ADVERTISEMENT

ಕಲಬುರಗಿ | ಹಣ ಹಂಚುತ್ತಿದ್ದ ಬಿಜೆಪಿ ಕಾರ್ಯಕರ್ತರ ಬೆನ್ನಟ್ಟಿ ಹಿಡಿದ ಜಿಲ್ಲಾಧಿಕಾರಿ!

​ಪ್ರಜಾವಾಣಿ ವಾರ್ತೆ
Published 9 ಮೇ 2023, 4:30 IST
Last Updated 9 ಮೇ 2023, 4:30 IST
ಹಣ ಹಂಚುತ್ತಿದ್ದ ಆರೋಪಿಗಳು
ಹಣ ಹಂಚುತ್ತಿದ್ದ ಆರೋಪಿಗಳು   

ಕಲಬುರಗಿ: ಇಲ್ಲಿನ ದಕ್ಷಿಣ ‌ಮತಕ್ಷೇತ್ರದ ಸಂಗಮೇಶ್ವರ ಕಾಲೊನಿಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಹಣ ಹಂಚಲು‌ ಮುಂದಾಗಿದ್ದ ಇಬ್ಬರು ವ್ಯಕ್ತಿಗಳನ್ನು ‌ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಯಶವಂತ ‌ವಿ. ಗುರುಕರ್ ಬೆನ್ನಟ್ಟಿ ಹಿಡಿದಿದ್ದಾರೆ.

ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಕಡೆಯವರು ಎನ್ನಲಾದ ಇಬ್ಬರು ಕಳೆದ ರಾತ್ರಿ 1ಕ್ಕೆ ಬೀದಿ ದೀಪ ಬಂದ್ ಮಾಡಿ ಹಣ ಹಂಚಲು‌ ಮುಂದಾಗಿದ್ದರು ಎಂದು ಕಾಂಗ್ರೆಸ್ ‌ಕಾರ್ಯಕರ್ತರು ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದರು. ಪೊಲೀಸರ‌ ಗಮನಕ್ಕೂ ತರದೇ ಜಿಲ್ಲಾಧಿಕಾರಿ ಸ್ಥಳಕ್ಕೆ ಧಾವಿಸಿದರು.

ಇದರಿಂದ ಕಕ್ಕಾಬಿಕ್ಕಿಯಾದ ಇಬ್ಬರು ಕಾರನ್ನು ಗಂಟೆಗೆ 100 ಕಿ.ಮೀ. ವೇಗದಲ್ಲಿ ಚಲಾಯಿಸಿಕೊಂಡು ಪರಾರಿಯಾಗುತ್ತಿದ್ದರು. ಅವರ ಬೆನ್ನಟ್ಟಿದ ಜಿಲ್ಲಾಧಿಕಾರಿ ‌ಕೇಂದ್ರ ಬಸ್ ನಿಲ್ದಾಣ ಸಮೀಪದ ವಿದ್ಯಾನಗರದ ಬಳಿ ಕಾರನ್ನು ತಡೆದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರ ಕೊರಳಪಟ್ಟಿ ಹಿಡಿದು ವಶಕ್ಕೆ ಪಡೆದರು.

ADVERTISEMENT

ಜಿಲ್ಲಾಧಿಕಾರಿ ಬರುವ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಹಣದ ಬ್ಯಾಗ್ ನೊಂದಿಗೆ ವ್ಯಕ್ತಿಯೊಬ್ಬರು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರನ್ನು ನಿಲ್ಲಿಸು ಎಂದರೂ ಕೇಳದೇ ವೇಗವಾಗಿ ಚಲಾಯಿಸಿದ ಕಾರು ಚಾಲಕನನ್ನು ಜಿಲ್ಲಾಧಿಕಾರಿ ‌ಗುರುಕರ್ ಅವರು ತರಾಟೆಗೆ ತೆಗೆದುಕೊಂಡ ದೃಶ್ಯ ವಿಡಿಯೊದಲ್ಲಿದೆ.

ಘಟನೆ ಕುರಿತು ‘ಪ್ರಜಾವಾಣಿ‘ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಕಮಿಷನರ್ ಚೇತನ್ ಆರ್., 'ರಾತ್ರಿ ಕೆಲವರು ಹಣ ಹಂಚುತ್ತಿರುವ ಬಗ್ಗೆ ಮಾಹಿತಿ ಬಂದ ಬಳಿಕ ಜಿಲ್ಲಾಧಿಕಾರಿ ಅವರು ತೆರಳಿದ್ದಾರೆ. ಈ ಕುರಿತು ಕಾಂಗ್ರೆಸ್ ಮುಖಂಡರು ದೂರು ನೀಡಿದ್ದು, ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ದಾಖಲಿಸಲಾಗುತ್ತಿದೆ' ಎಂದರು.

ತಡರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ, ಚಿತ್ತಾಪುರ ಕ್ಷೇತ್ರದ ಅಭ್ಯರ್ಥಿ ಪ್ರಿಯಾಂಕ್ ‌ಖರ್ಗೆ ಸ್ಥಳಕ್ಕೆ ಭೇಟಿ ನೀಡಿದರು.

ಬಿಜೆಪಿ ಮುಖಂಡ ಶಿವಾನಂದ ಹೂಲಿ ಎಂಬಾತನ ಕಾರು ಬೆನ್ನಟ್ಟಿದ ಜಿಲ್ಲಾಧಿಕಾರಿ ಯಶವಂತ ಗುರುಕರ್ ಕಾರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.