ADVERTISEMENT

ಬಳ್ಳಾರಿ: ಪರಿಶಿಷ್ಟ ಜಾತಿ ಮಹಿಳೆಯ ಮನೆಗೆ ಯದುವೀರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಮೇ 2024, 9:07 IST
Last Updated 4 ಮೇ 2024, 9:07 IST
<div class="paragraphs"><p>ಬಿಜೆಪಿ ಪರ ಪ್ರಚಾರಕ್ಕೆಂದು ಶನಿವಾರ ಬಳ್ಳಾರಿ ನಗರಕ್ಕೆ ಬಂದಿದ್ದ ಮೈಸೂರು ಕ್ಷೇತ್ರದ ಅಭ್ಯರ್ಥಿ ಯದುವೀರ ಕೃಷ್ಣ ದತ್ತ ಒಡೆಯರ್‌ ಅವರು ಗೋನಾಳ್‌ ವಾರ್ಡ್‌ನ ಪರಿಶಿಷ್ಟ ಜಾತಿ ಮಹಿಳೆ ದುರ್ಗಮ್ಮ ಮನೆಗೆ ಭೇಟಿ ನೀಡಿದರು. ಈ ವೇಳೆ ಅವರಿಗೆ ಬಿ.ಆರ್‌ ಅಂಬೇಡ್ಕರ್‌ ಅವರ ಚಿತ್ರವನ್ನು ಸ್ಮರಣಿಕೆಯಾಗಿ ನೀಡಲಾಯಿತು.</p></div>

ಬಿಜೆಪಿ ಪರ ಪ್ರಚಾರಕ್ಕೆಂದು ಶನಿವಾರ ಬಳ್ಳಾರಿ ನಗರಕ್ಕೆ ಬಂದಿದ್ದ ಮೈಸೂರು ಕ್ಷೇತ್ರದ ಅಭ್ಯರ್ಥಿ ಯದುವೀರ ಕೃಷ್ಣ ದತ್ತ ಒಡೆಯರ್‌ ಅವರು ಗೋನಾಳ್‌ ವಾರ್ಡ್‌ನ ಪರಿಶಿಷ್ಟ ಜಾತಿ ಮಹಿಳೆ ದುರ್ಗಮ್ಮ ಮನೆಗೆ ಭೇಟಿ ನೀಡಿದರು. ಈ ವೇಳೆ ಅವರಿಗೆ ಬಿ.ಆರ್‌ ಅಂಬೇಡ್ಕರ್‌ ಅವರ ಚಿತ್ರವನ್ನು ಸ್ಮರಣಿಕೆಯಾಗಿ ನೀಡಲಾಯಿತು.

   

ಚಿತ್ರ: ಮುರುಳಿಕಾಂತ ರಾವ್‌

ಬಳ್ಳಾರಿ: ಬಿಜೆಪಿ ಪರ ಪ್ರಚಾರಕ್ಕೆಂದು ಶನಿವಾರ ಬಳ್ಳಾರಿಗೆ ಬಂದಿದ್ದ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಒಡೆಯರ್‌ ಅವರು, ನಗರದ ಗೋನಾಳು ವಾರ್ಡ್‌ನ ಪರಿಶಿಷ್ಟ ಜಾತಿಯ ಮಹಿಳೆ ದುರ್ಗಮ್ಮ ಅವರ ನಿವಾಸಕ್ಕೆ ಭೇಟಿ ನೀಡಿದರು.

ADVERTISEMENT

ಗೋನಾಳು ವಾರ್ಡ್‌ಗೆ ಬಂದ ಯದುವೀರ್‌ ಮೊದಲಿಗೆ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಹೂವಿನ ಮಾಲೆ ಸಮರ್ಪಿಸಿದರು. ನಂತರ ದುರ್ಗಮ್ಮ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಅವರಿಗೆ ಎಳನೀರು, ನೀರು ಕೊಟ್ಟು ಸತ್ಕರಿಸಲಾಯಿತು. ನಂತರ ಸನ್ಮಾನಿಸಲಾಯಿತು. ಡಾ. ಬಿ.ಆರ್‌ ಅಂಬೇಡ್ಕರ್‌ ಅವರ ಚಿತ್ರವನ್ನು ಸ್ಮರಣಿಕೆಯಾಗಿ ನೀಡಲಾಯಿತು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್‌, ‘ಹಂಪಿ ವಿರೂಪಾಕ್ಷನ ದರ್ಶನಕ್ಕಾಗಿ ನಾನು ಹಲವು ಬಾರಿ ಇಲ್ಲಿಗೆ ಬಂದಿದ್ದೇನೆ. ನನ್ನ ಶಾಲಾ ದಿನಗಳಲ್ಲೂ ಬಳ್ಳಾರಿಗೆ ಭೇಟಿ ನೀಡಿದ್ದೆನೆ. ಇಂದು ಶ್ರೀರಾಮುಲು ಅವರ ಪರ ಪ್ರಚಾರಕ್ಕಾಗಿ ಬಂದಿದ್ದೇನೆ. ಗೋನಾಳು ಗ್ರಾಮದ ದಲಿತರ ಮನೆಗೆ ಭೇಟಿ ನೀಡಿ, ಅವರು ನೀಡಿದ ಎಳನೀರು ಕುಡಿದಿದ್ದೇನೆ. ನಾವೆಲ್ಲರೂ ಅವರ ಪರ ಇದ್ದೇವೆ ಎಂಬ ಸಂದೇಶ ನೀಡಿದ್ದೇನೆ. ಇದು ನನಗೆ ಅತ್ಯಂತ ಸಂತೋಷದ ವಿಷಯ’ ಎಂದು ಹೇಳಿದರು.

‘ಸಂವಿಧಾನಕ್ಕೂ, ಅಂಬೇಡ್ಕರ್‌ ಅವರಿಗೂ, ಕನ್ನಡ ನಾಡಿಗೂ ನಿಕಟವಾದ ಸಂಬಂಧವಿದೆ. ಸಂವಿಧಾನ ರಚನೆಯ ಸಂದರ್ಭದಲ್ಲಿ ಅಂಬೇಡ್ಕರ್‌ ಅವರು ಮೈಸೂರಿನ ಪ್ರಜಾಪ್ರತಿನಿಧಿ ವ್ಯವಸ್ಥೆ, ಮಿಲ್ಲರ್‌ ವರದಿಯನ್ನು ಉಲ್ಲೇಖಿಸಿದ್ದರು‘ ಎಂದರು.

‘ಮಹಾರಾಜರ ಕಾಲದಲ್ಲಿ ಮೈಸೂರಿನಲ್ಲಿ ಮೀಸಲಾತಿ ತರಲಾಗಿತ್ತು. ನಾವು ಎಲ್ಲ ವರ್ಗದ ಜತೆಜತೆಗೆ ಬಂದವರು. ಆಗ ನಾವೆಲ್ಲರೂ ಮೈಸೂರು ರಾಜ್ಯದವರಾಗಿ ಹೆಜ್ಜೆ ಹಾಕಿದ್ದೆವು. ಈಗ ನಾವೆಲ್ಲರೂ ಒಂದಾಗಿ, ಕನ್ನಡಿಗರಾಗಿ, ಭಾರತೀಯರಾಗಿ ಒಟ್ಟಿಗೆ ಹೋಗಬೇಕಿದೆ’ ಎಂದು ತಿಳಿಸಿದರು.

‘ಮೈಸೂರು ಸೇರಿದಂತೆ ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ‘ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ತುಂಬಾ ಖುಷಿಯಾಗಿದೆ: ದುರ್ಗಮ್ಮ

ಪರಿಶಿಷ್ಟ ಜಾತಿ ಮಹಿಳೆ ದುರ್ಗಮ್ಮ ಮಾತನಾಡಿ, ಮೈಸೂರಿನ ರಾಜವಂಶಸ್ಥರು ಮನೆಗೆ ಭೇಟಿ ನೀಡಿದ್ದ ಬಗ್ಗೆ ತೀವ್ರ ಸಂತಸ ವ್ಯಕ್ತಪಡಿಸಿದರು. ’ಮೈಸೂರು ರಾಜರು ಮನೆಗೆ ಬಂದಿದ್ದರು. ನಮ್ಮ ಮನೆ ನೋಡಿದರು. ಮೈಸೂರಿಗೆ ಹೋದರೂ ಅವರು ಕಾಣಲು ಸಿಗುವುದಿಲ್ಲ. ಅಂತವರು ನಮ್ಮ ಮನೆಗೆ ಬಂದಿದ್ದು ಖುಷಿ ವಿಚಾರ. ಈ ಬಾರಿ ನಡೆಯಲಿರುವ ಮೈಸೂರು ದಸರಾಕ್ಕೆ ಆಹ್ವಾನಿಸುವುದಾಗಿ ತಿಳಿಸಿದರು. ಅವರು ನಮ್ಮ ಮನೆಗೆ ಬರುತ್ತಾರೆ ಎಂದು ಕನಸಿನಲ್ಲಿಯೂ ನೆನೆಸಿರಲಿಲ್ಲ. ನಮ್ಮ ಮನೆ ಮಂದಿಯ ಬಗ್ಗೆ ವಿಚಾರಿಸಿದರು‘ ಎಂದರು.

ಗೋನಾಳು ವಾರ್ಡ್‌ಗೆ ಭೇಟಿ ನೀಡುವುದಕ್ಕೂ ಮೊದಲು ಯದುವೀರ್‌ ಅವರು ನಗರದ ಜೈನ್‌ ಮಾರ್ಕೆಟ್‌ನಲ್ಲಿ ರಾಜಸ್ಥಾನಿ ಸಮಾಜದ ಮುಖಂಡರ ಜೊತೆ ಸಭೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.