ADVERTISEMENT

ಚೌಕೀದಾರ್ ಪದ ಬಳಕೆ ನಿರ್ಬಂಧಿಸಿ: ಚುನಾವಣಾ ಆಯೋಗಕ್ಕೆ ಸಿಐಟಿಯು ಪತ್ರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 20:24 IST
Last Updated 20 ಮಾರ್ಚ್ 2019, 20:24 IST
ನಮೋ ಆ್ಯಪ್‌ನಲ್ಲಿ ‘ಮೈ ಭಿ ಚೌಕೀದಾರ್’ ಅಭಿಯಾನದ ಟಿಶರ್ಟ್, ಟೊಪ್ಪಿ ಮತ್ತು ಬ್ಯಾಡ್ಜ್‌ಗಳು ಮಾರಾಟಕ್ಕಿವೆ
ನಮೋ ಆ್ಯಪ್‌ನಲ್ಲಿ ‘ಮೈ ಭಿ ಚೌಕೀದಾರ್’ ಅಭಿಯಾನದ ಟಿಶರ್ಟ್, ಟೊಪ್ಪಿ ಮತ್ತು ಬ್ಯಾಡ್ಜ್‌ಗಳು ಮಾರಾಟಕ್ಕಿವೆ   

ನವದೆಹಲಿ:‘ಚೌಕೀದಾರ್ (ಕಾವಲು ಗಾರ) ಎಂಬ ಪದವನ್ನು ಚುನಾವಣಾ ಪ್ರಚಾರಕ್ಕೆ ಬಳಸದಂತೆ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿ’ ಎಂದು ಸಿಐಟಿಯು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

‘ಚುನಾವಣಾ ನೀತಿ ಸಂಹಿತೆ ಅಡಿ ತಕ್ಷಣವೇ ಆದೇಶ ಹೊರಡಿಸಿ’ ಎಂದು ಸಿಐಟಿಯು ಉಪಾಧ್ಯಕ್ಷ ಜೆ.ಎ.ಮಜುಂದಾರ್ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

‘ರಾಜಕೀಯ ಪಕ್ಷಗಳು, ಪ್ರಧಾನಿ ಸೇರಿದಂತೆ ಪ್ರಮುಖ ನಾಯಕರು ತಮ್ಮ ಭಾಷಣಗಳಲ್ಲಿ ‘ಚೌಕೀದಾರ್’ ಎಂಬ ಪದವನ್ನು ಪದೇ ಪದೇ ಬಳಸುತ್ತಿದ್ದಾರೆ. ಇದರಿಂದ ಚೌಕೀದಾರ್ ಎಂಬ ಹುದ್ದೆ ಅತ್ಯಂತ ದೊಡ್ಡದು ಎಂಬ ಭ್ರಮೆ ಮೂಡುತ್ತಿದೆ. ಆದರೆ ದೇಶದ ಬಹುತೇಕ ಚೌಕೀದಾರರು ತಮ್ಮ ಮಾಲೀಕರ ಅಡಿ ನಲುಗುತ್ತಿದ್ದಾರೆ’ ಎಂದು ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ADVERTISEMENT

‘ಚೌಕೀದಾರರು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯಿಂದ ನಜ್ಜುಗುಜ್ಜಾಗಿದ್ದಾರೆ. ಅವರಿಗೆ ಸಾಮಾಜಿಕ ಭದ್ರತೆ ಹಾಗೂ ಕನಿಷ್ಠ ವೇತನ ಇಲ್ಲ. ಚೌಕೀದಾರೀ ಕಾಯ್ದೆ ಅಡಿ ‘ಚೌಕೀದಾರ್’ ಎಂಬ ಪದವನ್ನು ಅಧಿಕೃತಗೊಳಿಸಲಾಗಿದೆ. ರಾಜಕೀಯ ಉದ್ದೇಶಕ್ಕೆ ಈ ಪದ ಬಳಸುವುದರಿಂದ ಆ ಕೆಲಸ ಮಾಡುವವರಿಗೆ ನೋವಾಗುತ್ತದೆ ಮತ್ತು ಅಪಮಾನವಾಗುತ್ತದೆ. ಅಲ್ಲದೆ ರಾಜಕೀಯ ಪಕ್ಷಗಳು ಈ ಪದವನ್ನು ಬಳಸುತ್ತಿರುವ ರೀತಿ ಜನರ ಹಾದಿ ತಪ್ಪಿಸುವಂತಿದೆ. ಹೀಗಾಗಿ ಚುನಾವಣಾ ಉದ್ದೇಶಕ್ಕೆ ಈ ಪದವನ್ನು ಬಳಸದಂತೆ ತಕ್ಷಣವೇ ನಿರ್ದೇಶನ ನೀಡಿ’ ಎಂದು ಅವರು ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ‘ದೇಶದ ಚೌಕೀದಾರ’ ಎಂದು ಕರೆದುಕೊಳ್ಳುತ್ತಾರೆ. ರಫೇಲ್‌ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಹೇಳಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ‘ಚೌಕೀದಾರ್ ಹೀ ಚೋರ್‌ ಹೈ (ಕಾವಲುಗಾರನೇ ಕಳ್ಳ)’ ಎಂಬ ಘೋಷಣೆ ಬಳಸುತ್ತಿದ್ದಾರೆ.

ರಾಹುಲ್ ಅವರ ಈ ಆರೋಪಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ವಾರ ‘ಮೈ ಭಿ ಚೌಕೀದಾರ್’ ಎಂದ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.