ಕಲಬುರಗಿ: ಅಫಜಲಪುರ ಕ್ಷೇತ್ರದಲ್ಲಿ ಗುತ್ತೇದಾರ ಸಹೋದರರ ನಡುವಿನ ಕದನ ತಾರಕಕ್ಕೇರಿದ್ದು, ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಅವರು ಅಣ್ಣ ಮಾಲೀಕಯ್ಯ ಗುತ್ತೇದಾರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
‘ಸಹೋದರ ಮಾಲೀಕಯ್ಯ ಅವರ ಮನವೊಲಿಕೆಗೆ ಬಗ್ಗುವುದಿಲ್ಲ. ಮಾತುಕತೆ ಮುಗಿದು ಹೋದ ಅಧ್ಯಾಯ. ಪಕ್ಷ ನನ್ನ ಕೈಬಿಟ್ಟರೂ ಕ್ಷೇತ್ರದ ಮತದಾರರು ನನ್ನ ಕೈಬಿಡುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ’ ಎಂದು ನಿತಿನ್ ಗುತ್ತೇದಾರ ತಿಳಿಸಿದರು.
‘ನಿತಿನ್ ಆವೇಶದಿಂದ ಮಾತನಾಡಿರಬಹುದು. ಆದರೆ, ನನ್ನ ಮಾತು ಮೀರಲ್ಲ ಎಂಬ ವಿಶ್ವಾಶವಿದೆ. ಕುಟುಂಬದ ಆಂತರಿಕ ವಿಷಯ ನಾವೇ ಬಗೆಹರಿಸಿಕೊಳ್ಳುತ್ತೇವೆ. ನನಗೆ ಸಹಕಾರ ಸಿಗಲಿದೆ ಎಂಬ ವಿಶ್ವಾಸವಿದೆ. ಅವನೇ ಮುಂದಿನ ಉತ್ತರಾಧಿಕಾರಿ. ನನ್ನ ಮಕ್ಕಳನ್ನು ನಾನು ರಾಜಕೀಯದಲ್ಲಿ ಬೆಳೆಸಿಲ್ಲ’ ಎಂದು ಮಾಲೀಕಯ್ಯ ಗುತ್ತೇದಾರ ತಿಳಿಸಿದರು.
ಬಿಜೆಪಿಗೆ ರಾಜೀನಾಮೆ: ‘ಕಾಣದ ಕೈಗಳು ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿವೆ. ನಮ್ಮ ಪಕ್ಷದವರೇ ಟಿಕೆಟ್ ಸಿಗದಂತೆ ಷಡ್ಯಂತ್ರ ಮಾಡಿದ್ದಾರೆ. ನನಗೆ ಬಿಜೆಪಿ ದ್ರೋಹ ಮಾಡಿದ್ದು, ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಶಹಾಪುರದ ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಅವರು ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.