ADVERTISEMENT

1987ರಲ್ಲೇ ಇಮೇಲ್‌ ಬಳಸಿದ್ದ ಮೋದಿ!

ಸಂದರ್ಶನದಲ್ಲಿ ಪ್ರಧಾನಿ ಹೇಳಿದ್ದಕ್ಕೆ ರಾಜಕೀಯ ವಿರೋಧಿಗಳಿಂದ ಲೇವಡಿ l ಸಾಮಾಜಿಕ ಜಾಲತಾಣಗಳಲ್ಲೂ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 13 ಮೇ 2019, 19:37 IST
Last Updated 13 ಮೇ 2019, 19:37 IST
ಭಟಿಂಡಾದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಚಾರ ಸಮಾವೇಶದ ವೇಳೆ ಶಿರೋಮಣಿ ಅಕಾಲಿ ದಳದ ಮುಖಂಡ ಪ್ರಕಾಶ್‌ ಸಿಂಗ್‌ ಬಾದಲ್‌ ಅವರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದ ಪ್ರಧಾನಿ ನರೇಂದ್ರ ಮೋದಿ ಪಿಟಿಐ ಚಿತ್ರ
ಭಟಿಂಡಾದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಚಾರ ಸಮಾವೇಶದ ವೇಳೆ ಶಿರೋಮಣಿ ಅಕಾಲಿ ದಳದ ಮುಖಂಡ ಪ್ರಕಾಶ್‌ ಸಿಂಗ್‌ ಬಾದಲ್‌ ಅವರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದ ಪ್ರಧಾನಿ ನರೇಂದ್ರ ಮೋದಿ ಪಿಟಿಐ ಚಿತ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ನ್ಯೂಸ್ ನೇಷನ್‌’ ಸುದ್ದಿವಾಹಿನಿಗೆ ಇತ್ತೀಚೆಗೆ ನೀಡಿದ್ದ ಸಂದರ್ಶನ ಹೊಸದೊಂದು ವಿವಾದ ಸೃಷ್ಟಿಸಿದೆ.

1987–88ರಲ್ಲಿಯೇ ತಾವು ಡಿಜಿಟಲ್‌ ಕ್ಯಾಮೆರಾ ಮತ್ತು ಇಮೇಲ್‌ ಬಳಸಿದ್ದಾಗಿ ಸಂದರ್ಶನದಲ್ಲಿ ಮೋದಿ ಹೇಳಿದ್ದರು. ಆದರೆ, ಡಿಜಿಟಲ್‌ ಕ್ಯಾಮೆರಾ ಮತ್ತು ಇಮೇಲ್‌ ಬಳಕೆಗೆ ಬಂದಿದ್ದೇ ಮೋದಿ ಅವರು ಹೇಳಿದ ಇಸವಿಯಿಂದ ಹಲವು ವರ್ಷಗಳ ಬಳಿಕ. ಇದು ಸಾಮಾಜಿಕ ಜಾಲ ತಾಣಗಳಲ್ಲಿ ಲೇವಡಿಗೆ ಕಾರಣವಾಗಿದೆ.

‘1988ರಲ್ಲಿಯೇ ವ್ಯಕ್ತಿಯೊಬ್ಬರು ಭಾರತದಲ್ಲಿ ಇಂಟರ್‌ನೆಟ್‌ ಬಳಸಿದ್ದರು ಎಂಬುದು ಆಶ್ಚರ್ಯಕರವಲ್ಲವೇ? ಭಾರತದಲ್ಲಿ 1995ರಲ್ಲಿ ಇಂಟರ್‌ನೆಟ್‌ ಸೇವೆ ಪರಿಚಯಿಸಲಾಯಿತು. ನಮಗೆಲ್ಲ ಇಂಟರ್‌ನೆಟ್‌ ಸೌಲಭ್ಯ ಸಿಕ್ಕಿದ್ದೇ 1998ರಲ್ಲಿ’ ಎಂದು ಕಾಂಗ್ರೆಸ್ ವಕ್ತಾರ ಪವನ್‌ ಖೇರ ಹೇಳಿದ್ದಾರೆ.

ADVERTISEMENT

ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿರುವ ಬಿ.ಕೆ. ಸಿಂಗಾಲ್‌ ಅವರೂ ಟ್ವೀಟ್‌ ಮಾಡಿ ಭಾರತದಲ್ಲಿ 1995ರ ಆಗಸ್ಟ್‌ 14ರಂದು ಇಂಟರ್‌ ಸೇವೆ ಲಭ್ಯವಾಯಿತು ಎಂದಿದ್ದಾರೆ.

‘ಈ ವಿಚಾರವನ್ನು ಸ್ವಾತಂತ್ರ್ಯೋತ್ಸವ ದಿನದಂದು ಘೋಷಿಸಲಾಗಿತ್ತು. ಆ ಬಳಿಕ ನಾವು ಹಿಂದಿರುಗಿ ನೋಡಿದ್ದೇ ಇಲ್ಲ. 1947ರ ಬಳಿಕ ಇಂಟರ್‌ನೆಟ್‌ ಸೇವೆಯ ಲಭ್ಯತೆ ಎರಡನೇ ಸ್ವಾತಂತ್ರ್ಯ ಎಂದೇ ಬಣ್ಣಿಸಲಾಗಿತ್ತು. ಆಗ ಸೇವೆ ಬಹಳ ಕೆಟ್ಟದಾಗಿತ್ತು ಎಂಬುದೂ ನಿಜ’ ಎಂದು ಸಿಂಗಾಲ್‌ ಹೇಳಿದ್ದಾರೆ. 1995ರಲ್ಲಿ ವಿದೇಶ ಸಂಚಾರ ನಿಗಮ ಲಿ (ವಿಎಸ್‌ಎನ್‌ಎಲ್‌) ಮಾತ್ರ ಇಂಟರ್‌ನೆಟ್‌ ಸೇವೆ ಒದಗಿಸುತ್ತಿತ್ತು. ಆಗ ವಿಎಸ್‌ಎನ್‌ಎಲ್‌ಗೆ ಸಿಂಗಾಲ್‌ ಅವರು ಅಧ್ಯಕ್ಷರಾಗಿದ್ದರು.

‘ಪ್ರಧಾನಿ ಮೋದಿಯವರ ಭ್ರಾಂತಿಯ ಮಾತುಗಳು, ಹಸಿ ಹಸಿ ಸುಳ್ಳುಗಳ ದೀರ್ಘ ಸರಣಿ ಮುಂದುವರಿದಿದೆ. ಪ್ರಧಾನಿ ಹುದ್ದೆಯ ಉಲ್ಲೇಖ ಇಲ್ಲ ಎಂದಾದಲ್ಲಿ ಇವೆಲ್ಲವನ್ನೂ ಒಳ್ಳೆಯ ಹಾಸ್ಯ ಎಂದು ಆಸ್ವಾದಿಸಬಹುದು’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.

1980ರ ದಶಕದ ಕೊನೆಯ ಹೊತ್ತಿಗೇ ಮೋದಿ ಅವರು ಇಮೇಲ್‌ಗೆ ಡಿಜಿಟಲ್‌ ಫೋಟೊವನ್ನು ಲಗತ್ತಿಸಿ ಕಳುಹಿಸಿದ್ದರು ಎಂಬುದು ಟ್ವಿಟರ್‌ನಲ್ಲಿ ಭಾರಿ ವ್ಯಂಗ್ಯ ಮತ್ತು ಲೇವಡಿಗೆ ಕಾರಣವಾಗಿದೆ.

ಮುಂದುವರಿದ ವಾಕ್ಸಮರ: ಬಾಲಾಕೋಟ್‌ ಮೇಲೆ ದಾಳಿ ನಡೆಸುವಾಗ ಮೋಡ ಇದ್ದರೆ ರೇಡಾರ್‌ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರ ಬಗ್ಗೆ ವಾಕ್ಸಮರವೂ ಮುಂದುವರಿದಿದೆ.

‘70 ವರ್ಷಗಳಲ್ಲಿ ಭಾರತದ ಸೇನೆಯ ಸಾಮರ್ಥ್ಯವನ್ನು ಯಾವುದೇ ಪ್ರಧಾನಿ ಗೇಲಿ ಮಾಡಿರಲಿಲ್ಲ. ಆದರೆ, ಮೋದಿ ಅವರು ಸೇನೆಯ ವೃತ್ತಿಪರತೆಗಿಂತ ತಮ್ಮ ‘ಸಾಮಾನ್ಯ ತಿಳಿವಳಿಕೆ’ಯೇ (ರಾ ವಿಸ್ಡಮ್‌) ಮೇಲು ಎಂದಿದ್ದಾರೆ’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ಆದರೆ, ‘ಬಾಲಾಕೋಟ್‌ ದಾಳಿಗೆ ಸಂಬಂಧಿಸಿದ ಯಾವ ಮಾಹಿತಿ ಬಹಿರಂಗಪಡಿಸಬಾರದೋ ಅವನ್ನು ಮೋದಿ ಅವರು ಬಹಿರಂಗಪಡಿಸಿಲ್ಲ’ ಎಂದು ಬಿಜೆಪಿ ಮುಖಂಡ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

***

‘1987 ಅಥವಾ 88ರಲ್ಲಿ ಡಿಜಿಟಲ್‌ ಕ್ಯಾಮೆರಾ ಬಳಸಿದ ಮೊದಲ ವ್ಯಕ್ತಿ ತಾವಾಗಿರಬಹುದು. ಆ ದಿನಗಳಲ್ಲಿ ಕೆಲವೇ ಮಂದಿಗೆ ಮಾತ್ರ ಇಮೇಲ್‌ ಸೌಲಭ್ಯ ಇತ್ತು. 1987 ಅಥವಾ 88ನೇ ಇಸವಿ ಇರಬೇಕು. ಎಲ್‌.ಕೆ. ಅಡ್ವಾಣಿ ಅವರ ಕಾರ್ಯಕ್ರಮ ಇತ್ತು. ನಾನು ಡಿಜಿಟಲ್‌ ಕ್ಯಾಮೆರಾದಲ್ಲಿ ಅವರ ಫೋಟೊ ತೆಗೆದು ಅದನ್ನು ಇಮೇಲ್‌ ಮೂಲಕ ದೆಹಲಿಗೆ ಕಳುಹಿಸಿದ್ದೆ. ತಮ್ಮ ಬಣ್ಣದ ಫೋಟೊ ಅಷ್ಟು ಬೇಗ ದೆಹಲಿಗೆ ಹೇಗೆ ತಲುಪಿತು ಎಂದು ಅಡ್ವಾಣಿ ಅವರಿಗೆ ಆಶ್ಚರ್ಯವಾಗಿತ್ತು’ ಎಂದು ಮೋದಿ ಹೇಳಿದ್ದರು.

1992ರಲ್ಲಿ ‘ಫೈಲ್‌’ ಲಗತ್ತಿಸಿ ಮೊದಲ ಇಮೇಲ್‌ ಮಾಡಿದವರು ಸಂಶೋಧಕ ನಥಾನಿಯೆಲ್‌ ಬಾರೆನ್‌ಸ್ಟೈನ್‌.

‘ಇದು ಮೋದಿ ಬಗೆಗಿನ ಜೋಕ್‌ ಅಲ್ಲ. ಪೆದ್ದುತನವನ್ನೇ ಫ್ಯಾಷನ್‌ ಆಗಿಸಿಕೊಂಡಿರುವ ಮೋದಿ ಬೆಂಬಲಿಗರಾಗಿರುವ ‘ವಿದ್ಯಾವಂತ’ ವರ್ಗದ ಬಗೆಗಿನ ಜೋಕ್ ಇದು’ ಎಂದು ಅಂಕಣಕಾರ ನಿಸಿಮ್‌ ಮನ್ನಥುಕರನ್‌ ಹೇಳಿದ್ದಾರೆ.

ನಮ್ಮ ನೆಚ್ಚಿನ ಪ್ರಧಾನಿ ಮೋದಿ ಅವರು ದೂರದೃಷ್ಟಿಯ ವಿಜ್ಞಾನಿ. ಭಾರತಕ್ಕೆ ಇಂಟರ್‌ನೆಟ್‌ ಬರುವ ಮೊದಲೇ ಅವರು ಇಮೇಲ್‌ ಕಳುಹಿಸಿದ್ದಾರೆ. ಕೊಳಕು ನಾಲೆಯಿಂದ ಅನಿಲ ಉತ್ಪಾದಿಸಿ ಚಹಾ ತಯಾರಿಸಿದ್ದಾರೆ. ಸೈಕಲ್‌ ಟ್ಯೂಬ್‌ನಲ್ಲಿ ಅನಿಲ ಸಾಗಾಟ ಮಾಡಿದ್ದಾರೆ. ...ವಾಯುದಾಳಿಗಾಗಿ ರೇಡಾರ್‌ಗಳನ್ನು ಮುಚ್ಚುವ ಮೋಡಗಳ ಶೋಧಕ್ಕೆ ನೊಬೆಲ್‌ ಪುರಸ್ಕೃತರು!

ಹೇಮಂತ್‌ ಕೃಷ್ಣೇಗೌಡ

ಭಾರತದಲ್ಲಿ ಎಲ್ಲರಿಗಿಂತ ಮೊದಲು ಇಮೇಲ್‌ ಮತ್ತು ಡಿಜಿಟಲ್‌ ಕ್ಯಾಮೆರಾ ಬಳಸಿದ್ದಾಗಿ ಮೋದಿ ಅವರೇ ಹೇಳಿದ್ದಾರೆ. ಗುಜರಾತ್‌ ಮುಖ್ಯಮಂತ್ರಿಯಾಗುವ ಮೊದಲೇ 45 ದೇಶಗಳಿಗೆ (ಅಮೆರಿಕದ 23 ರಾಜ್ಯಗಳು ಸೇರಿ) ಭೇಟಿ ಕೊಟ್ಟಿದ್ದಾಗಿಯೂ ಹೇಳಿದ್ದಾರೆ. ಆದರೆ, ಶೂ ಅಥವಾ ಮಾವಿನ ಹಣ್ಣು ಕೊಳ್ಳಲು ಮಾತ್ರ ಅವರಲ್ಲಿ ಹಣ ಇರಲಿಲ್ಲ

ಶಮಾ ಮೊಹಮ್ಮದ್‌

ಮೊದಲ ಡಿಜಿಟಲ್‌ ಕ್ಯಾಮೆರಾ 1989ರಲ್ಲಿ ಜಪಾನ್‌ನಲ್ಲಿ ಮತ್ತು 1990ರಲ್ಲಿ ಅಮೆರಿಕದಲ್ಲಿ ಮಾರಾಟವಾಯಿತು. ಆದರೆ ಮೋದಿ ಅವರಲ್ಲಿ 1987–88ರಲ್ಲಿಯೇ ಡಿಜಿಟಲ್‌ ಕ್ಯಾಮೆರಾ ಇತ್ತು.

ಸರಳ್‌ ಪಟೇಲ್‌

1995ರಲ್ಲಿ ವಿಎಸ್‌ಎನ್‌ಎಲ್‌ ಭಾರತದಲ್ಲಿ ಅಂತರ್ಜಾಲ ಸೇವೆ ಆರಂಭ ಮಾಡಿತು. ಆದರೆ ಮೋದಿ ಅವರು 1987–88ರಲ್ಲಿಯೇ ಇಮೇಲ್‌ ಕಳುಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.