‘ಜನರಿಗೆ ಬೇಕಿರುವುದು ರಾಮಮಂದಿರಗಳಲ್ಲ, ರಾಮ ರಾಜ್ಯ’ ಎಂದು ‘ಮುಖ್ಯಮಂತ್ರಿ ಚಂದ್ರು’ ಪ್ರತಿಪಾದಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಪ್ರಚಾರ ಸಮತಿ ಅಧ್ಯಕ್ಷರಾಗಿರುವ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಸಂಕ್ಷಿಪ್ತ ಸಾರ ಇಲ್ಲಿದೆ.
*ಮೌಲ್ಯಾಧಾರಿತ ರಾಜಕಾರಣ ಮರೆಯಾಗುತ್ತಿರುವಾಗ ಎಎಪಿಗೆ ಭವಿಷ್ಯ ಇದೆಯೇ?
–ಖಂಡಿತ ಇದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗಿಂತ ಎಎಪಿ ಏಕೆ ಮುಖ್ಯ ಎನ್ನುವುದು ದೆಹಲಿ, ಪಂಜಾಬ್‌ಗಳಲ್ಲಿ ಸಾಬೀತಾಗಿದೆ. ಜನರಿಗೆ ಅಗತ್ಯವಿರುವ ನೀರು, ವಿದ್ಯುತ್, ಶಿಕ್ಷಣ, ಆರೋಗ್ಯಕ್ಕೆ ಪಕ್ಷ ಮೊದಲ ಆದ್ಯತೆ ನೀಡಿದೆ. ದೆಹಲಿಯ ಸರ್ಕಾರಿ ಶಾಲೆಗಳು ದೇಶಕ್ಕೆ ಮಾದರಿಯಾಗಿವೆ. ಆರೋಗ್ಯ ಯೋಜನೆಗಳಿಂದ ಬಡವರು ನೆಮ್ಮದಿ ಕಂಡಿದ್ದಾರೆ. ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲು ಸಾಧ್ಯವಾಗಿದ್ದು ಭ್ರಷ್ಟಾಚಾರ ರಹಿತ ಆಡಳಿತದಿಂದಾಗಿ. ಶೇ 40–50ರಷ್ಟು ಕಮಿಷನ್ ವ್ಯವಹಾರಕ್ಕೆ ಕಡಿವಾಣ ಹಾಕಿದ್ದರಿಂದ ಬಜೆಟ್‌ನಲ್ಲೇ ಇಂತಹ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಾಧ್ಯವಾಗಿದೆ.
* ಮೌಲ್ಯಕ್ಕಾಗಿ ಜನರು ಜಾತಿ, ಧರ್ಮ ಮೀರುತ್ತಾರೆಯೇ?
–ದೇಶದ ಜನರಿಗೆ ಬೇಕಿರುವುದು ರಾಮ ಮಂದಿರಗಳಲ್ಲ. ನಿತ್ಯವೂ ಎರಡು ಹೊತ್ತು ಊಟ, ನಿಲ್ಲಲು ನೆಲೆ, ಬಟ್ಟೆ, ಉಚಿತ ಶಿಕ್ಷಣ, ಆರೋಗ್ಯ ಸಿಗುವಂತಹ ‘ರಾಮರಾಜ್ಯ. ಬಿಜೆಪಿ ನಾಯಕರು ರಾಮ ಮಂದಿರದ ಬಗ್ಗೆ ಮಾತನಾಡುತ್ತಾರೆ. ಇತರೆ ದೇವರು ಅವರಿಗೆ ಏಕೆ ಕಾಣುವುದಿಲ್ಲ? ನಮ್ಮೂರ ಹಟ್ಟಿ ಮಾರಮ್ಮ, ಬುಟ್ಟಿ ಲಕ್ಕಮ್ಮ, ಹನುಮ, ಬೀರ ದೇವರೆಲ್ಲವೇ? ಇಂತಹ ಮಾತುಗಳ ಮೂಲ ಉದ್ದೇಶ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದೇ ಆಗಿದೆ. ಇಂತಹ ತಂತ್ರಗಳು ಜನರಿಗೆ ಕ್ರಮೇಣ ಆರ್ಥವಾಗುತ್ತವೆ.
* ಉಚಿತ ಕೊಡುಗೆಗಳು ಅಭಿವೃದ್ಧಿಗೆ ತೊಡಕು ಎನ್ನುತ್ತಾರಲ್ಲ?
–ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳಲ್ಲೇ ಗೊಂದಲಗಳಿವೆ. ಖಚಿತತೆ ಕಾಣುತ್ತಿಲ್ಲ. ದೇಶದ ಜನರಿಗೆ ಉಚಿತ ಕೊಡುಗೆಗಳನ್ನು ನೀಡಿದರೆ ದೇಶ ಆರ್ಥಿಕವಾಗಿ ದಿವಾಳಿಯಾಗುತ್ತದೆ. ಜನರು ಸೋಮಾರಿಗಳಾಗುತ್ತಾರೆ ಎನ್ನುತ್ತಾರೆ. ಅದೇ ಐದಾರು ಶ್ರೀಮಂತರು ಮಾಡಿದ ₹ 11 ಲಕ್ಷ ಕೋಟಿ ಸಾಲ ಮನ್ನಾ ಮಾಡುತ್ತಾರೆ. ಅಷ್ಟು ದೊಡ್ಡ ಮೊತ್ತ ಮನ್ನಾ ಮಾಡಿದರೆ ದೇಶ ಉದ್ಧಾರವಾಗುತ್ತದೆಯೇ?
* ಆಮ್ ಆದ್ಮಿ ಪಕ್ಷದ ನಾಯಕರೂ ಜೈಲು ಸೇರಿದ್ದಾರಲ್ಲ?
–ಬಿಜೆಪಿಗೆ ದೇಶದಲ್ಲಿ ಸವಾಲಾಗಿರುವುದೇ ಎಎಪಿ. ಸಿಸೋಡಿಯಾ ಸೇರಿದಂತೆ ಕೆಲ ನಾಯಕರ ವಿರುದ್ಧ ಪಿತೂರಿ ಮಾಡಲಾಗಿದೆ. ದೆಹಲಿ ಉಪ ಮುಖ್ಯಮಂತ್ರಿಯಾಗಿದ್ದ ಸಿಸೋಡಿಯಾ ಅವರ ಮನೆಯಲ್ಲಿ ಸಿಕ್ಕಿದ್ದು ₹ 10,000, ಎಫ್‌ಐಆರ್‌ನಲ್ಲೂ ಅವರ ಹೆಸರು ಇರಲಿಲ್ಲ. ನಮ್ಮಲ್ಲಿ ಬಿಜೆಪಿ ಶಾಸಕರ ಮನೆಯಲ್ಲಿ ₹ 8 ಕೋಟಿ ಸಿಕ್ಕರೂ ಅದೊಂದು ಸಾಮಾನ್ಯ ಸಂಗತಿ ಎನ್ನುತ್ತಾರೆ. ಇದು ಬಿಜೆಪಿಯ ದ್ವಂದ್ವ ನೀತಿ. ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ.
* ಜನರು ಬದಲಾಗುವ ನಿರೀಕ್ಷೆ ಇದೆಯೇ?
– ಒಂದು ವಸ್ತು ಖರೀದಿ ಮಾಡುವಾಗ, ಮಗಳಿಗೆ ಮದುವೆ ಮಾಡುವಾಗ ಎಷ್ಟೊಂದು ವಿಚಾರ ಮಾಡುತ್ತೇವೆ. ಐದು ವರ್ಷ ರಾಜ್ಯ, ದೇಶವನ್ನು ಆಳುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಏಕೆ ಯೋಚಿಸುವುದಿಲ್ಲ? ಜನರು ಹಣ, ಮದ್ಯ, ಆಮಿಷಗಳಿಗೆ ಸಿಲುಕದೇ ಪ್ರಾಮಾಣಿಕ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂದಾಗಬೇಕು. ರಾಜ್ಯದಲ್ಲಿ ಬದಲಾವಣೆ ನಮ್ಮಿಂದಲೇ ಆರಂಭವಾಗಲಿದೆ.
* ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಪಕ್ಷ ತೊರೆದದ್ದು ಹಿನ್ನಡೆಯೇ?
–ಒಂದು ಪಕ್ಷಕ್ಕೆ ಎಲ್ಲರೂ ಮುಖ್ಯ. ಅವರು ನನಗಿಂತ ಮುಂಚೆ ಎಎಪಿ ಸೇರಿದವರು. ಭ್ರಷ್ಟಾಚಾರ ವಿರೋಧಿಸಿದ್ದವರು ಬಿಜೆಪಿ ಸೇರಿದ್ದು ಆಶ್ಚರ್ಯ ತಂದಿದೆ.
***
ರಾಜ್ಯದಲ್ಲಿ ಪಕ್ಷಕ್ಕೆ ಬುನಾದಿ ಖಚಿತ
ರಾಜ್ಯದಲ್ಲಿ ಜಾತಿ ವ್ಯವಸ್ಥೆ, ಭ್ರಷ್ಟಾಚಾರ, ಹಣ, ತೋಳ್ಬಲ ರಾಜಕಾರಣ ವಿಜೃಂಭಿಸುತ್ತಿದೆ. ಮೌಲ್ಯಾಧಾರಿತ ರಾಜಕಾರಣ ಕಾಣದಾಗಿದೆ. ಇಂತಹ ಸ್ಥಿತಿಯಲ್ಲಿ ಎಎಪಿ ಜನರಲ್ಲಿ ಸಣ್ಣ ಭರವಸೆ ಮೂಡಿಸಿದೆ. ಈ ಬಾರಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗದಿರಬಹುದು. ಆದರೆ, ಪಕ್ಷಕ್ಕೆ ಬುನಾದಿ ದೊರಕುವುದರಲ್ಲಿ ಯಾವ ಅನುಮಾನವೂ ಇಲ್ಲ. ಅದಕ್ಕಾಗಿಯೇ ತಾವು ಚುನಾವಣಾ ಕಣಕ್ಕೆ ಇಳಿಯದೇ ಎಲ್ಲ ಅಭ್ಯರ್ಥಿಗಳ ಪರ ಜನಾಭಿಪ್ರಾಯ ರೂಪಿಸಲು ರಾಜ್ಯ ಪ್ರವಾಸ ಮಾಡುತ್ತಿರುವೆ. ಗುಜರಾತ್‌ನಲ್ಲೂ ಇಂತಹ ಸ್ಥಿತಿಯೇ ಇತ್ತು. ಅಲ್ಲಿ ಪಕ್ಷ ಗೆಲ್ಲದಿದ್ದರೂ ಶೇ 14ರಷ್ಟು ಮತ ಗಳಿಸಿದೆ. ಎಎಪಿಗೆ ಭವಿಷ್ಯವಿದೆ ಎಂದು ‘ಮುಖ್ಯಮಂತ್ರಿ’ ಚಂದ್ರು ಆಶಾಭಾವ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.