ADVERTISEMENT

ಸಿ.ಡಿ ಬಿಡುತ್ತೇನೆ ಎಂದು ಡಿಕೆಶಿ ನಿನ್ನೆ ರಾತ್ರಿವರೆಗೂ ಬೆದರಿಸಿದ: ರಮೇಶ ಜಾರಕಿಹೊಳಿ

ಡಿ.ಕೆ.ಶಿವಕುಮಾರ ಈಗಲಾದರೂ ಬುದ್ಧಿ ಕಲಿಯಬೇಕು. ಬದಲಾಗಬೇಕು. ‘ವಿಷಕನ್ಯೆ’ಯಿಂದ ದೂರ ಇರಬೇಕು. ಇಲ್ಲದಿದ್ದರೆ ಅವನೂ ಉದ್ಧಾರವಾಗುವುದಿಲ್ಲ. ನಾಶವಾಗುತ್ತಾನೆ: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 10 ಮೇ 2023, 5:43 IST
Last Updated 10 ಮೇ 2023, 5:43 IST
ಶಾಸಕ ರಮೇಶ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಶಾಸಕ ರಮೇಶ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್   

ಬೆಳಗಾವಿ: ‘ನಿನ್ನೆ ತಡರಾತ್ರಿವರೆಗೂ ಡಿ.ಕೆ. ಶಿವಕುಮಾರ ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡಿದ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನೀನು ಹಿಂದೆ ಸರಿಯದಿದ್ದರೆ ಸಿ.ಡಿ ಹೊರಗಡೆ ಬಿಡುತ್ತೇನೆ ಎಂದು ಹೆದರಿಸಲು ಯತ್ನಿಸಿದ. ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ, ಅದ್ಯಾವ ಸಿ.ಡಿ ಬಿಡುತ್ತಿ ಬಿಡು ಮಗನೆ ಎಂದಿದ್ದೇನೆ’ ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಆರೋಪಿಸಿದರು.

ಗೋಕಾಕದಲ್ಲಿ ಬುಧವಾರ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಗೆ ಮಾತನಾಡಿದ ಅವರು, ‘ನಿನ್ನೆ ರಾತ್ರಿ 12.30ಕ್ಕೆ ನನಗೆ ಡಿ.ಕೆ.ಶಿವಕುಮಾರ ಬ್ಲ್ಯಾಕ್ ಮೇಲ್ ಮಾಡಿದ. ಕೊನೆ ಕ್ಷಣದವರೆಗೂ ಹೆದರಿಸಲು ನೋಡಿದ. ಆದರೆ, ನಾನು ಹಿಂದೆ ಸರಿಯಲಿಲ್ಲ. ಬಿಜೆಪಿ ನನ್ನ ಮೇಲೆ ವಿಶ್ವಾಸವಿಟ್ಟಿದೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅಂದಿದ್ದೆನೆ’ ಎಂದರು.

‘ಡಿ.ಕೆ.ಶಿವಕುಮಾರ ಈಗಲಾದರೂ ಬುದ್ಧಿ ಕಲಿಯಬೇಕು. ಬದಲಾಗಬೇಕು. ‘ವಿಷಕನ್ಯೆ’ಯಿಂದ ದೂರ ಇರಬೇಕು. ಇಲ್ಲದಿದ್ದರೆ ಅವನೂ ಉದ್ಧಾರವಾಗುವುದಿಲ್ಲ. ನಾಶವಾಗುತ್ತಾನೆ’ ಎಂದೂ ಹೇಳಿದರು.

ADVERTISEMENT

‘ಈಗಲೂ ನಾನು ಕೇಂದ್ರ ಗೃಹಮಂತ್ರಿ ಅವರಿಗೆ ಮನವಿ ಮಾಡಿದ್ದೇನೆ. ರಾಜ್ಯದ ಸಿ.ಡಿ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಬೇಕು. ನಾನು ಹೇಗೋ ಗಟ್ಟಿಯಾಗಿದ್ದೇನೆ. ಆದರೆ, ಇನ್ನೂ ನೂರು ಮಂದಿಯ ಸಿ.ಡಿ.ಗಳು ಡಿಕೆಶಿ ಬಳಿ ಇವೆ. ಇದನ್ನು ಸಿಐಡಿಗೆ ಒಪ್ಪಿಸಿದರೆ ಮಾತ್ರ ರಾಜ್ಯದಲ್ಲಿ ಶಾಂತಿ ನೆಲೆಸುತ್ತದೆ’ ಎಂದರು.

‘ಡಿ.ಕೆ. ಶಿವಕುಮಾರ್ ದೊಡ್ಡ ಮಟ್ಟದ ರಾಜಕಾರಣಿ, ಮುಖ್ಯಮಂತ್ರಿ ಆಕಾಂಕ್ಷಿ. ಇಂತಹ ಸಿ.ಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿರುವುದು ಏಕೆ ಗೊತ್ತಿಲ್ಲ. ನನ್ನ ಜತೆಗೆ ಇದ್ದಾಗ ಬಹಳ ಒಳ್ಳೆಯವನಿದ್ದ. ಗೆಳೆತನಕ್ಕೆ ಒಳ್ಳೆ ಮನುಷ್ಯ. ಈಗ ಏಕೆ ಹೀಗೆ ಮಾಡ್ತಿದ್ದಾನೆ ಗೊತ್ತಿಲ್ಲ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಅವನ ಬಳಿ ಯಾವುದೋ ಆಡಿಯೊ ಇದೆ ಅಂತಿದ್ದಾನೆ. ಯಾವ ಆಡಿಯೊ ಇದೆ ನನಗೆ ಗೊತ್ತಿಲ್ಲ. ನಾನು ಯಾರೋ ಪ್ರಮುಖರನ್ನು ಬೈಯ್ದಿದ್ದು ಕಟ್ ಅಂಡ್‌ ಪೇಸ್ಟ್ ಮಾಡಿದ್ದಾನೆ. ಅದನ್ನು ಇನ್ಯಾರಿಗೋ ಹೋಲಿಸಿ ದುರುಪಯೋಗ ಮಾಡಲು ಯತ್ನಿಸುತ್ತಿದ್ದಾರೆ’ ಎಂದೂ ಅವರು ಪ್ರತಿಕ್ರಿಯಿಸಿದರು.

‘ನಾನು ಸತತ ಆರು ಗೆದ್ದಿದ್ದೇನೆ. ಇದು ಏಳನೇ ಚುನಾವಣೆ. ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಅವರು ಹೇಳಿದ ಹಾಗೇ 130ಕ್ಕೂ ಹೆಚ್ಚು ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.