ADVERTISEMENT

ಪಿಎಂ ಏಕಚಕ್ರಾಧಿಪತಿಯೂ ಅಲ್ಲ, ಸಿಎಂ ಮಾಂಡಲೀಕನೂ ಅಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 16:08 IST
Last Updated 15 ಏಪ್ರಿಲ್ 2024, 16:08 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ‘ನಮ್ಮದು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ. ಇಲ್ಲಿ ಪ್ರಧಾನ ಮಂತ್ರಿ ಏಕಚಕ್ರಾಧಿಪತಿಯೂ ಅಲ್ಲ, ಮುಖ್ಯಮಂತ್ರಿ ಮಾಂಡಲೀಕನೂ ಅಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಭಾನುವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ‘ಕೇವಲ 6 ಕೋಟಿ ಜನತೆಯ ಮುಖ್ಯಮಂತ್ರಿ 150 ಕೋಟಿ ಜನತೆಯ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ’ ಎಂದು ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೇ ಹರಿಹಾಯ್ದಿದ್ದರು.

ADVERTISEMENT

ಅದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ನೂರು ಕೋಟಿ ಜನರ ಪ್ರತಿನಿಧಿಯಾಗಿರುವ ಪ್ರಧಾನಿಯವರನ್ನು ಆರು ಕೋಟಿ ಜನರ ಪ್ರತಿನಿಧಿಯಾದ ಮುಖ್ಯಮಂತ್ರಿ ಪ್ರಶ್ನೆ ಮಾಡಬಾರದು ಎಂಬ ನಿಮ್ಮ ಮಾತು ನನ್ನಲ್ಲಿ ಅತ್ಯಾಶ್ಚರ್ಯ ಮಾತ್ರವಲ್ಲ, ಕನಿಕರವನ್ನು ಉಂಟು ಮಾಡಿದೆ. ಇಷ್ಟು ವರ್ಷಗಳ ಕಾಲ ಒಂದು ಪ್ರಾದೇಶಿಕ ಪಕ್ಷವನ್ನು ಮುನ್ನಡೆಸುತ್ತಾ ಬಂದ ನೀವು, ನಿರಂತರವಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿಯವರನ್ನು ಟೀಕಿಸುತ್ತಾ ಬಂದವರು. ಇದೀಗ ಈ ಇಳಿವಯಸ್ಸಿನಲ್ಲಿ ಈ ಬಗೆಯ ಶರಣಾಗತಿಯ ಸ್ಥಿತಿ ಯಾಕೆ ಬಂತು’ ಎಂದೂ ದೇವೇಗೌಡ ಅವರನ್ನು ಪ್ರಶ್ನಿಸಿದ್ದಾರೆ. 

‘ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಇಬ್ಬರೂ ಅವರವರ ಸ್ಥಾನಮಾನದಲ್ಲಿ ಸಮಾನರು. ಎರಡೂ ಪದವಿಗಳು ಸಮಾನವಾದುದು, ವಯಸ್ಸಿನ ಹಿರಿ-ಕಿರಿತನಗಳು ಪದವಿಗಳಿಗೆ ಅನ್ವಯ ಆಗುವುದಿಲ್ಲ. ಅತಿ ಸಣ್ಣ ವಯಸ್ಸಿಗೆ ಪ್ರಧಾನಿಯಾದ ರಾಜೀವ್ ಗಾಂಧಿ ಇದ್ದಾಗಲೂ ಅವರಿಗಿಂತ ಹಿರಿಯರಾದ ಮುಖ್ಯಮಂತ್ರಿಗಳಿದ್ದರು. ಆಗಲೂ ಪರಸ್ಪರ ಟೀಕೆ-ಟಿಪ್ಪಣಿಗಳು ವಿನಿಮಯ ಆಗುತ್ತಿದ್ದವು. ಈ ಹಿಂದಿನ ಪ್ರಧಾನಿಗಳನ್ನು ನೀವು ಯಾವ ಯಾವ ರೀತಿಯಲ್ಲಿ ಪ್ರಶ್ನಿಸಿದ್ದೀರಿ, ದೂರಿದ್ದೀರಿ, ಕೆಣಕಿದ್ದೀರಿ ಎನ್ನುವ ಪಟ್ಟಿಯನ್ನು ನಾನು ಕೊಡಬಲ್ಲೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.