ADVERTISEMENT

ಹನೂರು: ಹ್ಯಾಟ್ರಿಕ್‌ ವೀರ ನರೇಂದ್ರಗೆ ಪ್ರೀತನ್‌ ನಾಗಪ್ಪ, ಮಂಜುನಾಥ್‌ ಸವಾಲು

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 4 ಮೇ 2023, 6:28 IST
Last Updated 4 ಮೇ 2023, 6:28 IST
ಹನೂರು ವಿಧಾನಸಭಾ ಕ್ಷೇತ್ರ
ಹನೂರು ವಿಧಾನಸಭಾ ಕ್ಷೇತ್ರ    

ಸೂರ್ಯನಾರಾಯಣ ವಿ.

ಚಾಮರಾಜನಗರ: ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ನೆಲೆ ಹೊಂದಿರುವ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 

ದಿವಂಗತ ರಾಜೂಗೌಡ ಮತ್ತು ದಿವಂಗತ ಎಚ್‌.ನಾಗಪ್ಪ ಕುಟುಂಬಗಳ ನಡುವಣ ಸಾಂಪ್ರದಾಯಿಕ ಹೋರಾಟಕ್ಕೆ ಸಾಕ್ಷಿಯಾಗುತ್ತಿದ್ದ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲೂ ತ್ರಿಕೋನ ಸ್ಪರ್ಧೆ ನಡೆದಿತ್ತು.   

ADVERTISEMENT

ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ನೆಲೆ ಇರಲಿಲ್ಲ. ನಾಗಪ್ಪ ಕುಟುಂಬ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ, ಅವರ ಬೆಂಬಲಿಗರು, ಅಭಿಮಾನಿಗಳು ಕೂಡ ‘ಕಮಲ’ ಪಾಳಯದಲ್ಲಿ ಗುರುತಿಸಿಕೊಂಡು ಕ್ಷೇತ್ರದಲ್ಲಿ ಪಕ್ಷ ಬಲಪಡಿಸಿದ್ದಾರೆ.  

ಆರಂಭದಿಂದಲೂ ಹನೂರು ಕಾಂಗ್ರೆಸ್‌ನ ಭದ್ರಕೋಟೆ. ಹಾಗಿದ್ದರೂ, ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ, ಕುಟುಂಬಕ್ಕೆ ಜನರು ಮಣೆ ಹಾಕಿದ್ದು ಹೆಚ್ಚು. ಜನತಾ ಪರಿವಾರ, ಜನತಾದಳವೂ ಗೆದ್ದಿರುವ ಇತಿಹಾಸ ಇದೆ. 

ದಿವಂಗತ ರಾಜೂಗೌಡರ ಮಗ ಆರ್.ನರೇಂದ್ರ 2008ರಿಂದ ಕಾಂಗ್ರೆಸ್‌ನಿಂದ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಈ ಸಲ ನಾಲ್ಕನೇ ಬಾರಿ ಆಯ್ಕೆ ಬಯಸಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್‌ಗೆ ನಾಲ್ವರು ಆಕಾಂಕ್ಷಿಗಳಿದ್ದರೂ, ವರಿಷ್ಠರು ನಾಗಪ್ಪ ಅವರ ಮಗ ಡಾ.ಪ್ರೀತನ್‌ ಅವರನ್ನು ಮತ್ತೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಟಿಕೆಟ್‌ ಘೋಷಣೆಯಾದ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ಮೂವರು, ಈಗ ಪಕ್ಷದ ಅಭ್ಯರ್ಥಿ ಜೊತೆ ಕಾಣಿಸಿಕೊಂಡಿದ್ದಾರೆ.

ಜೆಡಿಎಸ್‌ನಿಂದ ಬೆಂಗಳೂರಿನ ಉದ್ಯಮಿ ಎಂ.ಆರ್‌.ಮಂಜುನಾಥ್‌ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಕೊನೆ ಕ್ಷಣದಲ್ಲಿ ಪಕ್ಷದಿಂದ ಕಣಕ್ಕಿಳಿದು, ನರೇಂದ್ರ ಮತ್ತು ಪ್ರೀತನ್‌ಗೆ ಪ್ರಬಲ ಸ್ಪರ್ಧೆ ಒಡ್ಡಿದ್ದರು. 

ಆರ್‌.ನರೇಂದ್ರ

ಉಳಿದಂತೆ ಬಿಎಸ್‌ಪಿಯಿಂದ ಮಾದೇಶ, ಆಮ್‌ ಆದ್ಮಿ ಪಾರ್ಟಿ ಯಿಂದ ಹರೀಶ್‌,ಕೆ., ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದಿಂದ (ಅಠಾವಳೆ) ಟಿ.ಜಾನ್‌ ಪೀಟರ್‌, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಎನ್‌.ಪ್ರದೀಪ್‌ಕುಮಾರ್‌, ಕರ್ನಾಟಕ ಪ್ರಜಾ ಪಾರ್ಟಿಯಿಂದ (ರೈತ ಪರ್ವ) ಜಿ.ಮುರುಗೇಶನ್‌, ಸರ್ವೋದಯ ಕರ್ನಾಟಕ ಪಕ್ಷದಿಂದ ಶೈಲೇಂದ್ರ ಶ್ರೀಕಂಠಸ್ವಾಮಿ, ಕಂಟ್ರಿ ಸಿಟಿಜನ್‌ ಪಾರ್ಟಿಯಿಂದ ಸಿದ್ದಪ್ಪ ಆರ್‌., ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸುರೇಶ್‌ ಎಂ., ಪಕ್ಷೇತರರಾಗಿ ಹನೂರು ನಾಗರಾಜು, ಪ್ರದೀಪ್‌ಕುಮಾರ್‌ ಎಂ, ಮುಜಾಮಿಲ್‌ ಪಾಷಾ, ಟಿ.ಮುತ್ತುರಾಜು, ರಾಜಶೇಖರ್‌, ಸಿ.ಸಿದ್ದಾರ್ಥನ್‌ ಮತ್ತು ಸೆಲ್ವರಾಜ್‌ ಎಸ್‌., ಅಖಾಡದಲ್ಲಿದ್ದಾರೆ. 

ಕಾಂಗ್ರೆಸ್‌ನ ಮತಗಳಿಕೆ ಇಳಿಕೆ: ಪರಿಶಿಷ್ಟ ಜಾತಿ ಮತದಾರರ ಬಾಹುಳ್ಯವಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌; ಪರಿಶಿಷ್ಟ ಜಾತಿ, ಒಕ್ಕಲಿಗ, ಪಡೆಯಚ್ಚಿ ಗೌಂಡರ್‌, ಕ್ರಿಶ್ಚಿಯನ್‌, ಮುಸ್ಲಿಂ ಇತರ ಹಿಂದುಳಿದ ಸಮುದಾಯದವರ ಮತಗಳನ್ನೇ ನೆಚ್ಚಿಕೊಂಡಿದೆ. ಕ್ಷೇತ್ರದಲ್ಲಿ ಆರ್‌.ನರೇಂದ್ರ ಅವರಿಗೆ ದೊಡ್ಡ ಸಮಸ್ಯೆ ಇದ್ದಂತಿಲ್ಲ. ಆದರೆ, ಮೂರು ಬಾರಿ ಶಾಸಕರಾಗಿದ್ದರೂ, ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂಬ ಕೊರಗು ಜನರಲ್ಲಿದೆ. 2008ರ ಚುನಾವಣೆಗೆ ಹೋಲಿಸಿದರೆ ನಂತರ ಎರಡು ಚುನಾವಣೆಗಳಲ್ಲಿ ಅವರ ಮತಗಳಿಕೆ ಪ್ರಮಾಣ ಗಣನೀಯವಾಗಿ ಇಳಿದಿದೆ. ಬಿಜೆಪಿ ಮತ್ತು ಜೆಡಿಎಸ್‌ ಕಾಂಗ್ರೆಸ್‌ನ ಮತಬುಟ್ಟಿಗೆ ಕೈಹಾಕಿರುವುದು ಸ್ಪಷ್ಟ.

ಪ್ರೀತನ್‌ ನಾಗಪ್ಪ

‘ಸಿದ್ದರಾಮಯ್ಯ ಸರ್ಕಾರ ಇದ್ದಾಗ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಆಗಿತ್ತು. ಬಿಜೆಪಿ ಸರ್ಕಾರ ಅನುದಾನವನ್ನೇ ನೀಡಿಲ್ಲ. ಇದರಿಂದ ಯೋಜಿತ ಕೆಲಸಗಳನ್ನು ಮಾಡಲು ಸಾಧ್ಯವಾಗಿಲ್ಲ’ ಎಂದು ನರೇಂದ್ರ ಹೇಳುತ್ತಿದ್ದಾರೆ. 15 ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳನ್ನು ಪ್ರಸ್ತಾಪಿಸಿ ಮತ ಕೇಳುತ್ತಿದ್ದಾರೆ.   

ಕೆಲಸ ಮಾಡುವುದೇ ಅನುಕಂಪ?: ಬಿಜೆಪಿಯ ಪ್ರೀತನ್‌ ನಾಗಪ್ಪ ತಮ್ಮ ಕುಟುಂಬವನ್ನು ಬೆಂಬಲಿಸುತ್ತಾ ಬಂದಿರುವ ಲಿಂಗಾಯತ ಮತಗಳು, ನಾಯಕ, ಬೇಡಗಂಪಣ ಸೇರಿದಂತೆ ವಿವಿಧ ಸಮುದಾಯಗಳ ಮತದಾರರ ಬೆಂಬಲ ನಿರೀಕ್ಷಿಸುತ್ತಿದ್ದಾರೆ.

‘ಬೆಂಗಳೂರಿನಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ಪ್ರೀತನ್‌ ಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ಕ್ಷೇತ್ರಕ್ಕೆ ಬರುತ್ತಾರೆ. ಅಲ್ಲಿವರೆಗೂ ಜನ ಸಂಪರ್ಕದಲ್ಲಿ ಇರುವುದಿಲ್ಲ’ ಎಂಬುದು ಅವರ ಮೇಲಿರುವ ದೂರು. ಕ್ಷೇತ್ರದಲ್ಲಿ ಈಗಲೂ ನಾಗಪ್ಪ ಅವರ ಮೇಲೆ ಗೌರವ ಹೊಂದಿರುವ ದೊಡ್ಡ ಸಂಖ್ಯೆಯ ಜನ ಇದ್ದಾರೆ. ಅವರೇ ಪ್ರೀತನ್ ಅವರನ್ನೂ ಬೆಂಬಲಿಸುತ್ತಾ ಬಂದಿದ್ದಾರೆ. 

ಈ ಬಾರಿ ದತ್ತೇಶ್‌ ಕುಮಾರ್‌, ವೆಂಕಟೇಶ್‌ ಹಾಗೂ ನಿಶಾಂತ್‌ ಟಿಕೆಟ್‌ಗಾಗಿ ಪೈಪೋಟಿ ನೀಡಿದ್ದರು. ಹಾಗಿದ್ದರೂ, ಟಿಕೆಟ್‌ ಪಡೆಯಲು ಪ್ರೀತನ್‌ ಯಶಸ್ವಿಯಾಗಿದ್ದಾರೆ. ಕಳೆದ ಬಾರಿಯೂ ಅವರು ಸೋತಿದ್ದರು. ನಾಗಪ್ಪ ಪತ್ನಿ, ಪರಿಮಳಾ ನಾಗಪ್ಪ 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಆ ಬಳಿಕ ಅವರ ಕುಟುಂಬ ಸೋಲುತ್ತಾ ಬಂದಿದೆ. ಪ್ರೀತನ್‌ ಅವರೇ ಎರಡು ಬಾರಿ ಸೋಲನುಭವಿಸಿದ್ದಾರೆ. ಹಾಗಾಗಿ, ಜನರಲ್ಲಿ ಅನುಕಂಪ ಇದೆ. ಅದು ಪಕ್ಷದ ಪರವಾಗಿ ಕೆಲಸ ಮಾಡಬಹುದು ಎಂಬ ಲೆಕ್ಕಾಚಾರ ಬಿಜೆಪಿ ಮುಖಂಡರದ್ದು. 

ಮಂಜುನಾಥ್‌

ಪ್ರಬಲ ಜೆಡಿಎಸ್‌: ಪರಿಮಳಾ ನಾಗಪ್ಪ ಪಕ್ಷಾಂತರ ಮಾಡಿದ ಬಳಿಕ ಕ್ಷೇತ್ರದಲ್ಲಿ ದುರ್ಬಲಗೊಂಡಿದ್ದ ಜೆಡಿಎಸ್‌ ನೆಲೆಯನ್ನು ಮತ್ತೆ ಬಲಿಷ್ಠಗೊಳಿಸಿದವರು ಮಂಜುನಾಥ್‌. ಕಳೆದ ಬಾರಿ ಚುನಾವಣೆ ಸನಿಹದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕ್ಷೇತ್ರಕ್ಕೆ ಬಂದ ಅವರು ಮತಗಳಿಕೆಯಲ್ಲಿ ಕಾಂಗ್ರೆಸ್‌, ಬಿಜೆಪಿಯ ಹತ್ತಿರಕ್ಕೆ ಬಂದಿದ್ದರು. ಸೋತ ಬಳಿಕವೂ ಕ್ಷೇತ್ರದಲ್ಲೇ ಇದ್ದು ಪಕ್ಷವನ್ನು ಬಲಪಡಿಸಿದ್ದಾರೆ. ಪರಿಶಿಷ್ಟ ಜಾತಿ, ಒಕ್ಕಲಿಗ, ಕುರುಬರು, ಮುಸ್ಲಿಮರ ಬೆಂಬಲದ ನಿರೀಕ್ಷೆಯಲ್ಲಿರುವ ಮಂಜುನಾಥ್‌ ಈ ಬಾರಿಯೂ ನರೇಂದ್ರ ಮತ್ತು ಪ್ರೀತನ್‌ಗೆ ಪ್ರಬಲ ಪೈಪೋಟಿ ನೀಡುವುದು ಖಚಿತ.

ಬಿಎಸ್‌ಪಿ, ಎಎಪಿ, ಕೆಆರ್‌ಎಸ್ ಸೇರಿದಂತೆ ವಿವಿಧ ಪಕ್ಷಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದರೂ, ಮತಗಳಿಕೆಯಲ್ಲಿ ಗಮನಾರ್ಹ ಸಾಧನೆ ತೋರುವ ಸಾಧ್ಯತೆ ಕ್ಷೀಣವಾಗಿದೆ.

ಒಂದಾದ ಬಿಜೆಪಿ ಮುಖಂಡರು

ವಾರದ ಹಿಂದಿನವರೆಗೂ ಕ್ಷೇತ್ರದ ಬಿಜೆಪಿಯಲ್ಲಿ ಎಲ್ಲವೂ ಸರಿ ಇರಲಿಲ್ಲ. ಟಿಕೆಟ್‌ ಆಕಾಂಕ್ಷಿಗಳಾಗಿದ್ದ ವೆಂಕಟೇಶ್‌, ನಿಶಾಂತ್‌ ಮತ್ತು ದತ್ತೇಶ್‌ಕುಮಾರ್‌ ಪ್ರೀತನ್‌ ಅವರಿಗೆ ಬೆಂಬಲ ಘೋಷಿಸಿರಲಿಲ್ಲ. 

ಟಿಕೆಟ್‌ ಘೋಷಣೆಗೂ ಮುನ್ನ ಕ್ಷೇತ್ರದಲ್ಲಿ ಬಣ ರಾಜಕೀಯ ಇತ್ತು. ವೆಂಕಟೇಶ್‌, ಪ್ರೀತನ್‌ ಮತ್ತು ನಿಶಾಂತ್‌ ಪ್ರತ್ಯೇಕ ಬಣ ಹೊಂದಿದ್ದರು. ಪರಸ್ಪರ ವಾಗ್ವಾದ, ಘರ್ಷಣೆಗಳೂ ನಡೆದಿತ್ತು. ಟಿಕೆಟ್‌ ಘೋಷಣೆಯಾದ ಬಳಿಕ ನಾಲ್ವರ ನಡುವಿನ ಅಂತರ ಇನ್ನಷ್ಟು ಹೆಚ್ಚಾಗಿತ್ತು. 

ದತ್ತೇಶ್‌ ಕುಮಾರ್‌ ಕಾಂಗ್ರೆಸ್‌ನತ್ತ ಮುಖ ಮಾಡಿದ್ದರು. ಉಳಿದಿಬ್ಬರು ಮೌನಕ್ಕೆ ಶರಣಾಗಿದ್ದರು. 

ಮಂಗಳವಾರ ಹನೂರಿನಲ್ಲಿ ನಡೆದ ಅಮಿತ್‌ ಶಾ, ಬಿ.ಎಸ್‌.ಯಡಿಯೂರಪ್ಪ ಭಾಗವಹಿಸಿದ್ದ ಪ್ರಚಾರ ಸಭೆಯಲ್ಲಿ ನಾಲ್ವರೂ ಒಟ್ಟಾಗಿ ಕಾಣಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಪ್ರೀತನ್‌ ನಾಗಪ್ಪಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. 

ಈಗ ಮೇಲ್ನೋಟಕ್ಕೆ ಪಕ್ಷದಲ್ಲಿದ್ದ ಮುನಿಸು ಶಮನವಾದಂತೆ ಕಾಣಿಸುತ್ತದೆ. ಚುನಾವಣೆಯಲ್ಲಿ ಅದು ಮತಗಳಾಗಿ ಪರಿವರ್ತನೆಯಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.