ADVERTISEMENT

ಲೋಕಸಭೆ ಚುನಾವಣೆ: ಮಹಾರಾಷ್ಟ್ರದ ಅಮರಾವತಿಯಲ್ಲಿ ನವನೀತ್‌ ಕೌರ್‌ಗೆ ವಾಂಖಡೆ ಸವಾಲು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 19:30 IST
Last Updated 24 ಏಪ್ರಿಲ್ 2024, 19:30 IST
<div class="paragraphs"><p>ಬಲವಂತ್‌ ಬಸವಂತ್‌ ವಾಂಖಡೆ, ನವನೀತ್‌ ಕೌರ್‌ ರಾಣಾ</p></div>

ಬಲವಂತ್‌ ಬಸವಂತ್‌ ವಾಂಖಡೆ, ನವನೀತ್‌ ಕೌರ್‌ ರಾಣಾ

   
ನವನೀತ್‌ ಕೌರ್‌ ರಾಣ: ಬಿಜೆಪಿ

ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದಿಂದ 2019ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ನವನೀತ್‌ ಕೌರ್‌ ರಾಣಾ ಅವರು, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ನವನೀತ್‌ ಅವರು 36,951 ಮತಗಳ ಅಂತರದಿಂದ ಶಿವಸೇನಾದ ಆನಂದ ರಾವ್‌ ಅಡ್ಸುಲ್‌ ಅವರನ್ನು ಸೋಲಿಸಿದ್ದರು. ರಾಜಕೀಯ ಪ್ರವೇಶಿಸುವುದಕ್ಕೂ ಮೊದಲು ನವನೀತ್‌ ಅವರು ತೆಲುಗು ಸಿನಿಮಾ ರಂಗದಲ್ಲಿ ನಟಿಯಾಗಿದ್ದರು. 2014ರಲ್ಲಿ ಇದೇ ಕ್ಷೇತ್ರದಿಂದ ಎನ್‌ಸಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇವರ ಪತಿ ರವಿ ರಾಣಾ ಅವರು ಶಾಸಕರಾಗಿದ್ದಾರೆ. 2022ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಉದ್ಧವ್‌ ಠಾಕ್ರೆ ಅವರ ಮನೆಯ ಮುಂದೆ ಹನುಮಾನ್‌ ಚಾಲೀಸಾ ಪಠಿಸಿ ಪ್ರತಿಭಟಿಸಿದ್ದಕ್ಕೆ, ನವನೀತ್‌ ಮತ್ತು ರವಿ ರಾಣಾ ಅವರನ್ನು ಪೊಲೀಸರು ಬಂಧಿಸಿದ್ದರು. ನವನೀತ್‌ ಅವರು ಈಚೆಗೆ ಬಿಜೆಪಿಗೆ ಸೇರಿದ್ದರು.

ಬಲವಂತ್‌ ಬಸವಂತ್‌ ವಾಂಖಡೆ: ಕಾಂಗ್ರೆಸ್‌

ಅಮರಾವತಿಯಲ್ಲಿ ನವನೀತ್‌ ಕೌರ್‌ ರಾಣಾ ವಿರುದ್ಧ ಕಾಂಗ್ರೆಸ್‌ ಪಕ್ಷವು ಶಾಸಕ ಬಲವಂತ್‌ ಬಸವಂತ್‌ ವಾಂಖಡೆ ಅವರನ್ನು ಕಣಕ್ಕಿಳಿಸಿದೆ. ಬಲವಂತ್‌, 2019ರಲ್ಲಿ ದರ್ಯಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರು ಪ್ರತಿನಿಧಿಸಿದ್ದರು. ಶಿವಸೇನಾ ಉದ್ಧವ್‌ ಠಾಕ್ರೆ ಬಣ ಮತ್ತು ಎನ್‌ಸಿಪಿ ಶರದ್‌ ಪವಾರ್‌ ಬಣದ ಬೆಂಬಲವಿರುವುದು ಬಲವಂತ್‌ ಅವರ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿದೆ. ನಿರುದ್ಯೋಗ, ಬೆಲೆ ಏರಿಕೆ ವಿಚಾರಗಳನ್ನೇ ಪ್ರಮುಖ ಚುನಾವಣಾ ವಿಷಯವಾಗಿಸಿ ಬಲವಂತ್ ಅವರು ಮತಯಾಚಿಸುತ್ತಿದ್ದಾರೆ. ಸ್ಥಳೀಯವಾಗಿ ಪ್ರಭಾವಿಯಾಗಿರುವ ಅವರು, ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.