ADVERTISEMENT

ಬಿಜೆಪಿ ತೊರೆಯುವ ನಿರ್ಧಾರ ತಿಳಿಸಿದ ಲಕ್ಷ್ಮಣ ಸವದಿ

’ಜನರೇ ನನ್ನ ಹೈಕಮಾಂಡ್‌, ಅವರು ಹೇಳಿದಂತೆ ನನ್ನ ಭವಿಷ್ಯ ನಿರ್ಧಾರವಾಗುತ್ತದೆ‘

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 11:09 IST
Last Updated 12 ಏಪ್ರಿಲ್ 2023, 11:09 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಅಥಣಿ (ಬೆಳಗಾವಿ ಜಿಲ್ಲೆ): ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈ ತಪ್ಪಿದ್ದರಿಂದ ಬೇಸರಗೊಂಡ ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ, ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ,.

ಪಟ್ಟಣದಲ್ಲಿ ಬುಧವಾರ ಮಧ್ಯಮದವರೊಂದಿಗೆ ಮಾತನಾಡಿದ ಅವರು, ’ಗುರುವಾರ ಸಂಜೆಗೆ ಮುರುಘೇಂದ್ರ ಶಿವಯೋಗಿಗಳ ಮಠದಲ್ಲಿ ಸಭೆ ಕರೆದಿದ್ದೇನೆ. ನನ್ನ ಜನರಿಂದ ಮಾರ್ಗದರ್ಶನ ಪಡೆದು ಮುಂದಿನ ಹೆಜ್ಜೆ ಇಡುತ್ತೇನೆ. ಈವರೆಗೂ ನನ್ನ ಕ್ಷೇತ್ರದ ಜನರೇ ನನ್ನ ಹೈಕಮಾಂಡ್‌. ಈ ಹೈಕಮಾಂಡ್‌ ಏನು ತೀರ್ಮಾನ ಕೊಡುತ್ತದೆಯೋ ಅದರ ಮೇಲೆ ನನ್ನ ಭವಿಷ್ಯ ನಿಂತಿದೆ. ಅಲ್ಲಿಯವರೆಗೂ ಯಾವುದೇ ತೀರ್ಮಾನ ಮಾಡಿಲ್ಲ‘ ಎಂದರು.

’ನನ್ನ ಈ ನಿರ್ಧಾರ ಹಲವರಿಗೆ ನೋವು ತರಬಹುದು. ಆದರೆ, ನಾನು ಅಛಲವಾಗಿದ್ದೇನೆ. ನಾನೊಬ್ಬ ಸ್ವಾಭಿಮಾನಿ ರಾಜಕಾರಣಿ. ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ಯಾರ ಬಳಿಯೂ ಭಿಕ್ಷಾಪಾತ್ರೆ ಹಿಡಿದುಕೊಂಡು ತಿರುಗುವವ ನಾನಲ್ಲ‘ ಎಂದರು.

ADVERTISEMENT

’ಕೊನೆಕ್ಷಣದವರೆಗೂ ನಿನ್ನೊಂದಿಗೆ ಇದ್ದೇವೆ ಎಂದು ಬಿಜೆಪಿ ಕೆಲ ನಾಯಕರು ಹೇಳಿದ್ದರು. ನಾನು ಅವರನ್ನು ನಂಬಿದ್ದೆ. ಈಗ ನಂಬಿಕೆ ಸುಳ್ಳಾಗಿದೆ. ಬೆನ್ನಿಗೆ ಚೂರಿ ಹಾಕಿದವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ‘ ಎಂದರು.

’ಬಿಜೆಪಿಯನ್ನು ನನ್ನ ತಾಯಿ ಸ್ಥಾನದಲ್ಲಿ ಇಟ್ಟಿದ್ದೆ. ತಾಯಿ ಯಾವತ್ತೂ ವಿಷ ಕೊಡುವುದಿಲ್ಲ ಎಂದು ನಂಬಿದ್ದೆ. ಆದರೆ, ಈಗಿನ ರಾಜಕಾರಣದಲ್ಲಿ ತಾಯಿ ಕೂಡ ಭ್ರಷ್ಟಳಾಗಿದ್ದಾಳೆ ಅನ್ನಿಸುತ್ತಿದೆ. ಅಂದಿನ ಬಿಜೆಪಿ, ಇಂದಿನ ಬಿಜೆಪಿಯಲ್ಲಿ ಬಹಳ ವ್ಯತ್ಯಾಸವಿದೆ‘ ಎಂದೂ ಹರಿಹಾಯ್ದರು.

’ನಾನು ಪಕ್ಷದಲ್ಲಿ 20 ವರ್ಷ ನಿಷ್ಠಾವಂತ ಕಾರ್ಯಕರ್ತನಾಗಿದ್ದೆ. ಅದಕ್ಕೆ ಪ್ರಧಾನಿಯಿಂದ ಹಿಡಿದು ಸಾಮಾನ್ಯ ಸದಸ್ಯನವರೆಗೆ ಎಲ್ಲರೂ ಗೌರವ ಕೊಟ್ಟಿದ್ದಾರೆ. ಅವರೆಲ್ಲರ ಸಹಕಾರಕ್ಕೆ ನಾನು ಋಣಿ. ನನ್ನ ರಾಜಕೀಯ ಗುರುಗಳಾದ ಅನಂತಕುಮಾರ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮೆಲ್ಲರ ಪ್ರಶ್ನಾತೀತ ನಾಯಕರಾದ ಯಡಿಯೂರಪ್ಪ ಅವರಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ನನ್ನ ತಂದೆಯನ್ನು ಕಳೆದುಕೊಂಡಾಗ ನಾನು ಅವರನ್ನೇ ತಂದೆಯ ಸ್ಥಾನದಲ್ಲಿ ನೋಡಿದ್ದೇನೆ‘ ಎಂದರು.

’ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೆಳೆತನ, ಪ್ರಧಾನಿ ಮೋದಿ ಅವರಿಗೆ 75 ವರ್ಷ ಮುಗಿದ ಬಳಿಕ, ಬಸವರಾಜ ಬೊಮ್ಮಾಯಿ ಅವರೇ ಪ್ರಧಾನಿ ಆಗುತ್ತಾರೆ ಎಂಬ ಭರವಸೆ ನನಗೆ ಇದೆ. ಅವರು ದೇಶದ ಪ್ರಧಾನಿ ಆಗಲಿ‘ಎಂದೂ ಹೇಳಿದರು.

ಮಾನವಂತರಿಗೆ ಬೆಲೆ ಇಲ್ಲ:

’ಬಿಜೆಪಿಯಲ್ಲಿ ಮಾನವಂತರು, ನಿಷ್ಠಾವಂತರು, ಪಕ್ಷವನ್ನು ಅಧಿಕಾರಕ್ಕೆ ತರಲು ಹಂಬಲಿಸುವವರನ್ನು ದೂರ ಮಾಡುವ ಕೆಲಸ ನಡೆದಿದೆ. ಅವರಿಗೆ ಏನೋ ದೂರದೃಷ್ಟಿ ಇರಬಹುದು. ಅನೇಕರು ಹೊರಗಡೆಯಿಂದ ಬಂದವರಿದ್ದಾರೆ. ಅವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ. ಆಯಸ್ಸು, ಆರೋಗ್ಯ, ಅಂತಸ್ತು, ನೆಮ್ಮದಿಯ ಜೀವನ ದಯಪಾಲಿಸಲಿ ಎಂದು ‌ಪ್ರಾರ್ಥಿಸುತ್ತೇನೆ‘ ಎಂದು ಸವದಿ ಹೇಳಿದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.