ADVERTISEMENT

ಮೊದಲ ಹಂತದ ಚುನಾವಣೆ: ಮತಯಂತ್ರ ಲೋಪದ ಅಧ್ವಾನ

ಹಲವರ ಹೆಸರು ನಾಪತ್ತೆ * ಬಾಂಬ್‌ ಸ್ಫೋಟ, ಘರ್ಷಣೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 19:23 IST
Last Updated 11 ಏಪ್ರಿಲ್ 2019, 19:23 IST
ಉತ್ತರಪ್ರದೇಶದ ನೊಯಿಡಾದ ಗೌತಮ ಬುದ್ಧನಗರದ ಮತಗಟ್ಟೆಯೊಂದರ ಬಳಿ ವಿತರಿಸಲಾಗುತ್ತಿದ್ದ ‘ನಮೋ ಫುಡ್‌’ ಉಪಹಾರ ಪೊಟ್ಟಣಗಳನ್ನು ಪೊಲೀಸರು ವಶಪಡಿಸಿಕೊಂಡರು –ಪಿಟಿಐ ಚಿತ್ರ
ಉತ್ತರಪ್ರದೇಶದ ನೊಯಿಡಾದ ಗೌತಮ ಬುದ್ಧನಗರದ ಮತಗಟ್ಟೆಯೊಂದರ ಬಳಿ ವಿತರಿಸಲಾಗುತ್ತಿದ್ದ ‘ನಮೋ ಫುಡ್‌’ ಉಪಹಾರ ಪೊಟ್ಟಣಗಳನ್ನು ಪೊಲೀಸರು ವಶಪಡಿಸಿಕೊಂಡರು –ಪಿಟಿಐ ಚಿತ್ರ   

ನವದೆಹಲಿ:ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನವು ಬಾಂಬ್‌ ಸ್ಫೋಟ, ಘರ್ಷಣೆ–ಹಿಂಸಾ
ಚಾರ, ಮತಯಂತ್ರಗಳಲ್ಲಿ ದೋಷ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರ ಆಕ್ರೋಶಕ್ಕೆ ಸಾಕ್ಷಿಯಾಯಿತು.

ಲೋಕಸಭೆ ಜತೆಗೆ ವಿಧಾನಸಭೆಗೂ ಮತದಾನ ನಡೆದ ಆಂಧ್ರಪ್ರದೇಶದಲ್ಲಿ ಹಿಂಸಾಚಾರದ 12 ಪ್ರಕರಣಗಳು ವರದಿಯಾಗಿವೆ.ಮತದಾನದ ವೇಳೆ ಟಿಡಿಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ.

ರಾಜ್ಯದ ಅನಂತಪುರ ಜಿಲ್ಲೆಯ ತಾಡಪತ್ರಿ ವಿಧಾನಸಭಾ ಕ್ಷೇತ್ರದ ಗ್ರಾಮವೊಂದರಲ್ಲಿ ಘರ್ಷಣೆ ನಡೆದಿದೆ. ಘಟನೆಯಲ್ಲಿ ಎರಡೂ ಪಕ್ಷದ ಒಬ್ಬೊಬ್ಬ ಕಾರ್ಯಕರ್ತ ಮೃತಪಟ್ಟಿದ್ದಾರೆ. ರಾಜ್ಯದ ಬೇರೆಡೆಯೂ ಈ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ.

ADVERTISEMENT

ಮತ್ತೊಂದು ಘರ್ಷಣೆಯಲ್ಲಿ ರಾಜ್ಯ ವಿಧಾನಸಭೆ ಸ್ಪೀಕರ್ ಡಾ.ಕೊಡೇಲಾ ಶಿವಪ್ರಸಾದ ರಾವ್ ಅವರು ಗಾಯಗೊಂಡಿದ್ದಾರೆ. ಗುಂಟೂರು ಜಿಲ್ಲೆಯ ಸತ್ತೇನಪಲ್ಲಿ ಕ್ಷೇತ್ರದಿಂದ ಅವರು ಮರುಆಯ್ಕೆ ಬಯಸಿದ್ದಾರೆ. ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮತದಾನಕ್ಕೆಂದು ಬಂದ ಅವರ ಮೇಲೆ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮತಗಟ್ಟೆಯೊಳಗೇ ಹಲ್ಲೆ ನಡೆಸಿದ್ದಾರೆ. ಅವರ ಕಾರಿನ ಮೇಲೂ ಕಲ್ಲು ತೂರಿದ್ದಾರೆ.

ಬಾಂಬ್‌ ಸ್ಫೋಟ:ಮಹಾರಾಷ್ಟ್ರ ಮತ್ತು ಛತ್ತೀಸಗಡದಲ್ಲಿ ಮತಗಟ್ಟೆಗಳ ಬಳಿ ಬಾಂಬ್ ಸ್ಫೋಟ ನಡೆದಿದೆ. ಆದರೆ ಯಾವುದೇ ಸಾವುನೋವಿನ ಬಗ್ಗೆ ವರದಿಯಾಗಿಲ್ಲ. ಉಳಿದಂತೆ ಬೇರೆಡೆ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮರುಮತದಾನಕ್ಕೆ ಟಿಡಿಪಿ ಆಗ್ರಹ (ಅಮರಾವತಿ): ಆಂಧ್ರಪ್ರದೇಶದ 150 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಬೇಕು’ ಎಂದು ಆಂಧ್ರ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಆಯೋಗಕ್ಕೆ ಪತ್ರ ಬರೆದಿದ್ದಾರೆ.

‘ಈ ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ತಾಂತ್ರಿಕ ದೋಷವಿತ್ತು. ಮುಖ್ಯ ಚುನಾವಣಾ ಅಧಿಕಾರಿ ಗೋಪಾಲ ಕೃಷ್ಣ ದ್ವಿವೇದಿ ಅವರೇ ಮತದಾನ ಮಾಡಲು ಸಾಧ್ಯವಾಗಿಲ್ಲ. ಮತಯಂತ್ರ ಸರಿಪಡಿಸುವಷ್ಟರಲ್ಲಿ ಸಾಕಷ್ಟು ವಿಳಂಬವಾಗಿತ್ತು. ಅಷ್ಟರಲ್ಲಿ ಸಾಕಷ್ಟು ಮತದಾರರು ಮನೆಗಳಿಗೆ ಹಿಂತಿರುಗಿದ್ದರು. ಅವರ ಮತದಾನದ ಹಕ್ಕನ್ನು ಕಸಿದುಕೊಂಡಂತಾಗಿದೆ. ಹೀಗಾಗಿ ಮರುಮತದಾನ ನಡೆಸಬೇಕು’ ಎಂದು ಪತ್ರದಲ್ಲಿ ನಾಯ್ಡು ವಿವರಿಸಿದ್ದಾರೆ.

ಮತದಾನಕ್ಕೆ ತೊಡಕು...

* ಗುಂತಕಲ್‌ನ ಮತಗಟ್ಟೆಯೊಂದರಲ್ಲಿ ಇವಿಎಂ ಅನ್ನು ಒಡೆದು ಹಾಕಿದ ಜನ ಸೇನಾ ಪಕ್ಷದ ಅಭ್ಯರ್ಥಿ ಮಧುಸೂದನ್ ಗುಪ್ತಾ ಅವರು ಪೊಲೀಸರ ವಶಕ್ಕೆ. ಇವಿಎಂನಲ್ಲಿ ಪಕ್ಷದ ಚಿಹ್ನೆ ಸರಿಯಾಗಿ ಮುದ್ರಣವಾಗಿಲ್ಲ ಎಂಬುದು ಗುಪ್ತಾ ಅವರ ದಾಂದಲೆಗೆ ಕಾರಣ

* ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯ ವಾಘೇಜರಿಯ ಮತಗಟ್ಟೆಯ ಬಳಿ ಕಚ್ಚಾಬಾಂಬ್‌ ಸ್ಫೋಟ. ಯಾವುದೇ ಸಾವು ನೋವು ಇಲ್ಲ

* ಛತ್ತೀಸಗಡದ ಬಿಜಾಪುರ್ ಜಿಲ್ಲೆಯ ಮತಗಟ್ಟೆಯೊಂದರ ಬಳಿ ನಾಲ್ವರು ನಕ್ಸಲರ ಬಂಧನ. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ

* ಛತ್ತೀಸಗಡ ಬಸ್ತಾರ್‌ ವಲಯದ ಮತಗಟ್ಟೆಯೊಂದರ ಬಳಿ ಕಚ್ಚಾಬಾಂಬ್ ಸ್ಫೋಟಿಸಿದ ನಕ್ಸಲರು. ಯಾವುದೇ ಸಾವು ನೋವು ಇಲ್ಲ

* ಅಸ್ಸಾಂನ ದಿಬ್ರುಗಡ ಜಿಲ್ಲೆಯಲ್ಲಿ ತೈಲ ಕೊಳವೆ ಮಾರ್ಗದ ಬಳಿ ಕಚ್ಚಾಬಾಂಬ್‌ ಪತ್ತೆ. ಬಾಂಬ್‌ ಅನ್ನು ನಿಷ್ಕ್ರಿಯಗೊಳಿಸಿದ ಭದ್ರತಾ ಸಿಬ್ಬಂದಿ

* ಉತ್ತರ ಪ್ರದೇಶ ಕೈರಾನಾ ಕ್ಷೇತ್ರದ ಮತಗಟ್ಟೆಯೊಂದಕ್ಕೆ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ನುಗ್ಗಲೆತ್ನಿಸಿದ ಗುಂಪು. ಬಿಎಸ್‌ಎಫ್‌ ಸಿಬ್ಬಂದಿಯಿಂದ ಗಾಳಿಯಲ್ಲಿ ಗುಂಡು. ಯಾರಿಗೂ ಗಾಯಗಳಾಗಿಲ್ಲ

* ಆಂಧ್ರಪ್ರದೇಶದಲ್ಲಿ 358 ಮತಯಂತ್ರಗಳಲ್ಲಿ ತಾಂತ್ರಿಕ ದೋಷ. ಮಹಾರಾಷ್ಟ್ರದಲ್ಲೂ ಕೆಲವು ಮತಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆ

* ಜಮ್ಮು ಮತ್ತು ಕಾಶ್ಮೀರದ ಪೂಂಛ್‌ನ ಮತಗಟ್ಟೆಯೊಂದರ ಮತಯಂತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಗುಂಡಿ (ಬಟನ್) ಕೆಲಸ ಮಾಡುತ್ತಿರಲಿಲ್ಲ

* ಹಲವೆಡೆ ಮತದಾರರ ಪಟ್ಟಿಯಿಂದ ಹೆಸರು ಕಾಣೆ. ಕೆಲವರ ಹೆಸರನ್ನು ‘ಡಿಲೀಟೆಡ್’ ಎಂದು ನಮೂದು. ಮತದಾರರ ಆಕ್ರೋಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.