ADVERTISEMENT

ಬೆಂಬಲಕ್ಕೆ ಸಂಖ್ಯಾಬಲವಿಲ್ಲ, ಪಕ್ಷ ಗೆದ್ದಿರುವ 135 ಶಾಸಕರ ಸಂಖ್ಯೆ ನನ್ನದು: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 15 ಮೇ 2023, 13:02 IST
Last Updated 15 ಮೇ 2023, 13:02 IST
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ನನ್ನ ವೈಯಕ್ತಿಕ ಬೆಂಬಲಕ್ಕೆ ಹೆಚ್ಚಿನ ಶಾಸಕರ ಸಂಖ್ಯಾಬಲ ಇಲ್ಲದಿರಬಹುದು. ಆದರೆ, ಪಕ್ಷ ಗೆದ್ದಿರುವ 135 ಶಾಸಕರ ಸಂಖ್ಯೆ ನನ್ನ ಸಂಖ್ಯೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ಚರ್ಚಿಸಲು ಪಕ್ಷದ ವರಿಷ್ಠರ ಆಹ್ವಾನದ ಮೇರೆಗೆ ದೆಹಲಿಗೆ ಹೊರಡುವ ಮೊದಲು ಕುಟುಂಬ ಸದಸ್ಯರ ಜತೆ ಶಿವಕುಮಾರ್‌ ತುಮಕೂರು ಜಿಲ್ಲೆ ತಿಪಟೂರಿನ ನೊಣವಿನಕೆರೆ ಸೋಮೆಕಟ್ಟೆಯ ಕಾಡುಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ತಮ್ಮ ಗುರು ಅಜ್ಜಯ್ಯನ ಆಶೀರ್ವಾದ ಪಡೆದರು.

ಅದಕ್ಕೂ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪಕ್ಷದ ಅಧ್ಯಕ್ಷನಾಗಿ ಆಯ್ಕೆ ನನ್ನನ್ನು ಮಾಡಿದಾಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ಭರವಸೆ ನೀಡಿದ್ದೆ. ಕೊಟ್ಟ ಮಾತನ್ನು ಈಡೇರಿಸಿದ್ದೇನೆ’ ಎಂದರು.

ADVERTISEMENT

‘ಇಂದು ನನ್ನ ಜನ್ಮದಿನ. ನನ್ನ ಖಾಸಗಿ ಕಾರ್ಯಕ್ರಮದಲ್ಲಿ ನನ್ನ ಗುರುಗಳನ್ನು ಭೇಟಿ ಮಾಡಲಿದ್ದೇನೆ. ನಂತರ ದೆಹಲಿಗೆ ಪ್ರಯಾಣ ಬೆಳೆಸಬೇಕಿದೆ’ ಎಂದರು.

‘ಭಾನುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ 135 ಶಾಸಕರೂ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮುಖ್ಯಮಂತ್ರಿ ಆಯ್ಕೆ ತೀರ್ಮಾನವನ್ನು ‌ಪಕ್ಷದ ಅಧ್ಯಕ್ಷರ ತೀರ್ಮಾನಕ್ಕೆ ಬಿಡಲು ಎಲ್ಲ ಶಾಸಕರು ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ. ನನಗೆ ಯಾರ ನಂಬರ್ ಬಗ್ಗೆ ಮಾತನಾಡುವ ಶಕ್ತಿ ಇಲ್ಲ. ಡಬಲ್ ಇಂಜಿನ್ ಸರ್ಕಾರ ಹಾಗೂ ಭ್ರಷ್ಟಾಚಾರ ವಿರುದ್ಧ ನನ್ನ ಅಧ್ಯಕ್ಷತೆಯಲ್ಲಿ ಪಕ್ಷದ 135 ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ’ ಎಂದರು.

‘ಕೆಲವು ಕಡೆಗಳಲ್ಲಿ ಸ್ಥಳೀಯವಾಗಿ ಉತ್ತಮವಾಗಿ ಸಂಘಟನೆ ಮಾಡಿದ್ದರೆ ನಮ್ಮ ಸಂಖ್ಯೆ ಇನ್ನೂ ಸ್ವಲ್ಪ ಹೆಚ್ಚಾಗುತ್ತಿತ್ತು. ಆದರೂ ಫಲಿತಾಂಶ ತೃಪ್ತಿ ತಂದಿದೆ. ನಮ್ಮ ವರಿಷ್ಠರು ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆದಿದ್ದಾರೆ. ನಾನು ಹೋಗುತ್ತಿದ್ದೇನೆ. ನಾನು ಹೋಗುವುದು ಸ್ವಲ್ಪ ತಡವಾಗಲಿದೆ’ ಎಂದೂ ಹೇಳಿದರು.

ಬೇರೆಯವರ ಹೇಳಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ನಾನು ಬೇರೆಯವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಏಕಾಂಗಿ. ನಾನು ಧೈರ್ಯವಾಗಿ ಪಕ್ಷವನ್ನು ಮುನ್ನಡೆಸಿದ್ದು, ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಏನೆಲ್ಲಾ ಆಗಿದೆ ಎಂದು ನಾನು ಬಹಿರಂಗಪಡಿಸುವುದಿಲ್ಲ. ಅದರ ಬಗ್ಗೆ ಭವಿಷ್ಯದಲ್ಲಿ ಮಾತನಾಡುತ್ತೇನೆ. ನಾವು ಮೈತ್ರಿ ಸರ್ಕಾರ ಕಳೆದುಕೊಂಡಾಗ ಶಾಸಕರು ಪಕ್ಷ ಬಿಟ್ಟು ಹೋದಾಗ ನಾವು ಧೃತಿಗೆಡಲಿಲ್ಲ. ಧೈರ್ಯವಾಗಿ ಜವಾಬ್ದಾರಿ ಹೊತ್ತು, ಕೆಲಸ ಮಾಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ನನಗೆ ಧೈರ್ಯ ತುಂಬಿದ್ದು, ಈ ವಿಚಾರವನ್ನು ಅವರಿಗೆ ಬಿಡುತ್ತೇನೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.