ADVERTISEMENT

ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 10:31 IST
Last Updated 18 ಏಪ್ರಿಲ್ 2019, 10:31 IST
   

ಕಾರವಾರ: ‘ಈ ಬಾರಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಕಳೆದ ಬಾರಿ ಚಾಯ್ ವಾಲಾ ಅಂತ ಹೇಳಿದರು. ಈ ಬಾರಿ ಚೌಕಿದಾರ್ ಎನ್ನುತ್ತಿದ್ದಾರೆ. ಬಿಜೆಪಿಯವರು ಯುವಕರನ್ನು ಹಾದಿ ತಪ್ಪಿಸಿ ಬೀದಿಯಲ್ಲಿ ನಿಲ್ಲಿಸಿ ತಮ್ಮ ಬೇಳೆ ಬೇಯಿಸಿಕೊಂಡರು’ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

ಕುಮಟಾದಲ್ಲಿ ಗುರುವಾರ ಮೈತ್ರಿ ಕೂಟದ ಅಭ್ಯರ್ಥಿ ಆನಂದ ಅಸ್ನೋಟಿಕರ್ ಪರ ಮತಯಾಚನೆ ಮಾಡಿ ಮಾತನಾಡಿದರು.

‘ಮೋದಿ ಮುಖ ನೋಡಿ ಮತ ನೀಡಿ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅವರು ಈ ಜಿಲ್ಲೆಗೆ, ರಾಜ್ಯಕ್ಕೆ ಏನು ಕೊಟ್ಟಿದ್ದಾರೆ? ಈ ಜಿಲ್ಲೆಯ ಬುದ್ಧಿವಂತ ಮತದಾರರು ಬಿಜೆಪಿಯ ಅಭ್ಯರ್ಥಿಯನ್ನು ಇಷ್ಟು ವರ್ಷ ಹೇಗೆ ಆಯ್ಕೆ ಮಾಡಿದೀರಿ? ನಿಮ್ಮ ಕಷ್ಟಗಳಿಗೆ ಹೇಗೆ ಸ್ಪಂದಿಸಿದಾರೆ? ಯಾವತ್ತಾದರೂ ಪ್ರಶ್ನೆ ಮಾಡಿದೀರಾ’ಎಂದು ಪ್ರಚಾರ ಸಭೆಯಲ್ಲಿ ಭಾಗವಹಿಸಿದವರನ್ನು ಕೇಳಿದರು.

ADVERTISEMENT

‘ಅರಣ್ಯ ಅತಿಕ್ರಮಣಕಾರರಿಗೆ ಹಕ್ಕುಪತ್ರ ಸಮಸ್ಯೆ ನಿವಾರಣೆಗೆ ಜಿಲ್ಲೆಗೆ ಬರಲು ಬಿಜೆಪಿ ನಾಯಕರು ಬಿಡಲೇ ಇಲ್ಲ. ಸಮ್ಮಿಶ್ರ ಸರ್ಕಾರವನ್ನು ತೆಗೆಯಲು ಹೊರಟ ಪುಣ್ಯಾತ್ಮರು ಸರ್ಕಾರ ನಡೆಸಲು ಬಿಡಲಿಲ್ಲ. ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಲೋಕಸಭೆಯಲ್ಲಿ ಮಾಡಬೇಕು. ಈ ಬಗ್ಗೆ ಸಂಸದ ಅನಂತಕುಮಾರ ಹೆಗಡೆ ಯಾವತ್ತಾದರೂ ಪ್ರಶ್ನೆ ಮಾಡಿದಾರಾ? ಕೀಳುಮಟ್ಟದ ಅನಾಗರಿಕ ಮಾತುಗಳನ್ನು ಆಡುವ ಮೂಲಕ ನಿಮ್ಮ ಮತಕ್ಕೆ ಯಾವ ರೀತಿ ಗೌರವಯುತವಾಗಿ ನಡೆದುಕೊಂಡಿದ್ದಾರೆ’ಎಂದು ಪ್ರಶ್ನಿಸಿದರು.

ಗ್ರಾಮ ವಾಸ್ತವ್ಯ: ‘ನನ್ನ ಆರೋಗ್ಯದ ಸ್ಥಿತಿ ಏನೇ ಇರಲಿ, ಮುಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ವಾಸ್ತವ್ಯ ಮಾಡಿ ಸಮಸ್ಯೆ ಪರಿಹಾರ ಮಾಡುತ್ತೇನೆ. ಈ ಸರ್ಕಾರ ಜನರದ್ದು. ನಿಮ್ಮ ಮನೆ ಮುಂದೆ ಬಂದು ಸ್ಪಂದಿಸಲಿದೆ’ಎಂದು ಭರವಸೆ ನೀಡಿದರು.

ಲೂಟಿ ಮಾಡಿದ ಹಣ: ಶಿರಸಿಯಲ್ಲಿ ಬಿಜೆಪಿ ಮುಖಂಡರ ಮನೆಯಲ್ಲಿ ರೂ. 82 ಲಕ್ಷ ಜಪ್ತಿ ಮಾಡಿಕೊಂಡ ಪ್ರಕರಣ ಸಂಬಂಧ ಮಾತನಾಡಿದ ಅವರು, 'ಕೇಂದ್ರದಲ್ಲಿ ಮಂತ್ರಿಯಾಗಿ ಅನಂತಕುಮಾರ ಲೂಟಿ ಮಾಡಿದ್ದಾರೆ. ನಿಮ್ಮನ್ನು ಹಣ ನೀಡಿ ಖರೀದಿ ಮಾಡಲು ಮುಂದಾಗಿದ್ದಾರೆ. ಈಗ ಅವರಿಗೆ ಮತ ತರಲು ಅವರ ಬಳಿ ಯುವಕರಿಲ್ಲ' ಎಂದು ಟೀಕಿಸಿದರು.

ಇದಕ್ಕೂ ಮೊದಲು ಕೊಂಕಣ ಎಜುಕೇಶನ್ ಟ್ರಸ್ಟ್ ನ ಮೈದಾನದ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ‘18ರ ನಂತರ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕೇಳುವಂಥ ಸ್ಥಿತಿ ಬರಲಿದೆ ಎಂದು ಬಿಜೆಪಿಯವರು ಟೀಕಿಸುತ್ತಿದ್ದಾರೆ. ಟ್ರೋಲ್ ಮಾಡಿ ಅವಹೇಳನ ಮಾಡುತ್ತಿದ್ದಾರೆ. ಅವನು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾನೆ. ಅದೇ ರೀತಿ, ಈಗ ಆನಂದ್ ಎಲ್ಲಿದ್ದೀಯಪ್ಪಾ’ಎಂದು ಹೇಳುತ್ತಿದ್ದಾರೆ.

‘ಚುನಾವಣೆ ಮುಗಿದ ಬಳಿಕ ಟೀಕಾಕಾರರು ಎಲ್ಲಿರ್ತಾರೆ ನೋಡಬೇಕು. ಏ.23ರ ನಂತರ ಅನಂತಕುಮಾರ ಹೆಗಡೆ ಎಲ್ಲಿದ್ದೀಯಪ್ಪಾ ಎಂದು ಕೇಳಬೇಕಾಗುತ್ತದೆ’ಎಂದು ಟಾಂಗ್ ನೀಡಿದ್ರು.

‘ಮಾಧ್ಯಮಗಳಲ್ಲಿ ಕೇವಲ ಸುಮಲತಾ, ಮಂಡ್ಯವನ್ನು ಮಾತ್ರ ತೋರಿಸುತ್ತಿದ್ದಾರೆ. ಹೀಗಾಗಿ ಜನರ ಮನಸ್ಸಿನಿಂದ ನರೇಂದ್ರ ಮೋದಿ ಕಳೆದುಹೋಗಿದ್ದಾರೆ. ಬಿಜೆಪಿಯವರು ಮೋದಿ ಫೋಟೋ ಇಟ್ಟುಕೊಂಡು ಮತ ಕೇಳಲು ಹೋಗಬೇಕು. ಕಳೆದೆರಡು ತಿಂಗಳಿನಿಂದ ನರೇಂದ್ರ ಮೋದಿಯನ್ನೇ ಮಾಧ್ಯಮಗಳು ಮರೆಸಿದ್ದಾರೆ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.