ADVERTISEMENT

ಲೋಕಸಭೆ ಚುನಾವಣೆ: ಮಾಧುಸ್ವಾಮಿ ಮನ ಒಲಿಕೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 23:40 IST
Last Updated 22 ಮಾರ್ಚ್ 2024, 23:40 IST
ಮಾಧುಸ್ವಾಮಿ
ಮಾಧುಸ್ವಾಮಿ    

ತುಮಕೂರು: ಲೋಕಸಭೆ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮನವೊಲಿಸುವಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸಫಲರಾಗಿದ್ದಾರೆ.

ತುರುವೇಕೆರೆ ತಾಲ್ಲೂಕಿನ ಮಾಜಿ ಶಾಸಕ ಮಸಾಲ ಜಯರಾಮ್ ತೋಟದ ಮನೆಗೆ ಶುಕ್ರವಾರ ಮಾಧುಸ್ವಾಮಿ ಅವರನ್ನು ಕರೆಸಿಕೊಂಡು ಒಂದು ಗಂಟೆಗೂ ಹೆಚ್ಚು ಸಮಯ ಚರ್ಚಿಸಿದರು. ಬಿಜೆಪಿ ತೊರೆಯದಂತೆ ಮನವಿ ಮಾಡಿದ್ದು, ‘ಪಕ್ಷ ಬಿಡುವುದಿಲ್ಲ’ ಎಂದು ಮಾಧುಸ್ವಾಮಿ ಅಭಯ ನೀಡಿದ್ದಾರೆ.

ಸಭೆ ನಂತರ ಮಾತನಾಡಿದ ಯಡಿಯೂರಪ್ಪ, ‘ಟಿಕೆಟ್ ಸಿಗದೆ ಮಾಧುಸ್ವಾಮಿ ಅಸಮಾಧಾನಗೊಂಡಿದ್ದು ಗೊತ್ತಾಯಿತು. ಈಗ ಎಲ್ಲ ವಿಚಾರ ಮನದಟ್ಟು ಮಾಡಿಕೊಟ್ಟಿದ್ದೇನೆ. ಅಭ್ಯರ್ಥಿಗಳ ಬಗ್ಗೆ ವರಿಷ್ಠರು ನಿರ್ಧರಿಸಿದ್ದಾರೆ. ಅದರಲ್ಲಿ ನನ್ನ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಪಕ್ಷ ಬಿಡದಂತೆ ಮನವೊಲಿಸಿದ್ದೇನೆ. ಅವರು ಪಕ್ಷದಲ್ಲೇ ಮುಂದುವರಿಯುವ ಭರವಸೆ ನೀಡಿದ್ದಾರೆ. ಸೋಮಣ್ಣ ಬೆಂಬಲಿಸುವ ವಿಚಾರ ಅವರಿಗೆ ಬಿಟ್ಟಿದ್ದು. ಈ ಬಗ್ಗೆ ಚರ್ಚೆ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಮಾಧುಸ್ವಾಮಿ ಮಾತನಾಡಿ, ‘ಬಿಜೆಪಿ ತೊರೆಯಲು ನಿರ್ಧರಿಸಿದ್ದೆ. ಆದರೆ, ಪಕ್ಷ ಬಿಡದಂತೆ ಯಡಿಯೂರಪ್ಪ ಕೇಳಿಕೊಂಡಿದ್ದು, ಹಿರಿಯರ ಮಾತಿಗೆ ಬೆಲೆಕೊಟ್ಟು ಪಕ್ಷದಲ್ಲೇ ಉಳಿಯಲು ನಿರ್ಧರಿಸಿದ್ದೇನೆ. ಲೋಕಸಭೆ ಚುನಾವಣೆ ಬಗ್ಗೆ ಏನೂ ಹೇಳಬೇಡಿ ಎಂದಿದ್ದೇನೆ. ಸೋಮಣ್ಣ ಅವರನ್ನು ಬೆಂಬಲಿಸಬೇಕೆ? ಬೇಡವೆ? ಎಂಬ ಬಗ್ಗೆ ನಿರ್ಧರಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮುಖಂಡರಾದ ಬೈರತಿ ಬಸವರಾಜ್, ಗೋಪಾಲಯ್ಯ ಇತರ ಮುಖಂಡರು ಸಂಧಾನ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.