ADVERTISEMENT

ಮಂಡ್ಯ ಜಿಲ್ಲೆಗೆ ಬರಬೇಡಿ: ಎಚ್‌ಡಿಕೆ ವಿರುದ್ಧ ಚಲುವರಾಯಸ್ವಾಮಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 15:35 IST
Last Updated 26 ಮಾರ್ಚ್ 2024, 15:35 IST
<div class="paragraphs"><p>ಎಚ್‌.ಡಿ. ಕುಮಾರಸ್ವಾಮಿ ಹಾಗೂ ಎನ್. ಚಲುವರಾಯಸ್ವಾಮಿ</p></div>

ಎಚ್‌.ಡಿ. ಕುಮಾರಸ್ವಾಮಿ ಹಾಗೂ ಎನ್. ಚಲುವರಾಯಸ್ವಾಮಿ

   

ಮಂಡ್ಯ: ‘ನಮ್ಮ ಜಿಲ್ಲೆಗೆ ಕೆಟ್ಟ ದೃಷ್ಟಿ ಬೀಳುವುದು ಬೇಡ, ನಾವು, ನಮ್ಮ ಜನ ಏನೋ ಮಾಡಿಕೊಳ್ಳುತ್ತೇವೆ. ನೀವು ಪ್ರಧಾನಿಯಾಗಿ, ಇನ್ನೊಮ್ಮೆ ಸಿಎಂ ಆಗಿ, ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ. ಆದರೆ ನಮ್ಮ ಜಿಲ್ಲೆಗೆ ಮಾತ್ರ ಬರಬೇಡಿ’ ಎಂದು ಕೃಷಿಸಚಿವ ಎನ್‌.ಚಲುವರಾಯಸ್ವಾಮಿ ಪರೋಕ್ಷವಾಗಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಮಂಗಳವಾರ ವ್ಯಂಗ್ಯವಾಡಿದರು.

ಸುದ್ದಿಗಾರ‌ರೊಂದಿಗೆ ಮಾತನಾಡಿ, ‘ಸಿ.ಎಸ್‌.ಪುಟ್ಟರಾಜು ಅವರಿಗೆ ಟಿಕೆಟ್‌ ಕೊಡುವುದಾಗಿ ನಂಬಿಸಿ ಈಗ ತಾವೇ ಅಭ್ಯರ್ಥಿಯಾಗಿ ಬರುತ್ತಿದ್ದಾರೆ. ಇದು, ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂತಿದೆ. ನೀವು ಏನಾದರೂ ಮಾಡಿಕೊಳ್ಳಿ, ನಮ್ಮ ಜಿಲ್ಲೆಯ ತಂಟೆಗೆ ಮಾತ್ರ ಬರಬೇಡಿ’ ಎಂದರು.

ADVERTISEMENT

‘ಚಿಕ್ಕಬಳ್ಳಾಪುರಕ್ಕೆ ಹೋಗಿ, ತುಮಕೂರು ಮುಗಿಸಿ ಈಗ ಮಂಡ್ಯಕ್ಕೆ ಬರುತ್ತಿದ್ದಾರೆ. ಪಾಪ, ಪುಟ್ಟರಾಜು ಕೈಯಲ್ಲಿ ಸಭೆ ಮಾಡಿಸಿದರು, ಅಯೋಧ್ಯೆ ರಾಮಮಂದಿರ ಸೇರಿ ಹಲವು ದೇವಾಲಯಗಳನ್ನು ಸುತ್ತಿಸಿದರು. ಈಗ ತಾನೇ ಅಭ್ಯರ್ಥಿ ಅಂದರೆ ಪುಟ್ಟರಾಜು ಕತೆ ಏನಾಗಬೇಕು? ನಾನು ಕಾಂಗ್ರೆಸ್‌ ಸೇರಿ ಬಚಾವ್‌ ಆದೆ’ ಎಂದರು.

‘ಕಳೆದ ಚುನಾವಣೆಯಲ್ಲಿ ಸುಮಲತಾ ಅವರನ್ನು ನಿಂದಿಸಿದರು. ಆದರೆ ಈಗ ಅಕ್ಕ ಎನ್ನುತ್ತಿದ್ದಾರೆ. ಆಗಲೇ ಈ ಮಾತು ಹೇಳಿದ್ದರೆ ಅಂಬರೀಷ್‌ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು. ನಮ್ಮ ಅಭ್ಯರ್ಥಿ ಸ್ಟಾರ್‌ ಚಂದ್ರು ಅವರ ಬಗ್ಗೆ ಕ್ಷೇತ್ರದಾದ್ಯಂತ ಉತ್ತಮ ಅಭಿಪ್ರಾಯವಿದ್ದು, ನಮ್ಮ ವಿರುದ್ಧ ಯಾರೇ ಅಭ್ಯರ್ಥಿಯಾದರೂ ನಮಗೆ ಚಿಂತೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.