ADVERTISEMENT

ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಬೆಳೆಸುವುದು ಸುಳ್ಳು: ರಾಣಿ ಸಂಯುಕ್ತಾ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 14:42 IST
Last Updated 12 ಏಪ್ರಿಲ್ 2023, 14:42 IST
ರಾಣಿ ಸಂಯುಕ್ತಾ
ರಾಣಿ ಸಂಯುಕ್ತಾ   

ಹೊಸಪೇಟೆ (ವಿಜಯನಗರ): ‘ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಬೆಳೆಸುವುದು ಸುಳ್ಳು. ಇದಕ್ಕೆ ಸಾಕ್ಷಿ ವಿಜಯನಗರ ಕ್ಷೇತ್ರದ ಟಿಕೆಟ್‌ ಹಂಚಿಕೆ. ಸಿದ್ದಾರ್ಥ ಸಿಂಗ್‌ ಅವರಿಗೆ ಈಗ 25ರಿಂದ 26 ವರ್ಷ ವಯಸ್ಸು. ಮೊದಲಿನಿಂದಲೂ ಅವರು ಪಕ್ಷದ ಕಾರ್ಯಕರ್ತ ಅಲ್ಲ. ಹೀಗಿದ್ದರೂ ಅವರಿಗೆ ಟಿಕೆಟ್‌ ನೀಡಿರುವುದೇಕೆ? ಪಕ್ಷ ನಿಷ್ಠರನ್ನು ಕಡೆಗಣಿಸಿರುವುದು ನೋವು ತಂದಿದೆ’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ, ವಿಜಯನಗರ ಕ್ಷೇತ್ರದ ಪ್ರಮುಖ ಟಿಕೆಟ್‌ ಆಕಾಂಕ್ಷಿಯಾಗಿದ್ದ ರಾಣಿ ಸಂಯುಕ್ತಾ ಹೇಳಿದರು.

ನಗರದ ಸಂಡೂರು ರಸ್ತೆಯ ಅವರ ನಿವಾಸದಲ್ಲಿ ನೂರಾರು ಬೆಂಬಲಿಗರೊಂದಿಗೆ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಿದ್ದಾರ್ಥ ಸಿಂಗ್‌ ನಾಲ್ಕೈದು ತಿಂಗಳಿಂದ ಹೊರಗೆ ಓಡಾಡುತ್ತಿದ್ದಾರೆ. ಪಕ್ಷದ ಕೆಲಸ ಮಾಡಿಲ್ಲ. ಕಬಡ್ಡಿ, ಕ್ರಿಕೆಟ್‌ ಆಡಿಸಿದ್ದಾರೆ. ನೆರೆ ಬಂದಾಗ ಅವರು ಎಲ್ಲಿದ್ದರು? ಸಚಿವರ ಮಗನೆಂಬುದಕ್ಕೆ ಅವರಿಗೆ ಟಿಕೆಟ್‌ ಕೊಡಲಾಗಿದೆ. ಕಾರ್ಯಕರ್ತರನ್ನು ಕಡೆಗಣಿಸಿ ಬಿಜೆಪಿ ಏನು ಸಂದೇಶ ಕೊಟ್ಟಿದೆ ಎಂದು ಪ್ರಶ್ನಿಸಿದರು.

ವಿಜಯನಗರ ಕ್ಷೇತ್ರದ ಟಿಕೆಟ್‌ಗಾಗಿ ನಾನು, ಆನಂದ್‌ ಸಿಂಗ್‌ ಹಾಗೂ ಪ್ರಿಯಾಂಕ್‌ ಜೈನ್‌ ಅರ್ಜಿ ಸಲ್ಲಿಸಿದ್ದೆವು. ಜಿಲ್ಲೆ ಹಾಗೂ ರಾಜ್ಯದಿಂದ ಮೂವರ ಹೆಸರುಗಳೇ ಹೋಗಿದ್ದವು. ಆದರೆ, ಅದರಲ್ಲಿ ಸಿದ್ದಾರ್ಥ ಸಿಂಗ್‌ ಹೆಸರು ಹೇಗೆ ಸೇರಿತು ಎನ್ನುವುದು ಗೊತ್ತಾಗುತ್ತಿಲ್ಲ. 30 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವ ನನ್ನನ್ನು ಕಡೆಗಣಿಸಿ ಹುಡುಗನಿಗೆ ಟಿಕೆಟ್‌ ಕೊಟ್ಟರೆ ನನಗೆ ಮೋಸ ಮಾಡಿದಂತೆ ಅಲ್ಲವೇ? ಸಿದ್ದಾರ್ಥ ಅವರಿಗೆ ಟಿಕೆಟ್‌ ಕೊಟ್ಟರೆ ವಿಜಯನಗರಕ್ಕೆ ಭವಿಷ್ಯ, ರಾಣಿ ಸಂಯುಕ್ತಾ ಅವರಿಗೆ ಕೊಟ್ಟರೆ ಭವಿಷ್ಯ ಇಲ್ಲವೇ? ಪಕ್ಷದ ನಿರ್ಧಾರ ಬೇಸರ ತಂದಿದೆ, ಮನಸ್ಸಿಗೆ ನೋವಾಗಿದೆ ಎಂದರು.

ಕ್ಷೇತ್ರದಾದ್ಯಂತ ಸಂಚರಿಸಿ, ನನ್ನ ಬೆಂಬಲಿಗರು, ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆದು ಎರಡು ದಿನಗಳ ನಂತರ ನನ್ನ ಮುಂದಿನ ತೀರ್ಮಾನ ತಿಳಿಸುತ್ತೇನೆ. ಈಗಾಗಲೇ ಬೇರೆ ಪಕ್ಷದವರು ಸಂಪರ್ಕದಲ್ಲಿದ್ದಾರೆ. ಪಕ್ಷ ಬಿಟ್ಟು ಹೋದವರಿಗೆ ಟಿಕೆಟ್‌ ಕೊಟ್ಟಿರುವುದಕ್ಕೆ ನನ್ನ ಬೆಂಬಲಿಗರಿಗೆ ನೋವಾಗಿದೆ. ಬಿಜೆಪಿ ಪಕ್ಷ ನಿಮಗೇನು ಮಾಡಿದೆ. ನೀವು ಒಂದು ತೀರ್ಮಾನಕ್ಕೆ ಬರಬೇಕೆಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ವಕ್ತಾರ ಅನಂತ ಪದ್ಮನಾಭ ಮಾತನಾಡಿ, ರಾಣಿ ಸಂಯುಕ್ತಾ ಅವರು 30 ವರ್ಷಗಳಿಂದ ವಿವಿಧ ಹಂತಗಳಲ್ಲಿ ಪಕ್ಷದಲ್ಲಿ ಕೆಲಸ ಮಾಡಿದ್ದಾರೆ. ಪಕ್ಷದ ಹಿರಿಯರು ಇತ್ತೀಚೆಗೆ ಅವರಿಗೆ ಕರೆದು ಕೆಲಸ ಶುರು ಮಾಡಿ ಎಂದು ಹೇಳಿದ್ದರು. ಅದಕ್ಕೆ ತಕ್ಕಂತೆ ಪ್ರಚಾರ ಮಾಡುತ್ತಿದ್ದರು. ಆದರೆ, ಈಗ ಟಿಕೆಟ್‌ ಕೊಡದೆ ಇರುವ ನಿರ್ಧಾರ ಸರಿಯಲ್ಲ ಎಂದರು.

ವಂಶ, ಕುಟುಂಬ ರಾಜಕಾರಣಕ್ಕೆ ಪಕ್ಷದಲ್ಲಿ ಅವಕಾಶ ಇಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದರು. ಈಗ ಏನು ಮಾಡಿದ್ದಾರೆ. ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿ ಬಂದವರಿಗೆ ಟಿಕೆಟ್‌ ಕೊಟ್ಟು ರಾಣಿ ಸಂಯುಕ್ತಾ ಅವರಿಗೆ ವಂಚಿಸಲಾಗಿದೆ. ಆನಂದ್‌ ಸಿಂಗ್‌ ಅವರಿಗೆ ಟಿಕೆಟ್‌ ಕೊಟ್ಟಿದ್ದರೆ ವಿರೋಧ ಮಾಡುತ್ತಿರಲಿಲ್ಲ. ಪಕ್ಷದ ಚಿಹ್ನೆ ಇರದೆ ಪ್ರಚಾರ ಮಾಡಿದ ವ್ಯಕ್ತಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ನೋವಾಗಿದೆ ಎಂದು ಸಿದ್ದಾರ್ಥ ಸಿಂಗ್‌ ಅವರ ಹೆಸರು ಪ್ರಸ್ತಾಪಿಸದೆ ಹೇಳಿದರು.

ಮುಖಂಡರಾದ ಜಂಬಾನಹಳ್ಳಿ ವಸಂತ, ಕಟಗಿ ರಾಮಕೃಷ್ಣ, ಪಂಚಪ್ಪ, ಚಂದ್ರಕಾಂತ ಕಾಮತ್‌, ವ್ಯಾಸನಕೆರೆ ಶ್ರೀನಿವಾಸ್‌, ಅನಿಲ್‌ ಜೋಶಿ ಹಾಜರಿದ್ದರು.

‘ಆನಂದ್‌ ಸಿಂಗ್‌, ನಾವು ಒಂದೇ ಅಲ್ಲ’
‘ನಾನು ಲಿಂಗಾಯತ ಸಮುದಾಯಕ್ಕೆ ಸೇರಿದವಳು. ಆನಂದ್‌ ಸಿಂಗ್‌ ಹಾಗೂ ನಾವು ಒಂದೇ ಅಲ್ಲ’ ಎಂದು ರಾಣಿ ಸಂಯುಕ್ತಾ ಹೇಳಿದರು.

‘ಒಂದುವೇಳೆ ಪಕ್ಷ ನಿಮಗೆ ಟಿಕೆಟ್‌ ಕೊಟ್ಟಿದ್ದರೂ ಕುಟುಂಬ ರಾಜಕಾರಣಕ್ಕೆ ಬಿಜೆಪಿ ಮಣೆ ಹಾಕಿದಂತೆ ಆಗುತ್ತಿತ್ತಲ್ಲಾ’ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆನಂದ್‌ ಸಿಂಗ್ ನನ್ನ ದೊಡ್ಡಪ್ಪನ ಮಗ. ನಾನು ಅವರ ಸಹೋದರಿ. ನಾನು ಮದುವೆಯಾದ ನಂತರ ಗಂಡನ ಮನೆಗೆ ಬಂದಿದ್ದೇನೆ. ಈಗ ನಾನು ಲಿಂಗಾಯತ ಸಮಾಜದವಳು. ಎರಡೂ ಕುಟುಂಬದವರ ನಡುವೆ ಸಂಬಂಧವಿದೆ. ಆದರೆ, ರಾಜಕೀಯ ಬೇರೆ. ನಾನು ಹಾಗೂ ನನ್ನ ಪತಿ ಬಿಜೆಪಿ ಸಂಘಟನೆಗೆ ಶ್ರಮಿಸಿದ್ದೇವೆ. ಈಗ ನಮ್ಮನ್ನು ಪಕ್ಷ ಕಡೆಗಣಿಸಿದ್ದಕ್ಕೆ ನೋವಾಗಿದೆ’ ಎಂದು ತಿಳಿಸಿದರು.

ಇವನ್ನೂ ಓದಿ...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.