ADVERTISEMENT

ಒಡಿಶಾ: ನವೀನ್‌ ಪಟ್ನಾಯಕ್‌ಗೆ ಮತ್ತೆ ಪಟ್ಟ

​ಪ್ರಜಾವಾಣಿ ವಾರ್ತೆ
Published 23 ಮೇ 2019, 19:59 IST
Last Updated 23 ಮೇ 2019, 19:59 IST
ನವೀನ್‌ ಪಟ್ನಾಯಕ್‌
ನವೀನ್‌ ಪಟ್ನಾಯಕ್‌   

ಭುವನೇಶ್ವರ: ಲೋಕಸಭಾ ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ‘ರಾಜ್ಯ ಸರ್ಕಾರ 10 ಹೆಜ್ಜೆ ನಡೆಯಲು 10 ನಿಮಿಷ ತೆಗೆದುಕೊಳ್ಳುತ್ತದೆ’ ಎಂದು ಒಡಿಶಾ ಸರ್ಕಾರವನ್ನು ಕುಟುಕಿದ್ದರು.

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವ ನವೀನ್‌ ಪಟ್ನಾಯಕ್‌, ತಮ್ಮ ಗೃಹ ಕಚೇರಿ ಮೂಲಕವೇ ಆಡಳಿತ ನಡೆಸುತ್ತಿದ್ದರು. ರಾಜ್ಯದ ಅಭಿವೃದ್ಧಿ ಸಹ ವೇಗ ಕಳೆದುಕೊಂಡಿದೆ. ಹೀಗಾಗಿ ಬಿಜೆಡಿಯನ್ನು ಸೋಲಿಸಿ ಬಿಜೆಪಿಯನ್ನು ಗೆಲ್ಲಿಸುವಂತೆ ಮೋದಿ ಮನವಿ ಮಾಡಿದ್ದರು.

ಆದರೆ, 147 ವಿಧಾನಸಭಾ ಕ್ಷೇತ್ರಗಳ ಪೈಕಿ 100ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಅನಾಯಾಸವಾಗಿ ಗೆಲುವಿನ ದಡ ಸೇರುವ ವಿಶ್ವಾಸ ನವೀನ್‌ ಪಟ್ನಾಯಕ್‌ ಅವರದು. ಆ ಮೂಲಕ 10 ನಿಮಿಷದಲ್ಲಿ ಹತ್ತು ಹೆಜ್ಜೆ ಇಟ್ಟರೂ ಆಡಳಿತ ಚುಕ್ಕಾಣಿ ಹಿಡಿಯಲು ಇದು ಅಡ್ಡಿಯಾಗಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ADVERTISEMENT

ಚುನಾವಣೆಗೂ ಮುನ್ನ ಅವರು ವ್ಯಾಯಾಮ ಮಾಡುತ್ತಿರುವ ವಿಡಿಯೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ‘ಒಡಿಶಾ ಜನರಿಗಾಗಿ ಹೋರಾಟ ನಡೆಸಲು ಸಿದ್ಧನಾಗುತ್ತಿರುವೆ’ ಎಂಬ ಸಂದೇಶವೂ ಇತ್ತು. ಆ ಮೂಲಕ ಅವರು ತಮ್ಮ ರಾಜಕೀಯ ವಿರೋಧಿಗಳಿಗೆ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದರು. ಅದು ಕೇವಲ ಸಂದೇಶ ಮಾತ್ರ ಅಲ್ಲ ಎಂಬುದನ್ನು ಈಗ ನಿರೂಪಿಸಿದ್ದಾರೆ.

ಒಮ್ಮೆ ಎನ್‌ಡಿಎ ಮೈತ್ರಿಕೂಟದಲ್ಲಿದ್ದ ನವೀನ್‌ ಪಟ್ನಾಯಕ್‌, ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಹಾಗೂ ಯುಪಿಎದಿಂದ ಸಮಾನ ಅಂತರ ಕಾಯ್ದುಕೊಂಡಿದ್ದರು. ಅಲ್ಲದೇ, ರಾಜ್ಯದ ಅಭಿವೃದ್ಧಿಗೆ ಕೈಜೋಡಿಸುವವರೊಂದಿಗೆ ಮೈತ್ರಿ ಎನ್ನುವ ಮೂಲಕ ತಮ್ಮ ಆಯ್ಕೆಯನ್ನು ಮುಕ್ತವಾಗಿಟ್ಟಿದ್ದರು.

ಡೂನ್‌ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿರುವ ನವೀನ್‌ ತಮ್ಮ ತಾರುಣ್ಯದ ಬಹುಭಾಗವನ್ನು ವಿದೇಶದಲ್ಲಿಯೇ ಕಳೆದವರು. ಈಗಲೂ ಅವರಿಗೆ ನಿರರ್ಗಳವಾಗಿ ಒರಿಯಾ ಮಾತನಾಡಲು ಬಾರದು. ಇದೇ ವಿಷಯವಾಗಿ ರಾಜಕೀಯ ವಿರೋಧಿಗಳು ಅವರ ಕಾಲೆಳೆಯುತ್ತಿರುತ್ತಾರೆ.

ತಂದೆ ಬಿಜು ಪಟ್ನಾಯಕ್‌ ನಿಧನರಾದ ಬಳಿಕ ಒಡಿಶಾಕ್ಕೆ ಮರಳಿ ರಾಜಕೀಯಕ್ಕೆ ಧುಮುಕಿದವರು. ನಾಲ್ಕು ಬಾರಿ ಗೆದ್ದು ರಾಜ್ಯ ಮುನ್ನಡೆಸಿರುವ ಅವರಿಗೆ ಈಗ ಐದನೇ ಬಾರಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಒಡಿಶಾ ಜನರ ಪಾಲಿನ ‘ನವೀನ್‌ ಬಾಬು’ ತಮಗೆ ರಾಷ್ಟ್ರ ರಾಜಕಾರಣದ ಮಹತ್ವಾಕಾಂಕ್ಷೆ ಇಲ್ಲ ಎನ್ನುತ್ತಾರೆ. ಶುಭ್ರ, ಗರಿಗರಿಯಾದ ಕುರ್ತಾ–ಪೈಜಾಮ್‌ಧಾರಿ ನವೀನ್‌ ಭ್ರಷ್ಟಾಚಾರದ ಕಳಂಕ ಹೊತ್ತವರಲ್ಲ. ದಕ್ಷ ಆಡಳಿತಗಾರ ಎಂಬ ಹೆಗ್ಗಳಿಕೆಯೂ ಅವರದು.

ಬಲ ಹೆಚ್ಚಿಸಿಕೊಳ್ಳುವತ್ತ ಬಿಜೆಪಿ

ಬಿಜೆಡಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಬಿಜೆಪಿ 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಇದು ಪತ್ರಿಕೆ ಮುದ್ರಣಕ್ಕೆ ಹೋಗುವ ವರೆಗೆ ಲಭಿಸಿದ ಮಾಹಿತಿ. 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಡಿ 106 ಕ್ಷೇತ್ರಗಳಲ್ಲಿ ಮುಂದಿತ್ತು. ಕಾಂಗ್ರೆಸ್‌ 9, ಸಿಪಿಎಂ ಹಾಗೂ ಪಕ್ಷೇತರ ಅಭ್ಯರ್ಥಿಯೊಬ್ಬರು ತಲಾ 1 ಕ್ಷೇತ್ರದಲ್ಲಿ ಮುಂದಿದ್ದರು.

ಈ ಸಾಧನೆ ಪಟ್ನಾಯಕ್‌ ಅವರಿಗೆ ಸುಲಭದ ತುತ್ತೇನು ಆಗಿರಲಿಲ್ಲ. ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬಿರುಸಿನ ಪ್ರಚಾರದ ಪ್ರವಾಹದ ವಿರುದ್ಧ ನವೀನ್‌ ಪಟ್ನಾಯಕ್‌ ಈಜಿದ್ದಾರೆ. ಪ್ರಚಾರದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡಿದ್ದಲ್ಲದೇ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದ ಉದ್ದಗಲಕ್ಕೂ ರ‍್ಯಾಲಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.