ADVERTISEMENT

ಎನ್‌ಡಿಎ ಸಭೆ ಇಂದು: ಫಲಿತಾಂಶ ನಂತರ ಕಾರ್ಯತಂತ್ರಕ್ಕೆ ಸ್ಪಷ್ಟರೂಪ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 20 ಮೇ 2019, 20:23 IST
Last Updated 20 ಮೇ 2019, 20:23 IST
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಚುನಾವಣಾ ಫಲಿತಾಂಶದ ನಂತರದ ಕಾರ್ಯತಂತ್ರಕ್ಕೆ ಸ್ಪಷ್ಟರೂಪ ಕೊಡುವ ಕುರಿತು ಚರ್ಚಿಸಲು ಎನ್‌ಡಿಎ, ತನ್ನ ಮಿತ್ರ ಪಕ್ಷಗಳ ನಾಯಕರ ಸಭೆಯನ್ನು ಮಂಗಳವಾರ ಕರೆದಿದೆ. ಎನ್‌ಡಿಎ ಮುಖಂಡರ ಸಭೆಗೂ ಮುನ್ನ ಪಕ್ಷದ ಸಂಸದೀಯ ಮಂಡಳಿ ಸಭೆಯನ್ನೂ ಬಿಜೆಪಿ ನಡೆಸಲಿದೆ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟ ಬಹುಮತ ಪಡೆಯಲಿದೆ ಎಂದುಭಾನುವಾರ ಪ್ರಕಟವಾದ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶ ಅಂದಾಜಿಸಿದೆ. ಇದು, ಎನ್‌ಡಿಎ ಮೈತ್ರಿಕೂಟದೊಳಗಿನ ಉತ್ಸಾಹವನ್ನು ಹೆಚ್ಚಿಸಿದೆ.

ಎನ್‌ಡಿಎ ಮಿತ್ರ ಪಕ್ಷಗಳ ಸಭೆ ಯಲ್ಲಿ ಭಾಗವಹಿಸುವಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮುಖಂಡರಿಗೆ ಆಹ್ವಾನ ನೀಡಿದ್ದಾರೆ. ಕೇಂದ್ರದ ಹಿರಿಯ ಸಚಿವರೂ ಭಾಗವಹಿಸುವ ಸಂಭವವಿದೆ.

ADVERTISEMENT

ಬಿಜೆಪಿಗೆ ಸ್ಪಷ್ಟ ಬಹುಮತ ಬಂದರೂ ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂದು ಬಿಜೆಪಿ ಈಗಾಗಲೇ ಸ್ಪಷ್ಟಪಡಿಸಿದೆ. 2014ರ ಚುನಾವಣೆಯಲ್ಲಿಯೂ ಬಿಜೆಪಿ ಸರಳ ಬಹುಮತ ಪಡೆದಿತ್ತು. ಆದರೆ, ಮೈತ್ರಿ ಸರ್ಕಾರ ರಚಿಸಿತ್ತು.

ಅಮಿತ್‌ ಶಾ ಕಳೆದ ವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿಯೇ 300ಕ್ಕೂ ಅಧಿಕ ಸ್ಥಾನಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಜತೆಗೆ, ಬಿಜೆಪಿ ಹೊಸ ಮೈತ್ರಿಗೆ ಮುಕ್ತವಾಗಿದೆ ಎಂದು ಹೇಳಿಕೆ ನೀಡಿದ್ದರು. ಇದು ಎನ್‌ಡಿಎ ಸರಳ ಬಹುಮತಕ್ಕೆ ಅಗತ್ಯವಿರುವ 272ರ ಗಡಿ ದಾಟುವುದಿಲ್ಲ ಎಂಬ ಅಭಿಪ್ರಾಯಮೂಡಿಸಿತ್ತು.

ನಾಯ್ಡು–ಮಮತಾ ಭೇಟಿ: ಮತ್ತೊಂದು ಬೆಳವಣಿಗೆಯಲ್ಲಿ ಬಿಜೆಪಿಯೇತರ ವಿರೋಧಪಕ್ಷಗಳನ್ನು ಒಗ್ಗೂಡಿಸಲು ಒತ್ತು ನೀಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸೋಮವಾರ ಕೋಲ್ಕತ್ತದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ತೃಣಮೂಲ ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ, ಫಲಿತಾಂಶದ ನಂತರ ವಿರೋಧಪಕ್ಷಗಳನ್ನು ಒಗ್ಗೂಡಿಸುವ ಕಾರ್ಯತಂತ್ರ ಕುರಿತು ಚರ್ಚೆ ನಡೆಯಿತು. ಸುಮಾರು 45 ನಿಮಿಷ ಸಭೆ ನಡೆದಿದೆ.

ಬಿಜೆಪಿಯೇತರ ವಿರೋಧಪಕ್ಷಗಳು ಫಲಿತಾಂಶ ಪ್ರಕಟಣೆಯ ನಂತರ ಒಟ್ಟಿಗೆ ಇರುವಂತೆ ನೋಡಿಕೊಳ್ಳಲು ಅನುಸರಿಸಬೇಕಾದ ಕ್ರಮ ಹಾಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಿತು.ಉಭಯ ಮುಖಂಡರು ಫಲಿತಾಂಶ ಪ್ರಕಟಣೆ ನಂತರ ಮಹಾ
ಮೈತ್ರಿಯ ಇತರೆ ಮುಖಂಡರ ಜೊತೆಗೆ ಮಾತುಕತೆ ನಡೆಸುವರುಎಂದು ಟಿಎಂಸಿ ಮೂಲಗಳು ಹೇಳಿವೆ.

ನಾಯ್ಡು ಅವರುಈ ಹಿಂದೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್ ಸೇರಿ ಅನೇಕ ಮುಖಂಡರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.