ADVERTISEMENT

ಎಣಿಕೆಗೆ ಮುನ್ನ ಎನ್‌ಡಿಎ ಶಕ್ತಿಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 21 ಮೇ 2019, 19:21 IST
Last Updated 21 ಮೇ 2019, 19:21 IST
ಎನ್‌ಡಿಎ ನಾಯಕರ ಸಭೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಬೃಹತ್‌ ಹೂಮಾಲೆ ಅರ್ಪಿಸಲಾಯಿತು ಪಿಟಿಐ ಚಿತ್ರ
ಎನ್‌ಡಿಎ ನಾಯಕರ ಸಭೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಬೃಹತ್‌ ಹೂಮಾಲೆ ಅರ್ಪಿಸಲಾಯಿತು ಪಿಟಿಐ ಚಿತ್ರ   

ನವದೆಹಲಿ: ಎನ್‌ಡಿಎಯಲ್ಲಿ ಇರುವ ಮಿತ್ರಪಕ್ಷಗಳನ್ನು ಮುಂದೆಯೂ ಜತೆಗೆ ಒಯ್ಯುವ ಇಂಗಿತವನ್ನು ಬಿಜೆಪಿ ವ್ಯಕ್ತಪಡಿಸಿದೆ. ಲೋಕಸಭೆ ಚುನಾವಣೆಯ ಮತ ಎಣಿಕೆಗೆ ಎರಡು ದಿನ ಮೊದಲು (ಮಂಗಳವಾರ) ದೆಹಲಿಯಲ್ಲಿ ಬಿಜೆಪಿ ಮುಖಂಡರು ನಡೆಸಿದ ‘ಧನ್ಯವಾದ ಸಮರ್ಪಣೆ‍’ ಸಭೆಯಲ್ಲಿ ಎನ್‌ಡಿಎ ಮುಖಂಡರು ಭಾಗಿಯಾದರು.

ಇದಕ್ಕೂ ಮೊದಲು, ಕೇಂದ್ರ ಮಂತ್ರಿ ಪರಿಷತ್‌ನಲ್ಲಿರುವ ಬಿಜೆಪಿಯ ಎಲ್ಲ ಸದಸ್ಯರ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ನಡೆಸಿದ್ದರು. ಕೃತಜ್ಞತೆ ಸಲ್ಲಿಕೆಯೇ ಈ ಸಭೆಯ ಉದ್ದೇಶವೂ ಆಗಿತ್ತು. ಈ ಸಭೆಯ ಬಳಿಕ, ಎನ್‌ಡಿಎ ಅಂಗ ಪಕ್ಷಗಳ ಮುಖಂಡರಿಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಔತಣ ಏರ್ಪಡಿಸಿದ್ದರು. ಈ ಔತಣ ಕೂಟದಲ್ಲಿ ಮೋದಿ ಅವರೂ ಇದ್ದರು.

‘ಹಲವು ಚುನಾವಣೆಗಳನ್ನು ನೋಡಿದ್ದೇನೆ. ಆದರೆ, ಈ ಬಾರಿಯ ಚುನಾವಣೆ ರಾಜಕಾರಣವನ್ನು ಮೀರಿದ್ದಾಗಿತ್ತು’ ಎಂದು ಸಚಿವರ ಜತೆಗಿನ ಸಭೆಯಲ್ಲಿ ಮೋದಿ ಹೇಳಿದ್ದಾರೆ ಎನ್ನಲಾಗಿದೆ. ಈ ಬಾರಿಯ ಚುನಾವಣೆ ಪ್ರಚಾರ ಒಂದು ತೀರ್ಥಯಾತ್ರೆಯಂತಿತ್ತು ಎಂದಿದ್ದಾರೆ.

ADVERTISEMENT

ಸಚಿವರ ತಂಡವನ್ನು ಶಾ ಅವರು ‘ಟೀಮ್‌ ಮೋದಿ ಸರ್ಕಾರ್’ ಎಂದು ಬಣ್ಣಿಸಿದರು. ಐದು ವರ್ಷಗಳಲ್ಲಿ ಎಲ್ಲರೂ ಶ್ರಮವಹಿಸಿ ದುಡಿದಿದ್ದಾರೆ ಎಂದು ಹೊಗಳಿದರು.

ಬಿಹಾರ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌, ಶಿವಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ, ಅಕಾಲಿ ದಳದ ಪ್ರಕಾಶ್‌ ಸಿಂಗ್‌ ಬಾದಲ್‌ ಮತ್ತು ಸುಖಬೀರ್‌ ಸಿಂಗ್‌ ಬಾದಲ್‌, ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ, ಎಲ್‌ಜೆಪಿ ಮುಖ್ಯಸ್ಥ ರಾಮ್‌ವಿಲಾಸ್‌ ಪಾಸ್ವಾನ್‌, ಅಪ್ನಾ ದಳದ ಅನುಪ್ರಿಯಾ ಪಟೇಲ್‌, ಆರ್‌ಪಿಐ ಮುಖ್ಯಸ್ಥ ರಾಮದಾಸ ಆಠವಲೆ ಮುಂತಾದವರು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.