
ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸತತ ಮೂರು ಬಾರಿ ಸೋಲುಂಡಿರುವ ನನ್ನ ಪರವಾಗಿ ಕ್ಷೇತ್ರದಲ್ಲಿ ಈ ಬಾರಿ ಅನುಕಂಪದ ಅಲೆ ಎದ್ದಿದೆ. 60 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ನನ್ನ ಗೆಲುವು ನಿಶ್ಚಿತ ಎಂದು ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಬಿಜೆಪಿ ಗೆಲುವಿಗೆ ಅನುಕೂಲವಾಗಲಿದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಸತತವಾಗಿ ಸೋತರೂ ಕ್ಷೇತ್ರದ ಜನರ ಹೃದಯದಲ್ಲಿ ನಾನಿದ್ದೇನೆ. ನಿರಂತರವಾಗಿ ಅವರ ಸಂಪರ್ಕದಲ್ಲಿದ್ದೇನೆ. ಹೀಗಾಗಿ ಪಕ್ಷ ನನಗೆ ಮತ್ತೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಮತಯಾಚಿಸುವ ವೇಳೆ ಸಹಜವಾಗಿ ಹೃದಯ ತುಂಬಿ ಕಣ್ಣೀರು ಬರುತ್ತದೆ. ಆದರೆ, ವಿರೋಧಿಗಳು ಇದನ್ನು ಟೀಕಿಸುತ್ತಿರುವುದು ಖಂಡನೀಯ ಎಂದು ಹೇಳಿದರು.
ಯತ್ನಾಳ ಅಣ್ಣನ ಸಮಾನ:
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹಿರಿಯರು, ಅಣ್ಣನ ಸಮಾನರು. ಅವರು ನಮ್ಮ ನಾಯಕರು. ನಾನು ಅವರ ಕ್ಷೇತ್ರದ ಮತದಾರನಾಗಿದ್ದು, ಮೊದಲು ಅವರಿಗೆ ಮತ ಹಾಕಿ ನನ್ನ ಕ್ಷೇತ್ರಕ್ಕೆ ಹೋಗುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ನನ್ನ ಗೆಲುವಿಗೆ ಅವರು ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಪರಿಣಾಮ ಬೀರದು:
ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದ ಬಿಜೆಪಿ ಮೇಲಾಗಲಿ, ಬಬಲೇಶ್ವರ ಕ್ಷೇತ್ರದ ಮೇಲಾಗಲಿ ಯಾವುದೇ ಪರಿಣಾಮ ಬೀರದು. ಸವದಿ ಹಿರಿಯರಿದ್ದಾರೆ. ಅವರು ಬಿಜೆಪಿ ತೊರೆಯಬಾರದಿತ್ತು ಎಂದರು.
ಚುನಾವಣಾ ಸಿಬ್ಬಂದಿಗೆ ಆಮಿಷ:
ಬಬಲೇಶ್ವರ ವಿಧಾನಸಭಾ ಚುನಾವಣೆಗೆ ನಿಯೋಜನೆಯಾಗಿರುವ ಬಿಎಲ್‌ಒಗಳಿಗೆ ನಾಗಠಾಣ ಕ್ಷೇತ್ರ ವ್ಯಾಪ್ತಿಯ ದ್ಯಾಬೇರಿಯಲ್ಲಿ ಬಾಡೂಟ, ಕುಡಿಯಲು ವ್ಯವಸ್ಥೆ ಮಾಡುವ ಮೂಲಕ ಕಾಂಗ್ರೆಸ್‌ನವರು ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದರು.
ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮಕೈಗೊಳ್ಳಲು ಚುನಾವಣಾಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ತಕ್ಷಣ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಹಾಗೂ ಚುನಾವಣಾ ಕರ್ತವ್ಯದಿಂದ ಅವರನ್ನು ಹೊರಗಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡರಾದ ಉಮೇಶ ಕೋಳಕೂರ, ಗುರುಲಿಂಗಪ್ಪ ಅಂಗಡಿ, ಸುರೇಶ ಬಿರಾದಾರ, ಸಂಜಯ ಪಾಟೀಲ ಕನಮಡಿ, ವಿಠಲ ಕಿರೇಸೂರ, ಬಸವರಾಜ ಬಿರಾದಾರ, ಬಸವರಾಜ ಬೈಚಬಾಳ, ಮಲ್ಲಿಕಾರ್ಜುನ ಜೋಗೂರ, ವಿಜಯ ಜೋಶಿ, ರಾಕೇಶ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.