ADVERTISEMENT

ಅಭ್ಯರ್ಥಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕೊರತೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಾರದರ್ಶಕವಾಗಿ ನಡೆದುಕೊಂಡಿಲ್ಲ; ಅಪರಾಧ ಪ್ರಕರಣ ಎದುರಿಸುತ್ತಿರುವವರಿಗೆ ಮಣೆ ಹಾಕಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಟ್ರಸ್ಟ್‌ನ ಟ್ರಸ್ಟಿ ಡಾ. ಆರ್.ಬಾಲಸುಬ್ರಮಣಿಯಂ ಆರೋಪಿಸಿದರು.

ಬಿಜೆಪಿ ಬಿಡುಗಡೆ ಮಾಡಿರುವ 154 ಅಭ್ಯರ್ಥಿಗಳ ಪಟ್ಟಿಯಲ್ಲಿ 111 ಮಂದಿ ಹಿಂದಿನ ಚುನಾವಣೆಯಲ್ಲಿ ಟಿಕೆಟ್‌ ಪಡೆದವರೇ ಆಗಿದ್ದಾರೆ. ಇವರು ಸರಾಸರಿ ₹ 8 ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಕಾಂಗ್ರೆಸ್‌ನ 218 ಅಭ್ಯರ್ಥಿಗಳ ಪಟ್ಟಿಯಲ್ಲಿ 148 ಮಂದಿ ಹಿಂದಿನ ಚುನಾವಣೆಯಲ್ಲಿ ಟಿಕೆಟ್‌ ಪಡೆದವರೇ ಇದ್ದಾರೆ. ಇವರು ಸರಾಸರಿ ₹ 28 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಜೆಡಿಎಸ್‌ನ 15 ಅಭ್ಯರ್ಥಿಗಳು ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಭ್ಯರ್ಥಿಗಳ ವಿವರವನ್ನು ಚುನಾವಣಾ ಆಯೋಗದಿಂದ ಪಡೆದು ವಿಶ್ಲೇಷಣೆ ಮಾಡಲಾಗಿದೆ. www.myneta.info ವೆಬ್‌ಸೈಟ್‌ ಮೂಲಕ ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಪೂರ್ಣ ವಿವರವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದರು.

ADVERTISEMENT

‘ಹೆಚ್ಚು ಹಣ ಹೊಂದಿದ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ಇವರು ಚುನಾವಣಾ ಸಂದರ್ಭದಲ್ಲಿ ನಾನಾ ತಂತ್ರ ಅನುಸರಿಸಿ ಮತದಾರರಿಗೆ ಹಣ ನೀಡುವ ಚಾಣಾಕ್ಷತನ ಹೊಂದಿದ್ದಾರೆ. ಇದನ್ನು ಜನರು ಪ್ರಶ್ನಿಸಲೇಬೇಕು. ಅಭ್ಯರ್ಥಿಗಳನ್ನು ಯಾವ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ ಎಂಬುದನ್ನು ಪಕ್ಷಗಳು ಘೋಷಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.