ADVERTISEMENT

ಅಂಗವಿಕಲ ನೌಕರರಿಗೆ ಚುನಾವಣಾ ಕರ್ತವ್ಯ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ಮಂಗಳೂರು: ಅಂಗವೈಕಲ್ಯ ಇರುವ ಸರ್ಕಾರಿ ನೌಕರರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಬೇಕು ಎಂಬ ಭಾರತೀಯ ಚುನಾವಣಾ ಆಯೋಗದ ಪತ್ರ ಇದ್ದರೂ, ಇದನ್ನು ಮೀರಿ ಹಲವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅಂಗವಿಕಲರು ಆರೋಪಿಸಿದ್ದಾರೆ.

ವೈದ್ಯರು, ಶುಶ್ರೂಷಕರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದಂತೆ ಅಂಗವಿಕಲರಿಗೂ ಈ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಕೋರಿ, ನ್ಯಾಯಲಯದ ಮೊರೆ ಹೋಗಲು ಜಿಲ್ಲಾ ಮಟ್ಟದ ಅಂಗವಿಕಲ ಸರ್ಕಾರಿ ನೌಕರರ ಸಂಘಗಳು ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ.

‘ಚುನಾವಣಾ ಆಯೋಗದ ಪತ್ರ, ಅಂಗವಿಕಲ ಹಕ್ಕುಗಳ ಕಾಯ್ದೆ 2016 ಅನ್ನು ಉಲ್ಲಂಘಿಸಿ, ರಾಜ್ಯದಾದ್ಯಂತ ಸಾವಿರಾರು ಅಂಗವಿಕಲ ಸರ್ಕಾರಿ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಂಗವಿಕಲರಿಗೆ ಕರ್ತವ್ಯದಿಂದ ತಪ್ಪಿಸಿಕೊಳ್ಳುವ ಉದ್ದೇಶ ಇಲ್ಲ. ಆದರೆ, ಮತಗಟ್ಟೆಗಳಲ್ಲಿ ಅಂಗವಿಕಲ ಸ್ನೇಹಿ ಸೌಲಭ್ಯ ಇಲ್ಲದಿದ್ದರೆ, ಅವರು ಕಾರ್ಯನಿರ್ವಹಿಸುವುದು ಕಷ್ಟವಾಗುತ್ತದೆ’ ಎನ್ನುತ್ತಾರೆ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಅಧ್ಯಕ್ಷ ಇಂದ್ರೇಶ್ ಆರ್.

ADVERTISEMENT

‘ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಿಕೊಟ್ಟ ಪರಿಣಾಮ ಹಿಂದಿನ ಚುನಾವಣೆಯಲ್ಲಿ ಅಂಗವಿಕಲ ಸರ್ಕಾರಿ ನೌಕರರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ದೊರೆತಿತ್ತು’ ಎನ್ನುತ್ತಾರೆ ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ.

‘ಅಂಗವಿಕಲರಿಗೂ ಸಮಾನ ಅವಕಾಶ ದೊರೆಯಬೇಕು, ಚುನಾವಣಾ ಕರ್ತವ್ಯ ಅವರಿಗೆ ವಿಭಿನ್ನ ಅನುಭವ ನೀಡುತ್ತದೆ. ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಅಂಗವಿಕಲರು ನನಗೆ ಪತ್ರ ಬರೆಯಬಹುದು’ ಎಂದು ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯುಕ್ತ ದಾಸ್ ಸೂರ್ಯವಂಶಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.