ADVERTISEMENT

‘ಟಿಕೆಟ್‌ ಫೈಟ್‌’ನಲ್ಲಿ ಗೆದ್ದ ಲಕ್ಷ್ಮಣ!

ಹಲವು ಆಕಾಂಕ್ಷಿಗಳಲ್ಲಿ ಒಕ್ಕಲಿಗ ‘ಹೋರಾಟಗಾರ’ನಿಗೆ ಮಣೆ ಹಾಕಿದ ಸಿದ್ದರಾಮಯ್ಯ, ಹೈಕಮಾಂಡ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 5:10 IST
Last Updated 22 ಮಾರ್ಚ್ 2024, 5:10 IST
ಎಂ.ಲಕ್ಷ್ಮಣ
ಎಂ.ಲಕ್ಷ್ಮಣ   

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಒಕ್ಕಲಿಗ ಸಮಾಜದ ನಾಯಕ ಎಂ. ಲಕ್ಷ್ಮಣ ಅವರಿಗೆ ಟಿಕೆಟ್‌ ನೀಡಿ ಕಾಂಗ್ರೆಸ್‌ ವರಿಷ್ಠರು ಮಣೆ ಹಾಕಿದ್ದಾರೆ.

ಕ್ಷೇತ್ರದ ಟಿಕೆಟ್‌ಗೆ ತೀವ್ರ ಪೈಪೋಟಿ ಕಂಡುಬಂದಿತ್ತು. ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಸೇರಿದಂತೆ 14 ಮಂದಿ ಆಕಾಂಕ್ಷಿಗಳಿದ್ದರು. ಎಲ್ಲವನ್ನೂ ಅಳೆದು ತೂಗಿದ ಹೈಕಮಾಂಡ್ ಲಕ್ಷ್ಮಣ ಅವರಿಗೆ ಅವಕಾಶ ನೀಡಿದೆ.

ಟಿಕೆಟ್‌ ಕುರಿತ ಅಂತಿಮ ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ಇಲ್ಲಿಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ ನೀಡಿತ್ತು ಎನ್ನಲಾಗಿತ್ತು. ಅವರು ತಮ್ಮನ್ನೂ ಸೇರಿದಂತೆ, ಕೆಪಿಸಿಸಿ ಅಧ್ಯಕ್ಷ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಜೊತೆಗೂ ಉತ್ತಮ ಒಡನಾಟ ಹೊಂದಿರುವ ಲಕ್ಷ್ಮಣ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಟಿಕೆಟ್‌ಗಾಗಿ ಹಣಾಹಣಿಯಲ್ಲಿ ಲಕ್ಷ್ಮಣ ಗೆದ್ದಿದ್ದಾರೆ.

ADVERTISEMENT

ಹೊಸ ಮುಖಗಳ ನಡುವೆ ಪೈಪೋಟಿ:

ಇದರೊಂದಿಗೆ, ಬಿಜೆಪಿಯ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ಲಕ್ಷ್ಮಣ ನಡುವೆ ನೇರ ಹಣಾಹಣಿಗೆ ಕಣ ಸಜ್ಜಾದಂತಾಗಿದೆ. ಈ ಚುನಾವಣೆಯಲ್ಲಿ ಇಬ್ಬರು ಹೊಸ ಮುಖಗಳ ನಡುವೆ ಪೈಪೋಟಿ ಕಂಡುಬರಲಿದೆ. ಜೊತೆಗೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಹುರಿಯಾಳು ಯಾರು ಎನ್ನುವ ಹಲವು ದಿನಗಳ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ. ಮುಖ್ಯಮಂತ್ರಿ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂಬಿತ್ಯಾದಿ ಚರ್ಚೆಗಳಿಗೂ ಪೂರ್ಣವಿರಾಮ ನೀಡಿದಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಲಕ್ಷ್ಮಣ ಪಾಲ್ಗೊಂಡಿದ್ದರು. ಅಲ್ಲಿ, ಚುನಾವಣಾ ಕಾರ್ಯತಂತ್ರದ ಕುರಿತು ಚರ್ಚೆಯಾಗಿದೆ. ‘ಪ್ರತಿ ಮತದಾರರ ಮನೆ ಮತ್ತು ಮನಸ್ಸು ತಲುಪಲು ಯೋಜನೆ ತಯಾರಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ’ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಎಂಜಿನಿಯರಿಂಗ್‌ ಹಿನ್ನೆಲೆ:

ಎಂಜಿನಿಯರಿಂಗ್‌ ಶಿಕ್ಷಣದ ಹಾಗೂ ವೃತ್ತಿಯ ಹಿನ್ನೆಲೆಯ ಲಕ್ಷ್ಮಣ, ರಾಜಕಾರಣಕ್ಕೆ ಬರುವುದಕ್ಕೆ ಮುನ್ನ ಜನಪರ ಹೋರಾಟಗಳ ಮೂಲಕ ನಗರದಲ್ಲಿ ಸದ್ದು ಮಾಡಿದವರು–ಸುದ್ದಿಯಾದವರು. ದಾಖಲೆಗಳ ಸಹಿತ ಮಾಹಿತಿ ನೀಡಿ ಅವರು ಹಲವು ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

2005ರಿಂದ ಎಸಿಐಸಿಎಂ (ಪ್ರಜ್ಞಾವಂತ ಮತ್ತು ಕಾಳಜಿಯುಳ್ಳ ನಾಗರಿಕರ ವೇದಿಕೆ) ಎನ್ನುವ ಎನ್‌ಜಿಒ ಸಂಚಾಲಕರಾಗಿ ಹಲವು ಹೋರಾಟಗಳನ್ನು ಮುನ್ನಡೆಸಿದ್ದರು. ಎಚ್‌.ಡಿ. ಕೋಟೆ ತಾಲ್ಲೂಕು ಚಾಮಲಾಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಉಷ್ಣ ವಿದ್ಯುತ್‌ ಸ್ಥಾವರದ ವಿರುದ್ಧ ದೊಡ್ಡ ಚಳವಳಿಯ ಸಾರಥ್ಯ ವಹಿಸಿದ್ದವರಲ್ಲಿ ಪ್ರಮುಖರಾಗಿದ್ದರು. 2001ರಿಂದ 2005ರವರೆಗೆ ಎಂಎಟಿಎಫ್‌ (ಮೈಸೂರು ಅಜೆಂಡಾ ಟಾಸ್ಕ್‌ ಪೋರ್ಸ್‌) ಸದಸ್ಯರಾಗಿದ್ದರು. ನೀರು ಸರಬರಾಜು ಹಾಗೂ ಸ್ವಚ್ಛತೆ ವರ್ಕಿಂಗ್‌ ಗ್ರೂಪ್‌ (ಎಂಎಟಿಎಫ್‌) ಅಧ್ಯಕ್ಷರಾಗಿದ್ದರು.

1998ರಿಂದ 2000ದವರೆಗೆ ಎಂಜಿನಿಯರ್‌ಗಳ ಸಂಸ್ಥೆ ಗೌರವ ಕಾರ್ಯದರ್ಶಿಯಾಗಿದ್ದರು. ಎಂಜಿನಿಯರ್‌ಗಳ ಸಂಸ್ಥೆಯ ಮೈಸೂರು ಸ್ಥಳೀಯ ಕೇಂದ್ರದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಎಂಜಿನಿಯರ್‌ಗಳ ಸಂಸ್ಥೆ ಹಾಗೂ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆಜೀವ ಸದಸ್ಯರಾಗಿದ್ದಾರೆ.

ಏಜೆಂಟ್ ಆಗಿ ಕೆಲಸ: 

1995ರಿಂದ ಕಾಂಗ್ರೆಸ್‌ ಪಕ್ಷದ ಸಕ್ರಿಯ ಸದಸ್ಯರಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಎಚ್.ವಿಶ್ವನಾಥ್, 2023ರ ವಿಧಾನಸಭಾ ಚುನಾವಣೆಯಲ್ಲಿ ವರುಣದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರಿಗೆ ಚುನಾವಣಾ ಏಜೆಂಟ್ ಆಗಿದ್ದರು. 2022ರ ಅಕ್ಟೋಬರ್‌ನಿಂದ ಕೊಡಗು ಜಿಲ್ಲೆಯ ಪ್ರಭಾರಿ. ಸಂಸದ ಪ್ರತಾಪ ಸಿಂಹ ವಿರುದ್ಧ ಸರಣಿ ಪತ್ರಿಕಾಗೋಷ್ಠಿ, ಆಗಾಗ ಪ್ರತಿಭಟನೆ ನಡೆಸುತ್ತಿದ್ದರು. ವಕ್ತಾರರಾಗಿ ಪಕ್ಷದ ನಿಲುವು ಹಾಗೂ ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುತ್ತಿದ್ದರು. ‘ಇದೆಲ್ಲವನ್ನೂ ಪರಿಗಣಿಸಿ ಅವರಿಗೆ ಹೈಕಮಾಂಡ್ ಅವಕಾಶ ಕೊಟ್ಟಿದೆ’ ಎನ್ನುತ್ತಾರೆ ಪಕ್ಷದ ಮುಖಂಡರು.

‘ಕೈ’ ಟಿಕೆಟ್‌ಗೆ ಒಕ್ಕಲಿಗ ಮುಖಂಡರಾದ ಎಂ. ಲಕ್ಷ್ಮಣ, ಬಿ.ಜೆ. ವಿಜಯಕುಮಾರ್, ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಜೊತೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾಲ್ಗೊಂಡಿದ್ದ ಗೋಪಾಲಗೌಡ ಶಾಂತವೇರಿ ಆಸ್ಪತ್ರೆಯ ಡಾ.ಶುಶ್ರುತ್‌ ಗೌಡ, ಮುಡಾ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಆಕಾಂಕ್ಷಿಗಳಾಗಿದ್ದರು. ವೀರಶೈವ–ಲಿಂಗಾಯತ ಸಮಾಜದಿಂದ ಗುರುಪಾದಸ್ವಾಮಿ ಹಾಗೂ ಗುರುಮಲ್ಲೇಶ್, ಕುರುಬ ಸಮಾಜದ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್, ಜೆ.ಜೆ. ಆನಂದ್ ಆಕಾಂಕ್ಷಿಗಳಾಗಿದ್ದರು.

‘ಬಿಜೆಪಿ- ಜೆಡಿಎಸ್ ಮೈತ್ರಿ ಪರಿಣಾಮ, ಒಕ್ಕಲಿಗರ ಮತಗಳನ್ನು ಸೆಳೆದುಕೊಳ್ಳಲು ಆ ಸಮಾಜದ ನಾಯಕನಿಗೆ ಅವಕಾಶ ಕೊಡಲಾಗಿದೆ’ ಎಂದು ವಿಶ್ಲೇಷಿಸಲಾಗುತ್ತಿದೆ.

2008ರಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ, ದಕ್ಷಿಣ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದಿಂದ ಒಟ್ಟು ಮೂರು ಬಾರಿ ಪಕ್ಷೇತರ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲನುಭವಿಸಿದ್ದಾರೆ.

‘ರಾಜಕೀಯ ಹಿನ್ನೆಲೆಯೇ ಇಲ್ಲದಿರುವ ಸಾಮಾನ್ಯ ಕಾರ್ಯಕರ್ತ ನಾನು. ಬೀದಿಯಲ್ಲಿ ನಿಂತು ಹಲವು ಜನಪರ ಹೋರಾಟ ಮಾಡಿದ್ದಂತಹ ಪಕ್ಷದ ನಿಷ್ಠಾವಂತ, ಬಡ–ರೈತ ಕುಟುಂಬದ ಹಿನ್ನೆಲೆಯ ನನಗೆ ಪಕ್ಷ ಟಿಕೆಟ್ ಕೊಟ್ಟಿರುವುದು ಖುಷಿ ತಂದಿದೆ. ಎಲ್ಲರ ನಂಬಿಕೆ ಉಳಿಸಿಕೊಳ್ಳಲು ಹೋರಾಡುತ್ತೇನೆ’ ಎಂದು ಲಕ್ಷ್ಮಣ ಪ್ರತಿಕ್ರಿಯಿಸಿದರು.

‘ಹಿಂದೆಯೂ ಆಕಾಂಕ್ಷಿಯಾಗಿದ್ದೆ. ಈಗ ಪಕ್ಷ ನನಗೆ ನಿರಾಸೆ ಮಾಡಲಿಲ್ಲ. ರಾಜವಂಶಸ್ಥ ಹಾಗೂ ಸಾಮಾನ್ಯ ವ್ಯಕ್ತಿಯ ನಡುವಿನ ಹೋರಾಟದಲ್ಲಿ ಮತದಾರರು ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

ಬಿ.ಜೆ.ವಿಜಯ್‌ಕುಮಾರ್

ಅಭ್ಯರ್ಥಿ ಗೆಲ್ಲಿಸುವ ಗುರಿ: ವಿಜಯ್‌ಕುಮಾರ್

‘ಲಕ್ಷ್ಮಣ ಅವರಿಗೆ ಟಿಕೆಟ್ ದೊರೆತಿದ್ದು ಅವರನ್ನು ಅಭಿನಂದಿಸುತ್ತೇನೆ. ನನ್ನ ಹೆಸರೂ ಶಿಫಾರಸಾಗಿತ್ತು. ಹೈಕಮಾಂಡ್ ತೀರ್ಮಾನಕ್ಕೆ ತಲೆಬಾಗಿ ಅಭ್ಯರ್ಥಿಯ ಗೆಲುವಿಗೆ ಸಾಮೂಹಿಕ ಹೋರಾಟ ನಡೆಸುವುದು ನಮ್ಮ ಗುರಿ’ ಎಂದು ಟಿಕೆಟ್ ಆಕಾಂಕ್ಷಿಯಾಗಿದ್ದ ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ತಿಳಿಸಿದ್ದಾರೆ. ‘ನನಗೆ ಅಧಿಕಾರಕ್ಕಿಂತ ಪಕ್ಷವೇ ತಾಯಿ. ಪಕ್ಷದ ಶಾಶ್ವತ ಕಾವಲುಗಾರನಾಗಿ ಇರುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.