ADVERTISEMENT

ಮಹಿಳೆಯರಿಗೆ ಭರಪೂರ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 20:01 IST
Last Updated 8 ಏಪ್ರಿಲ್ 2019, 20:01 IST
ನವೀನ್‌ ಪಟ್ನಾಯಕ್‌
ನವೀನ್‌ ಪಟ್ನಾಯಕ್‌   

ಭುವನೇಶ್ವರ್‌: ‘ಒಡಿಶಾದಲ್ಲಿ ಮತ್ತೆ ನಮ್ಮ ಪಕ್ಷ (ಬಿಜು ಜನತಾ ದಳ– ಬಿಜೆಡಿ) ಅಧಿಕಾರಕ್ಕೆ ಬಂದರೆ ಬಡ ಕುಟುಂಬದ ಹೆಣ್ಣುಮಕ್ಕಳ ಮದುವೆಗೆ ₹ 25 ಸಾವಿರ ಆರ್ಥಿಕ ನೆರವು ನೀಡಲಾಗುವುದು’ ಎಂದು ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಭರವಸೆ ನೀಡಿದ್ದಾರೆ.

ಚುನಾವಣಾ ರ್‍ಯಾಲಿಯೊಂದರಲ್ಲಿ ಮಾತನಾಡಿದ ಅವರು ಮಹಿಳೆಯರ ಅಭಿವೃದ್ಧಿ ಹಾಗೂ ಅವರ ಆರ್ಥಿಕ ಸದೃಢತೆಗಾಗಿ ಅನೇಕ ಯೋಜನೆಗಳನ್ನು ಘೋಷಿಸಿದರು.

‘ಮಹಿಳೆಯರಿಗೆ ನೀಡಲಾಗುತ್ತಿರುವ ವಾರ್ಷಿಕ ಆರೋಗ್ಯ ಸೇವಾ ಸೌಲಭ್ಯದ ಗರಿಷ್ಠ ಪ್ರಮಾಣವನ್ನು ಈಗಿರುವ ₹ 7ಲಕ್ಷದಿಂದ ₹ 10ಲಕ್ಷಕ್ಕೆ ಹೆಚ್ಚಿಸಲಾಗುವುದು. ಮಹಿಳೆಯರೇ ನಿರ್ವಹಿಸುತ್ತಿರುವ ಸ್ವಸಹಾಯ ಸಂಘಗಳಿಗೆ ವರ್ಷದಲ್ಲಿ ಕನಿಷ್ಠ ₹ 5ಸಾವಿರ ಕೋಟಿ ಮೌಲ್ಯದ ವಿವಿಧ ಕಾಮಗಾರಿಗಳನ್ನು ನೀಡಲಾಗುವುದು’ ಎಂದೂ ಪಟ್ನಾಯಕ್‌ ಘೋಷಿಸಿದರು. ಸ್ವಸಹಾಯ ಸಂಘಗಳಿಗೆ ಈಗಾಗಲೇ ಅವರು ಗರಿಷ್ಠ ಐದು ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ನೀಡುವ ಘೊಷಣೆ ಮಾಡಿದ್ದಾರೆ.

ADVERTISEMENT

ಪಟ್ನಾಯಕ್‌ ಅವರು ಮಹಿಳೆಯರ ಮತಗಳ ಮೇಲೆ ಕಣ್ಣಿಟ್ಟು ಇಂಥ ಆಕರ್ಷಕ ಘೋಷಣೆಗಳನ್ನು ಮಾಡಿದ್ದಾರೆ ಎಂದು ಚುನಾವಣಾ ವಿಶ್ಲೇಷಕರು ಹೇಳುತ್ತಿದ್ದಾರೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 21 ಸ್ಥಾನಗಳಲ್ಲಿ 20ನ್ನು ಹಾಗೂ ವಿಧಾನಸಭಾ ಚುನಾವಣೆಯಲ್ಲಿ 147 ಸ್ಥಾನಗಳಲ್ಲಿ 117 ಸ್ಥಾನಗಳನ್ನು ಬಿಜೆಡಿ ಗೆದ್ದುಕೊಂಡಿತ್ತು. ಬಿಜೆಡಿ ಗೆಲುವಿಗೆ ಮಹಿಳೆಯರ ಮತಗಳೇ ಕಾರಣ ಎಂದು ವಿಶ್ಲೇಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.