ADVERTISEMENT

‘ಬಂಡಾಯ’ ಬೆಂಬಲಿಗರ ಹುನ್ನಾರವಂತೆ...

ಸಿದ್ದಯ್ಯ ಹಿರೇಮಠ
Published 23 ಏಪ್ರಿಲ್ 2023, 21:01 IST
Last Updated 23 ಏಪ್ರಿಲ್ 2023, 21:01 IST
   
ಚಹಾದಂಗಡಿ ಚುನಾವಣಾ ಪುರಾಣ

‘ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದೇ ನಿರಾಸೆಗೆ ಒಳಗಾಗಿರುವ ಮಾಜಿ ಶಾಸಕರು, ಹಾಲಿ ಶಾಸಕರು, ಈಗ ತಾನೇ ರಾಜಕಾರಣದಲ್ಲಿ ಕಣ್ಣು ಬಿಡುತ್ತಿರುವ ಸ್ಪರ್ಧಾಕಾಂಕ್ಷಿಗಳು ತಮ್ಮ ಪಕ್ಷದ ಮುಖಂಡರ ವಿರುದ್ಧ ಹಿಂಗ್‌ ಎದ್ದಾರಂತ... ಹಿಂಗ ಇದ್ದಕ್ಕಿದ್ದಂಗ ಪಕ್ಷ ಬಿಟ್ಟು ಎದ್ದು ಹೋಗುವವರನ್ನು 'ಬಂಡಾಯ ಏಳೂದು' ಅಂತಾರಂತ’.

–ಬೆಳ್ಳಂಬೆಳಿಗ್ಗೆ ಬಾಜಿ ದೊಡ್ಡೇಶಿಯ ಚಹದಂಗಡಿಯ ಕಟ್ಟೆ ಮೇಲೆ, ಚಹ ಹೀರುತ್ತ ಕುಳಿತು ಹೀಗೆ ಹರಟೆಯಲ್ಲಿ ತೊಡಗಿದ್ದವರ ನಡುವೆ ಬಂದು ಕೂತ ಬಸಣ್ಣ, ತನಗೂ ಒಂದು ಚಹ ಹೇಳುವಂತೆ ಸನ್ನೆ ಮಾಡುತ್ತಲೇ ಮಾತಿಗಿಳಿದ.

‘ಸಾಲೀಗೆ ಹೋಗೌರು ಪರೀಕ್ಷೆ ಹತ್ರ ಬಂದಾಗ ಓದಾಕಂತ ಬೆಳಗೋಮುಂಜಾನೆ ಏಳ್ತಾರಲ್ಲ ಅದಕ್ಕೆ ದೌಡ ಏಳೂದು ಅಂತ ಕರೀತೀವಿ. ಇದೇನ್ಲೇಪಾ ಹೊಸಾದು, ಬಂಡಾಯ ಏಳೋದು ಅಂದ್ರ..? ಪೇಪರ್‌ನಲ್ಲಿ ಹುದುಗಿ ಹೋಗಿದ್ದ ಬಡಿಗೇರ ಮಾನಪ್ಪನ್ನ ಕೇಳಿದ. ‘ನೋಡ್ ಬಸಣ್ಣಾ, ಯಾರಿಗೆ ಇಲೆಕ್ಷನ್ ನಿಂದ್ರಾಕ ಟಿಕೀಟ್‌ ಸಿಗೂದಿಲ್ಲಾ ಅಂಥೌರೆಲ್ಲಾ ಪಕ್ಷ ಬಿಟ್ ಹೋಗ್ತಾರಲ್ಲ.. ಅದಕ್ಕ ಬಂಡಾಯ ಏಳೂದು ಅಂತಾರ. ಹಿಂಗ ಬಂಡಾಯ ಎದ್ದೌರೆಲ್ಲಾ ಒಟ್ಟ ಯಾರ್‌ ಮಾತೂ ಕೇಳೂದಿಲ್ಲ. ಹೆಂಡತಿ, ಮಕ್ಕಳು, ಅಣತಮ್ಮಗೂಳು ಅಷ್ಟ ಯಾಕ, ಇಷ್ಟ್‌ ದಿನಾ ಅವರೇ ಹಾಡಿ ಹೊಗಳತಿದ್ರಲ್ಲ ಆ ಮುಖಂಡರು ಹೇಳೀದ್ರೂ ಸುತರಾಂ ಕಿವಿಗೆ ಹಾಕ್ಕೋಳೂದಿಲ್ಲ’ ಅಂದ.

ADVERTISEMENT

‘ಮತ್ತ ಅವರು ಯಾರ ಮಾತಂತ ಕೇಳ್ತಾರೋ ಮಾನಪ್ಪಾ’ ಬಸಣ್ಣ ಮಾತನ್ನು ಮುಂದುವರಿಸುವ ಭರದಲ್ಲಿ ಪ್ರಶ್ನಿಸಿದ.
‘ಬಂಡಾಯಾ ಏಳೌರೆಲ್ಲಾ ಬರೇ ತಮ್ಮ ಅಭಿಮಾನಿಗಳು, ಬೆಂಬಲಿಗರ ಮಾತನ್ನ ಮಾತ್ರ ಕೇಳ್ತಾರ ನೋಡು’ ಮರು ಉತ್ತರ ಬಂತು. ‘ಹೌದಾ ಅದ್ಯಾಕೋ ಬಸಣ್ಣ’ ಕುತೂಹಲದಿಂದ ಮತ್ತೊಂದು ಪ್ರಶ್ನೆ ಎಸೆದೇ ಬಿಟ್ಟ.

‘ಟಿಕೀಟ್‌ ಸಿಕ್ಕಿಲ್ಲಾ ಅಂತ ನನಗ ಒಟ್ಟೊಟ್ಟ ಬೇಜಾರಾಗಿಲ್ಲಾ. ಆದ್ರ ನನ್ ಹಿಂದ ಓಡಾಡೂ ಅಭಿಮಾನಿಗಳಿಗೆ, ಬೆಂಬಲಿಗರಿಗೆ ಭಾಳ ಬ್ಯಾಸರಾಗೇತಿ. ಅವರು ಊರಾಗ ಮಕಾ ಎತ್ಕೊಂಡು ತಿರಗ್ಯಾಡಾಕೂ ಆಗವಲ್ದಂತ. ನಾನಂತೂ ಔರು ಹೇಳಿದಂಗ ಕೇಳಾಕುಂತೇನಿ.... ಸಾಹೇಬ್ರ, ಏನರ ಆಗ್ಲಿ.. ತೇಲಲಿ ಮುಳುಗ್ಲಿ ನೀವು ಎಲೆಕ್ಷನ್‌ಗೆ ನಿಲ್ಲಾಕಬೇಕು ಅಂತ ಎಲ್ಲಾರೂ ಸಲಹೆ ನೀಡ್ಯಾರ. ನಾನಂತೂ ಔರ್‌ ಮಾತು ಬಿಟ್ ಹಾಕಂಗಿಲ್ಲಾ ಅದಕ್ಕ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸ್ತೇನಿ ಅಂತ ಹೇಳಿ ತಾಲೂಕ್ ಕಚೇರಿ ಒಳಗ ನಾಮಪತ್ರಾ ಕೊಟ್‌ ಬಂದಾರೇ ನಪಾ’ ಮಾನಪ್ಪ ವಿವರಣೆ ನೀಡಿದ.

‘ಸಾಕ್ ಬಿಡ್ರೀ ನಿಮಗೂ ವಯ ಸ್ಸಾತು ಪಕ್ಷ ಈ ಸಲಾ ಬ್ಯಾರೇದೌರಿಗೆ ಟಿಕೀಟ್‌ ಕೊಟ್ಟೈತಿ. ಔರಿಗೇ ಸಪೋರ್ಟ್‌ ಮಾಡಿ ಗೆಲ್ಸೂನು ಅಂತ ಈ ಅಭಿಮಾನಿಗಳು, ಬೆಂಬಲಿಗರು ಯಾಕ ಹೇಳೂದಿಲ್ಲ ಅಂತಿನಿ. ಎಲ್ಲಾರೂ ಹಿಂಗ್ ಬಂಡೆದ್ದವರನ್ನ ಮತ್ತ ಇಲೆಕ್ಷನ್‌ಗೆ ನಿಲ್ಸಾಕ ನೋಡ್ತಾರಲ್ಲ’– ನಡಕ ಬಾಯಿ ಹಾಕಿದ ಮುಂದಿನಮನೀ ನಾಗ್ಯಾ ಕೇಳೇಬಿಟ್ಟಾ.


‘ಈ ಸಲಾ ಪಕ್ಷದೌರು ಭಾಳ ಮುಂಚೇ ಆಂತರಿಕ ಸಮೀಕ್ಷೆ ಅಂತ ನಡಿಸ್ಯಾರಂತ. ಇಂಥೌರು ಮತ್ತ ಈ ಸಲಾ ಇಲೆಕ್ಷನ್‌ಗೆ ನಿಂತ್ರ ಸೋಲೂದು ಗ್ಯಾರಂಟಿ ಅಂತ ರಿಪೋರ್ಟ್‌ ಬಂದೈತಿ. ಅದಕ್ಕ ಹೊಸಬರಿಗೆ ಮಣೀ ಹಾಕ್ಯಾರ’ ಮಾನಪ್ಪ ದನಿಗೂಡಿಸಿದ.


‘ಹೌದೋ ಇಂವಾ ಏನೂ ಕ್ಯಲಸಾ ಮಾಡಿಲ್ಲಾ. ಸೋಲತಾನಾ ಅಂತ ಅಭಿಮಾನಿಗಳಿಗೂ ಗೊತ್ತೈತ್ಯಲ್ಲ. ಆದ್ರೂ ಮತ್ತ ಯಾಕ ನಿಲ್ಸಾಕ ತ್ತಾರಾ? ಬಸಣ್ಣ ಕೇಳಿದ. ಇಷ್ಟ್‌ ದಿನಾ ಪಕ್ಷ ಎಲ್ಲಾ ಕೊಟ್ರೂ ಇವರಿಗೆ ಸಮಾಧಾನನ ಇಲ್ಲಾ. ಜನ ಓಟ್ ಹಾಕಿ ಗೆಲ್ಸೀದ್ರೂ ಖಬರಿಲ್ಲ. ಒಂದ್ ಸ್ವಲ್ಪ್ ಕೆಲಸಾನೂ ಮಾಡಿಲ್ಲಾ ಅನ್ನೂದು ಅಭಿಮಾನಿಗಳಿಗೂ ಗೊತ್ತೈತಿ. ಇಂಥೌರು ಸಾಕಷ್ಟ್‌ ರೊಕ್ಕಾ ಮಾಡ್ಕೋಂಡು ಸರಳ ಸರ ಕೋಳೂದು ಯಾರಿಗೂ ಇಷ್ಟಾ ಇಲ್ಲಾ. ಮತ್ತ ಇಲೆಕ್ಷನ್‌ಗೆ ನಿಂತು ತಮ್ಹತ್ರ ಇರೋ ದುಡ್ಡರ ಖರ್ಚ್‌ ಮಾಡ್ಲಿ. ಒಂದ್‌ ಹದಿನೈದ್‌ ದಿನಾ ತಮ್ಮದೂ ಚೈನಿ ನಡೀಲಿ. ನೋಡೂಣು... ವಯಸ್ಸಾಗಿಂದರ ಇಂಥೌರಿಗೆ ಬುದ್ದಿ ಬರಲಿ ಅಂತ ಹುರಿದುಂಬ್ಸಿ ನಾಮಪತ್ರ ಕೊಡ್ಸ್ಯಾರ ಎಂದು ಹೇಳುತ್ತ ಮಾನಪ್ಪ ಎದ್ ಹೋದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.