ADVERTISEMENT

ನಾವೇ ಗೆಲ್ಲುತ್ತೇವೆ: ಮುಲಾಯಂ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 19:03 IST
Last Updated 1 ಏಪ್ರಿಲ್ 2019, 19:03 IST
ಮುಲಾಯಂ
ಮುಲಾಯಂ   

ಲಖನೌ: ಲೋಕಸಭೆಯ ಕೊನೆಯ ಅಧಿವೇಶನದಲ್ಲಿ ‘ನೀವೇ ಪುನಃ ಪ್ರಧಾನಿ ಆಗಬೇಕು’ ಎಂದು ನರೇಂದ್ರ ಮೋದಿ ಅವರನ್ನು ಆಶೀರ್ವದಿಸಿದ್ದ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಮುಲಾಯಂ ಸಿಂಗ್‌ ಯಾದವ್‌ ಅವರು ಸೋಮವಾರ, ‘ಈ ಬಾರಿ ವಿರೋಧ ಪಕ್ಷಗಳೇ ಜಯ ಸಾಧಿಸಲಿವೆ’ ಎಂದಿದ್ದಾರೆ. ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.

ಮೈನ್‌ಪುರಿ ಲೋಕಸಭಾ ಕ್ಷೇತ್ರಕ್ಕೆ ಎಸ್‌ಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮುಲಾಯಂ, ‘ಎಸ್‌ಪಿ–ಬಿಎಸ್‌ಪಿ–ಆರ್‌ಎಲ್‌ಡಿ ಮೈತ್ರಿಯು ಚುನಾವಣೆಯಲ್ಲಿ ಜಯಭೇರಿ ಬಾರಿಸಲಿದೆ’ ಎಂದರು.

ಆದರೆ, ‘ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಪ್ರಧಾನಿಯಾಗುವುದನ್ನು ನೀವು ಇಚ್ಛಿಸುತ್ತೀರಾ’ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಲು ನಿರಾಕರಿಸಿ, ‘ಚುನಾವಣೆಯ ನಂತರ ಮುಂದಿನ ಪ್ರಧಾನಿ ಆಯ್ಕೆ ಮಾಡಲಾ ಗುವುದು’ ಎಂದರು. ಜೊತೆಗೆ ‘ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ನಾನು ಇಲ್ಲ’ ಎಂದೂ ಸ್ಪಷ್ಟಪಡಿಸಿದರು.

ADVERTISEMENT

ಏ. 19ರಂದು ಮೈನ್‌ಪುರಿಯಲ್ಲಿ ನಡೆಯಲಿರುವ ಎಸ್‌ಪಿ–ಬಿಎಸ್‌ಪಿ ಚುನಾವಣಾ ರ್‍ಯಾಲಿಯಲ್ಲಿ ಮಾಯಾವತಿ ಜೊತೆ ವೇದಿಕೆ ಹಂಚಿಕೊಳ್ಳುವಿರಾ ಎಂಬ ಪ್ರಶ್ನೆಗೆ, ‘ಇದಕ್ಕೆ ಅಖಿಲೇಶ್‌ ಮಾತ್ರ ಉತ್ತರ ನೀಡಬಲ್ಲರು’ ಎಂದರು.

2014ರ ಲೋಕಸಭಾ ಚುನಾವಣೆ ಯಲ್ಲಿ ಮೈನ್‌ಪುರಿ ಹಾಗೂ ಆಜಂಗಡ ಕ್ಷೇತ್ರಗಳಿಂದ ಗೆದ್ದಿದ್ದ ಮುಲಾಯಂ, ನಂತರ ಮೈನ್‌ಪುರಿ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟಿದ್ದರು. ಮಾಯಾವತಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಮುಲಾಯಂ ಅವರ ಪುತ್ರ ಅಖಿಲೇಶ್‌ ಸಹ ನಿರಾಕರಿಸಿದರು. ಈ ಕುರಿತ ಪ್ರಶ್ನೆಗೆ‘ಮುಂದಿನ ಪ್ರಧಾನಿ ಉತ್ತರ ಪ್ರದೇಶದವರಾಗಿರುತ್ತಾರೆ ಎಂದಷ್ಟೇ ನಾನು ಹೇಳಬಲ್ಲೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.