ADVERTISEMENT

ಆಗ ಟೀಕೆ; ಈಗ ಕಣಿಕರ ಏಕೆ: ಮಾಲೀಕಯ್ಯಗೆ ಶಾಸಕಿ ಕನ್ನೀಜ್‌ ಫಾತಿಮಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 12:14 IST
Last Updated 9 ಏಪ್ರಿಲ್ 2019, 12:14 IST
ಕನ್ನೀಜ್‌ ಫಾತಿಮಾ
ಕನ್ನೀಜ್‌ ಫಾತಿಮಾ   

ಕಲಬುರ್ಗಿ: ‘ಕಣ್ಣು ಕಾಣದವರು, ಕಿವಿ ಕೇಳದವರನ್ನು ಸಚಿವರನ್ನಾಗಿ ಮಾಡಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ ಅವರು ಖಮರುಲ್‌ ಇಸ್ಲಾಂ ಸಚಿವರಾಗಿದ್ದಾಗ ಟೀಕಿಸಿದ್ದರು. ಈಗೇಕೆ ಕಣಿಕರ ಪಡುತ್ತಿದ್ದಾರೆ’ ಎಂದು ಖಮರುಲ್‌ ಇಸ್ಲಾಂ ಅವರ ಪತ್ನಿ, ಶಾಸಕ ಕನ್ನೀಜ್‌ ಫಾತಿಮಾ ಪ್ರಶ್ನಿಸಿದರು.

ಮಂಗಳವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,‘ಸಾವು ದೈವಿಚ್ಛೆ.ಸಾವಿಗೆ ಯಾರನ್ನೂ ಹೊಣೆ ಮಾಡಲು ಆಗದು. ಆದರೂ, ಖಮರುಲ್‌ ಸಾವಿಗೆ ಖರ್ಗೆ ಕಾರಣ ಎಂದು ಹೇಳುವುದು ಸರಿಯಲ್ಲ’ ಎಂದರು.

‘ಖಮರುಲ್‌ ಅವರನ್ನು ಮಂತ್ರಿ ಸ್ಥಾನದಿಂದ ತೆಗೆಯುವಂತೆ ಆಗ ಶಾಸಕರಾಗಿದ್ದ ಡಾ.ಉಮೇಶ ಜಾಧವ ಪಕ್ಷಕ್ಕೆ ಪತ್ರ ಬರೆದಿದ್ದರು. ಈಗೇಕೆ ಅವರಿಗೆ ನಮ್ಮವರ ಮೇಲೆ ಪ್ರೀತಿ ಉಕ್ಕುತ್ತಿದೆ’ ಎಂದೂ ಅವರು ಪ್ರಶ್ನಿಸಿದರು.

ADVERTISEMENT

‘ನಮ್ಮ ಕ್ಷೇತ್ರದಲ್ಲಿ ನಾಲ್ಕು ತಾಂಡಾಗಳಿದ್ದು, ಚುನಾವಣೆಯಲ್ಲಿ ಪ್ರಚಾರಕ್ಕೆ ಕರೆದರೂ ಉಮೇಶ ಜಾಧವ ಬರಲಿಲ್ಲ’ ಎಂದು ಶಾಸಕಿಯ ಸಂಬಂಧಿ ಆದಿಲ್‌ ದೂರಿದರು.

ಮಿಲ್ಲಿಕೌನ್ಸಿಲ್‌ಗೆ ದೂರು

‘ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಮ್ಮದ್‌ ಅಸಗರ ಚುಲಬುಲ್‌ ನನ್ನ ಮತ್ತು ಖಮರುಲ್‌ ಸಾಬರ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಸಾಮಾಜಿಕ ತಾಲತಾಣಗಳಲ್ಲಿ ಹರಿಬಿಡುತ್ತಿದ್ದರು. ಇದರಿಂದ ಕೆರಳಿದ ಕಾರ್ಯಕರ್ತರು ಅವರನ್ನು ಪ್ರಶ್ನಿಸಿದ್ದಾರೆ ಅಷ್ಟೇ. ಅಭಿವೃದ್ಧಿ ವಿಷಯದಲ್ಲಿ ಟೀಕಿಸಲಿ. ವೈಯಕ್ತಿಕ ಟೀಕೆ ಬೇಡ’ ಎಂದು ಕನ್ನೀಜ್‌ ಫಾತಿಮಾ ಹೇಳಿದರು.

‘ನನ್ನ ಚುನಾವಣೆಯಲ್ಲಿಯೂ ವಿರೋಧ ಮಾಡಿದ್ದರು. ಈಗ ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ತೊಂದರೆ ನೀಡುವ ಉದ್ದೇಶದಿಂದ ವೈಯಕ್ತಿಕ ಟೀಕೆಯಲ್ಲಿ ತೊಡಗಿದ್ದಾರೆ. ಮಿಲ್ಲಿ ಕೌನ್ಸಿಲ್‌ನ ಜಿಲ್ಲಾ ಘಟಕದ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾತನಾಡಿಸಿ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಹೇಳಿಸಿದ್ದರು. ಮರುದಿನ ಅದಕ್ಕೆ ಸ್ಪಷ್ಟನೆ ನೀಡಿದರು. ಈ ಪ್ರಕರಣದ ಬಗ್ಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿಯು ಮಿಲ್ಲಿಕೌನ್ಸಿಲ್‌ನ ಕೇಂದ್ರ ಸಮಿತಿಗೆ ದೂರು ಸಹ ನೀಡಿದೆ’ ಎಂದರು.

‘ಕಳೆದ ಬಾರಿ ಖರ್ಗೆ ಅವರಿಗೆ ನಮ್ಮ ಕ್ಷೇತ್ರದಲ್ಲಿ 27,500 ಮತಗಳ ಲೀಡ್‌ ಬಂದಿತ್ತು. ಈ ಬಾರಿ ಜೆಡಿಎಸ್‌ ಸಹ ನಮ್ಮನ್ನು ಬೆಂಬಲಿಸುತ್ತಿರುವುದರಿಂದ ಲೀಡ್‌ ಪ್ರಮಾಣ ಇನ್ನೂ ಹೆಚ್ಚಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ವಕ್ತಾರ ಭೀಮರೆಡ್ಡಿ ಪಾಟೀಲ ಕುರಕುಂದಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.