ADVERTISEMENT

ರಾಯಚೂರು: ರಾಧಾಮೋಹನ್ ಎದುರಲ್ಲೇ ಬಿಜೆಪಿ ಕಾರ್ಯಕರ್ತರ ಮಾರಾಮಾರಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ರಾಯಚೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಬಿಜೆಪಿಯ ಎರಡು ಬಣಗಳ ಕಾರ್ಯಕರ್ತರು ಕೈ–ಕೈ ಮಿಲಾಯಿಸಿದರು
ರಾಯಚೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಬಿಜೆಪಿಯ ಎರಡು ಬಣಗಳ ಕಾರ್ಯಕರ್ತರು ಕೈ–ಕೈ ಮಿಲಾಯಿಸಿದರು   

ರಾಯಚೂರು: ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್ ಸಮ್ಮುಖದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಮಾಜಿ ಸಂಸದ, ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ.ವಿ.ನಾಯಕ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.

ಪಕ್ಷದೊಳಗಿನ ಅಸಮಾಧಾನ ಕಡಿಮೆ ಮಾಡಲು ಕರೆದಿದ್ದ ಬಿಜೆಪಿ ಮುಖಂಡರ ಸಭೆಗೆ ಮಾಜಿ ಸಂಸದ ಬಿ.ವಿ.ನಾಯಕ ಅವರ ಬೆಂಬಲಿಗರು ಬಿ.ವಿ.ನಾಯಕ ಪರ ಜೈಕಾರ ಹಾಕುತ್ತ ಬಂದರು. ಅಷ್ಟೇ ಅಲ್ಲ ‘ಗೋ ಬ್ಯಾಕ್ ರಾಜಾ ಅಮರೇಶ್ವರ ನಾಯಕ’ ಘೋಷಣೆ ಕೂಗಿದರು. ಇದು ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಬೆಂಬಲಿಗರನ್ನು ಕೆರಳಿಸಿತು.

ಅಮರೇಶ್ವರ ನಾಯಕ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಭೆಯಲ್ಲಿ ಪರಸ್ಪರ ವಾಗ್ವಾದ ನಡೆಯಿತು. ಕಾರ್ಯಕರ್ತರು ತಮ್ಮ ನಾಯಕರ ಪರ ಘೋಷಣೆ ಕೂಗಿದ್ದರಿಂದ ಪರಸ್ಪರ ತಳ್ಳಾಟ ನೂಕಾಟ ನಡೆಯಿತು. ಸಭೆಯಲ್ಲಿ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಯಿತು.

ADVERTISEMENT

ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಂದಾದ ನಗರಸಭೆ ಸದಸ್ಯ ಎನ್.ಕೆ.ನಾಗರಾಜ ಅವರ ಮೇಲೆ ಹಲ್ಲೆ ನಡೆಸಲಾಯಿತು ಎಂದು ಕಾರ್ಯಕರ್ತರು ತಿಳಿಸಿದರು. ಗೊಂದಲದ ವಾತಾವರಣದಿಂದಾಗಿ ಅನೇಕರು ಸಭೆಯಿಂದ ಹೊರ ನಡೆದರು.

ಬಿ.ವಿ.ನಾಯಕ ಸ್ಥಳಕ್ಕೆ ಬಂದ ನಂತರ ಪರಿಸ್ಥಿತಿ ತಿಳಿಗೊಂಡಿತು. ಸಭೆಯಿಂದ ಹೊರಗೆ ಹೋದವರು ಮರಳಿ ಬರಲಿಲ್ಲ. ಬಿ.ವಿ.ನಾಯಕರಿಗೆ ಆರಂಭದಲ್ಲಿ ಟಿಕೆಟ್ ಭರವಸೆ ಕೊಟ್ಟು ಕೊನೆ ಕ್ಷಣದಲ್ಲಿ ನಿರಾಕರಿಸಿದ್ದರಿಂದ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ಈ ಘಟನೆಯಿಂದ ರಾಜ್ಯ ನಾಯಕರು ಮುಜುಗರಕ್ಕೆ ಒಳಗಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.