ಗೆ ಚಿಂತಿಸುತ್ತಿದ್ದೇನೆ.

ಈ ಸೋಲು ನನ್ನ ಉತ್ಸಾಹ, ಜೀವನೋತ್ಸಾಹವನ್ನು ಕಡಿಮೆಯಂತೂ ಮಾಡಿಲ್ಲ. ಚುನಾವಣಾ ರಾಜಕಾರಣದಿಂದ ಹೊರನಡೆಯಲು ತೀರ್ಮಾನಿಸಿದ್ದರೂ ಸಕ್ರಿಯ ರಾಜಕಾರಣದಿಂದ ನಾನು ದೂರ ಸರಿಯುವ ಮಾತೇ ಇಲ್ಲ. ಕಳೆದ 17 ವರ್ಷಗಳಿಂದಲೂ ನೀವು ತೋರಿರುವ ಪ್ರೀತಿ, ಬೆಂಬಲ, ಅಭಿಮಾನದ ಕಾರಣದಿಂದ ನಿಮ್ಮ ಋಣ ತೀರಿಸುವ ಹಾಗೂ ನನ್ನ ಕೊನೆಯ ಉಸಿರುವ ಇರುವವರೆಗೂ ನಿಮ್ಮೊಂದಿಗೆ ಇದ್ದು ನಿಮ್ಮಲ್ಲಿಯೇ ಒಬ್ಬನಾಗಿ ಈ ನನ್ನ ನೆಲದಲ್ಲಿಯೇ ಮಣ್ಣಾಗಬೇಕು ಎಂಬ ದೃಢ ಸಂಕಲ್ಪ ಮಾಡಿರುತ್ತೇನೆ.

ಈ ಎಲ್ಲ ಹಿನ್ನೆಲೆಯಲ್ಲಿ ಇಡೀ ಕ್ಷೇತ್ರದ ಮತದಾರ ಬಂಧುಗಳಿಗೆ ನನ್ನನ್ನು ಬೆಂಬಲಿಸಿ ಆಶೀರ್ವಾದ ಮಾಡಿದ ನನ್ನ ಹಿತೈಷಿಗಳಿಗೆ ಹಾಗೂ ನನ್ನ ತಪ್ಪಿನ ಕಾರಣ ನನ್ನಿಂದ ದೂರವಾಗಿರುವ ಮನಸ್ಸುಗಳನ್ನು ಒಗ್ಗೂಡಿಸುವ ಕ್ರಮದ ಸಲುವಾಗಿ ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ.

ಜೂನ್‌ 24ರಂದು ನನ್ನ ಜನ್ಮದಿನ. 70ನೇ ವರ್ಷದ್ದು. ನನ್ನ ಜನ್ಮದಿನದಿಂದಲೇ ಆರಂಭಿಸಿ ನಿಮ್ಮ ನಿಮ್ಮ ಊರುಗಳಿಗೆ ಬಂದು ನನ್ನ ತಪ್ಪನ್ನು ನಿಮ್ಮ ಮುಂದೆ ನಿವೇದಿಸಿಕೊಂಡು, ನಿಮ್ಮ ಕ್ಷಮೆಯನ್ನು ಕೇಳುವ ಸಲುವಾಗಿ ನಾನೇ ಸ್ವತಃ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ.

‘ಪ್ರಾಯಶ್ಚಿತ್ತ ಪಾದಯಾತ್ರೆ’ ಎಂಬ ಹೆಸರಿನಲ್ಲಿ ನಾನು ನಿಮ್ಮಲ್ಲಿಗೆ ಬರುತ್ತಿದ್ದೇನೆ. ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಇದು ಯಾವುದೇ ಚುನಾವಣೆ ದೃಷ್ಟಿಯಿಂದಲ್ಲ. ಬದಲಿಗೆ ನಾನೇ ಮಾಡಿರಬಹುದಾದ ಅನೇಕ ತಪ್ಪುಗಳಿಗೆ ನೀವು ನೀಡಿರುವ ಶಿಕ್ಷೆಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಇದು ಸಕಾಲ ಎಂದೂ ಭಾವಿಸಿದ್ದು, ಈ ಕ್ರಮಕ್ಕೆ ಮುಂದಾಗಿದ್ದೇನೆ. ಜೂನ್‌ ಮೊದಲನೇ ವಾರ ಪ್ರಾಯಶ್ಚಿತ್ತ ಪಾದಯಾತ್ರೆಯ ಪ್ರವಾಸದ ವಿವರ ತಮಗೆ ತಲುಪಿಸುತ್ತೇನೆ.

ವಿಶೇಷ ಸೂಚನೆ: ಪಾದಯಾತ್ರೆಯಲ್ಲಿ ಆಯಾಯ ದಿನ ನಾನು ಯಾವ ಕೊನೆಯ ಗ್ರಾಮ ತಲುಪುತ್ತೇನೆಯೋ ಆ ಗ್ರಾಮದಲ್ಲಿಯೇ ‘ಗ್ರಾಮ ವಾಸ್ತವ್ಯ’ ಮಾಡಲಿದ್ದೇನೆ.

ಪ್ರೀತಿಪೂರ್ವಕ ನಮಸ್ಕಾರಗಳೊಡನೆ, 

ವೈಎಸ್‌ವಿ ದತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.