ADVERTISEMENT

ನಾಮಪತ್ರ ಸಲ್ಲಿಕೆ: ಏ.3ರಂದು ಕಾಂಗ್ರೆಸ್, 4ರಂದು  ಕಮಲ; ರಂಗೇರುವ ಅಖಾಡ

ಈ ತನಕ ಐದು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 14:20 IST
Last Updated 2 ಏಪ್ರಿಲ್ 2019, 14:20 IST
   

ಹಾವೇರಿ:ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆಯ ಎರಡು ದಿನಗಳು ಉಳಿದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಬ್ಬರೂ ಕ್ರಮವಾಗಿ ಏ.3 ಮತ್ತು 4ರಂದು ಸಲ್ಲಿಸಲಿದ್ದಾರೆ.

ಏ.3ರಂದುಕಾಂಗ್ರೆಸ್
ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಿ.ಆರ್. ಪಾಟೀಲ ಏ.3ರಂದು ನಾಮಪತ್ರ ಸಲ್ಲಿಸುವರು. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಸಂಜೀವಕುಮಾರ್ ನೀರಲಗಿ, ‘ಮೈತ್ರಿ ಅಭ್ಯರ್ಥಿ ಡಿ.ಆರ್‌.ಪಾಟೀಲ ಕಾಂಗ್ರೆಸ್‌ ಪಕ್ಷದಿಂದ ಏ.3ರಂದು ನಾಮಪತ್ರ ಸಲ್ಲಿಸುವರು. ಅಂದು ಬೆಳಿಗ್ಗೆ 10.30ಕ್ಕೆ ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗ ಮೂಲಕ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನಕ್ಕೆ ಬರಲಾಗುವುದು. ಅಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ’ ಎಂದರು.

‘ಈ ಸಭೆಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಸಚಿವರಾದ ಸಚಿವ ಜಮೀರ್ ಅಹ್ಮದ್‌ ಖಾನ್‌, ಪರಮೇಶ್ವರ ನಾಯ್ಕ, ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರಡ್ಡಿ ಪಾಲ್ಗೊಳ್ಳುವರು ಎಂದರು.
ಎರಡೂ ಪಕ್ಷಗಳಿಂದ ಸೇರಿ ಸುಮಾರು 50 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುವರ ನಿರೀಕ್ಷೆ ಇದೆ ಎಂದರು.

ADVERTISEMENT

ಏ.4ರಂದು​ಬಿಜೆಪಿ
ಬಿಜೆಪಿ ಅಭ್ಯರ್ಥಿ, ಸಂಸದ ಶಿವಕುಮಾರ ಉದಾಸಿ ಏ.4ರಂದು ನಾಮಪತ್ರ ಸಲ್ಲಿಸುವರು. ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸಿ.ಎಂ. ಉದಾಸಿ, ‘ಬೆಳಿಗ್ಗೆ 10.30ಕ್ಕೆ ಪುರಸಿದ್ದೇಶ್ವರ ಗುಡಿಯಿಂದ ಮೆರವಣಿಗೆ ಮೂಲಕ ಮುನ್ಸಿಪಲ್ ಹೈಸ್ಕೂಲ್ ಮೈದಾನಕ್ಕೆ ಬರಲಾಗುವುದು. ಅಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪಕ್ಷದ ಮುಖಂಡರು ಮಾತನಾಡಲಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪ್ರಮುಖರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಪ್ರಮುಖರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ನಾಮಪತ್ರ ಸಲ್ಲಿಸುವರು’ ಎಂದರು.

ಸುಮಾರು 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.