ADVERTISEMENT

ಹಾಸನ| 33 ಸ್ಥಳಗಳಲ್ಲಿ ಚೆಕ್‌ಪೋಸ್ಟ್‌: ಲಾಡ್ಜ್‌ಗಳ ಮೇಲೂ ಹದ್ದಿನ ಕಣ್ಣು

ಪೊಲೀಸ್ ಇಲಾಖೆಯಿಂದ ತೀವ್ರ ನಿಗಾ: 33 ಸ್ಥಳಗಳಲ್ಲಿ ಚೆಕ್‌ಪೋಸ್ಟ್‌

ಚಿದಂಬರ ಪ್ರಸಾದ್
Published 8 ಏಪ್ರಿಲ್ 2023, 6:00 IST
Last Updated 8 ಏಪ್ರಿಲ್ 2023, 6:00 IST
ಹಾಸನ ತಾಲ್ಲೂಕಿನ ಕಟ್ಟಾಯದ ಬಳಿ ಪೊಲೀಸರು ವಾಹನ ತಪಾಸಣೆ ಮಾಡಿದರು.
ಹಾಸನ ತಾಲ್ಲೂಕಿನ ಕಟ್ಟಾಯದ ಬಳಿ ಪೊಲೀಸರು ವಾಹನ ತಪಾಸಣೆ ಮಾಡಿದರು.   

ಹಾಸನ: ವಿಧಾನಸಭೆ ಚುನಾವಣೆಯ ಅಧಿಸೂಚನೆ ಹೊರಬೀಳಲು ಇನ್ನು 6 ದಿನಗಳ ಕಾಲಾವಕಾಶವಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಪೊಲೀಸ್‌ ಇಲಾಖೆಯಿಂದ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ ಹದ್ದಿನ ಕಣ್ಣಿಟ್ಟಿದೆ.

ಚುನಾವಣೆಯಲ್ಲಿ ಮತದಾರರಿಗೆ ಹಂಚಲು ತರುವ ನಗದು, ಇನ್ನಿತರ ವಸ್ತುಗಳ ಮೇಲೆ ನಿಗಾ ಇಡಲು ಜಿಲ್ಲೆಯ 33 ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ. ಈಗಾಗಲೇ ಹಲವೆಡೆ ವಾಹನಗಳನ್ನು ತಪಾಸಣೆ ನಡೆಸಿರುವ ಪೊಲೀಸರು, ₹62 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ. ಈ ಮೂಲಕ ಚುನಾವಣೆಯ ಹೊತ್ತಿನಲ್ಲಿ ಗಲಾಟೆಯಂತಹ ಪ್ರಕರಣಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್‌ ತಿಳಿಸಿದ್ದಾರೆ.

ADVERTISEMENT

ನಗರದ ಕೆಲ ಪ್ರದೇಶದಲ್ಲಿ ಮತದಾರರಿಗೆ ಆಮಿಷ ಒಡಲಾಗುತ್ತಿದೆ ಎಂಬ ದೂರುಗಳು ಬಂದಿದ್ದು, ನೀತಿ ಸಂಹಿತೆ ಜಾರಿ ಬಂದ ನಂತರ ಅಂತಹ ಯಾವುದೇ ಪ್ರಕರಣಗಳು ವರದಿಯಾದರೂ, ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಇಂತಹ ಪ್ರಕರಣ ಕಂಡರೆ ಸಾರ್ವಜನಿಕರು ದೂರು ನೀಡುವ ಮೂಲಕ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಲಾಡ್ಜ್‌ಗಳ ಮೇಲೂ ನಿಗಾ: ಜಿಲ್ಲೆಯಲ್ಲಿ ಜಂಗಲ್‌ ರೆಸಾರ್ಟ್‌ಗಳಿದ್ದು, ಬೆಂಗಳೂರು–ಮಂಗಳೂರು ಹೆದ್ದಾರಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಹೊರ ಜಿಲ್ಲೆಗಳಿಂದ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ನಗರದ ಲಾಡ್ಜ್‌ಗಳು, ಜಂಗಲ್‌ ರೆಸಾರ್ಟ್‌ಗಳ ಮೇಲೂ ಪೊಲೀಸರು ನಿಗಾ ಇರಿಸಿದ್ದಾರೆ.

ನೀತಿ ಸಂಹಿತೆ ಜಾರಿಯಾದ ತಕ್ಷಣದಿಂದಲೇ ಪೊಲೀಸ್‌ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಲಾಡ್ಜ್‌ಗಳು, ಮದ್ಯಮಾರಾಟ ಮಳಿಗೆಗಳಿಗೆ ನಿರಂತರ ಭೇಟಿ ನೀಡುವ ಮೂಲಕ ಮಾಹಿತಿ ಕಲೆ ಹಾಕುತ್ತಿವೆ.

ಹೊರಗಿನಿಂದ ಬಂದು ಲಾಡ್ಜ್‌ಗಳಲ್ಲಿ ತಂಗುವ ವ್ಯಕ್ತಿಗಳು, ಜಿಲ್ಲೆಗೆ ಬಂದಿರುವ ಉದ್ದೇಶ, ಎಷ್ಟು ದಿನ ಇಲ್ಲಿ ಇರುತ್ತಾರೆ? ಯಾರನ್ನು ಭೇಟಿಯಾಗುತ್ತಾರೆ? ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.

ಪ್ಯಾರಾ ಮಿಲಿಟರಿ ಪಡೆಗಳ ಪಥಸಂಚಲನ: ಮಲೆನಾಡು, ಅರೆಮಲೆನಾಡು ಭಾಗ ಸೇರಿದಂತೆ ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲಿ ಪ್ಯಾರಾ ಮಿಲಿಟರಿ ಪಡೆಗಳ ಪಥ ಸಂಚಲನ ನಡೆಸಲಾಗುತ್ತಿದೆ. ಈಗಾಗಲೇ ಸಕಲೇಶಪುರ, ಅರಸೀಕೆರೆ, ಹೊಳೆನರಸೀಪುರಗಳಲ್ಲಿ ಪಥ ಸಂಚಲನ ನಡೆದಿದ್ದು, ಜನರು ನಿರ್ಭಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

ಪೊಲೀಸರು ವಶಕ್ಕೆ ಪಡೆದ ವಸ್ತುಗಳು

ವಸ್ತು; ಮೌಲ್ಯ

ನಗದು; ₹ 64,06,090

ಮದ್ಯ; ₹18,93,236

ಮಾದಕ ವಸ್ತು; ₹ 14,850

ಉಡುಗೊರೆ; ₹ 44.10 ಲಕ್ಷ

ಒಟ್ಟು ಪ್ರಕರಣ; 66

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.