ADVERTISEMENT

ಬೆಳಗಾವಿ ಲೋಕಸಭೆ: ಸ್ಟಾರ್‌ ಪ್ರಚಾರಕರತ್ತ ಬಿಜೆಪಿ–ಕಾಂಗ್ರೆಸ್ ಅಭ್ಯರ್ಥಿಗಳ ಚಿತ್ತ

ತಮ್ಮ ಪಕ್ಷದ ಪರವಾಗಿ ಅಲೆ ಸೃಷ್ಟಿಸಲು ಬಿಜೆಪಿ–ಕಾಂಗ್ರೆಸ್ ಯತ್ನ

ಇಮಾಮ್‌ಹುಸೇನ್‌ ಗೂಡುನವರ
Published 6 ಏಪ್ರಿಲ್ 2024, 5:38 IST
Last Updated 6 ಏಪ್ರಿಲ್ 2024, 5:38 IST
<div class="paragraphs"><p>ಬಿಜೆಪಿ, ಕಾಂಗ್ರೆಸ್</p></div>

ಬಿಜೆಪಿ, ಕಾಂಗ್ರೆಸ್

   

ಬೆಳಗಾವಿ: ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳಲ್ಲಿ ಪ್ರಚಾರ ಚುರುಕುಗೊಳಿಸಿದ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು, ನಿತ್ಯ ಮತದಾರರ ಮನೆಬಾಗಿಲಿಗೇ ಹೋಗುತ್ತಿದ್ದಾರೆ. ಮಹಿಳಾ ಮಂಡಳಗಳು, ಯುವಕ ಮಂಡಳಗಳು ಮತ್ತು ಇತರೆ ಸಂಘ–ಸಂಸ್ಥೆಗಳನ್ನು ಎಡತಾಕುತ್ತಿದ್ದಾರೆ. ಇದರ ಜತೆಗೆ, ತಮ್ಮ ಪಕ್ಷದ ಪರ ಅಲೆ ಸೃಷ್ಟಿಸಲು ಸ್ಟಾರ್‌ ಪ್ರಚಾರಕರಿಗಾಗಿ ಕಾಯುತ್ತಿದ್ದಾರೆ. ಅವರ ಭೇಟಿಯ ದಿನಾಂಕಗಳನ್ನು ಆಧರಿಸಿ ದೊಡ್ಡಮಟ್ಟದ ಸಮಾವೇಶಗಳನ್ನು ಸಂಘಟಿಸಿ, ಮತದಾರರನ್ನು ಸೆಳೆಯಲು ತಂತ್ರ ರೂಪಿಸುತ್ತಿದ್ದಾರೆ.

ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಕಾಂಗ್ರೆಸ್‌ನಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಪುತ್ರ ಮೃಣಾಲ್‌ ಕಣಕ್ಕಿಳಿದಿದ್ದಾರೆ. ಚಿಕ್ಕೋಡಿಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಕಾಂಗ್ರೆಸ್‌ನಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಸ್ಪರ್ಧಿಸಿದ್ದಾರೆ.

ADVERTISEMENT

ಉಭಯ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಮಧ್ಯೆಯೇ ನೇರ ಹಣಾಹಣಿ ಏರ್ಪಟ್ಟಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏ.12ರಿಂದ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆ ಆರಂಭವಾಗುವ ಮುನ್ನವೇ, ಉಭಯ ಪಕ್ಷದವರು ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಜನರು ಸೇರುತ್ತಿಲ್ಲ. ಹಾಗಾಗಿ ಸ್ಟಾರ್‌ ಪ್ರಚಾರಕರತ್ತ ಚಿತ್ತ ಹರಿಸಿದ್ದಾರೆ.

ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ದೊಡ್ಡಮಟ್ಟದ ರ್‍ಯಾಲಿಗಳು ಮತ್ತು ಬಹಿರಂಗ ಸಭೆಗಳನ್ನು ಆಯೋಜಿಸಲು ಯೋಜಿಸುತ್ತಿರುವ ರಾಷ್ಟ್ರೀಯ ಪಕ್ಷಗಳ ನಾಯಕರು, ಸ್ಟಾರ್‌ ಪ್ರಚಾರಕರ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಮರಾಠಿ ಭಾಷಿಕ ಮತದಾರರು ಹೆಚ್ಚಿದ್ದಾರೆ. ಹಾಗಾಗಿ ಮಹಾರಾಷ್ಟ್ರದಿಂದ ಸ್ಟಾರ್ ಪ್ರಚಾರಕರನ್ನು ಆಹ್ವಾನಿಸುವ ಕಸರಸತ್ತುಗಳೂ ನಡೆದಿವೆ.

ನರೇಂದ್ರ ಮೋದಿ ಕರೆ ತರಲು ಯತ್ನ:ಸುಭಾಷ ಪಾಟೀಲ
‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಈಗಾಗಲೇ ಒಮ್ಮೆ ಬೆಳಗಾವಿಗೆ ಬಂದು ಪ್ರಚಾರ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಕರೆಯಿಸಲು ಈಗ ಪ್ರಯತ್ನ ನಡೆಸಿದ್ದೇವೆ. ನಾಮಪತ್ರ ಸಲ್ಲಿಕೆಯಾದ ನಂತರ ಅವರು ಪ್ರಚಾರಕ್ಕೆ ಬರಲಿದ್ದಾರೆ’ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
ಗಾಂಧಿ ಕುಟುಂಬದವರನ್ನು ಸಂಪರ್ಕಿಸುತ್ತಿದ್ದೇವೆ: ಚಿಂಗಳೆ
‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಚಾರಕ್ಕಾಗಿ ಬೆಳಗಾವಿ ಜಿಲ್ಲೆಗೆ ಬರಲು ಒಪ್ಪಿದ್ದಾರೆ. ಇದಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನೂ ಸಂಪರ್ಕಿಸುತ್ತಿದ್ದೇವೆ’ ಎಂದು ಕಾಂಗ್ರೆಸ್‌ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ  ಲಕ್ಷ್ಮಣರಾವ್‌ ಚಿಂಗಳೆ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.