ADVERTISEMENT

ಆಂತರಿಕ ಸಮೀಕ್ಷೆ ಆಧರಿಸಿ ಕಾಂಗ್ರೆಸ್‌ ಟಿಕೆಟ್‌?

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST
ಆಂತರಿಕ ಸಮೀಕ್ಷೆ ಆಧರಿಸಿ ಕಾಂಗ್ರೆಸ್‌ ಟಿಕೆಟ್‌?
ಆಂತರಿಕ ಸಮೀಕ್ಷೆ ಆಧರಿಸಿ ಕಾಂಗ್ರೆಸ್‌ ಟಿಕೆಟ್‌?   

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಆಕಾಂಕ್ಷಿಗಳಿಂದ ಅರ್ಜಿ ಕರೆದಿರುವ ಕಾಂಗ್ರೆಸ್‌, ಆಂತರಿಕ ಸಮೀಕ್ಷೆಯನ್ನೇ ಮಾನದಂಡವಾಗಿ ಇಟ್ಟುಕೊಂಡು ಟಿಕೆಟ್‌ ಹಂಚಿಕೆ ಮಾಡಲು ತೀರ್ಮಾನಿಸಿದೆ.

ಕಾಂಗ್ರೆಸ್‌ ಈಗಾಗಲೇ ಎರಡು ಆಂತರಿಕ ಸಮೀಕ್ಷೆಗಳನ್ನು ನಡೆಸಿದ್ದು, ಮತ್ತೊಂದು ಸಮೀಕ್ಷೆ ನಡೆಯುತ್ತಿದೆ. ಮೂರೂ ವರದಿ ಆಧರಿಸಿ ಪಕ್ಷದ ಹೈಕಮಾಂಡ್‌ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 122 ಕ್ಷೇತ್ರಗಳಲ್ಲಿ ಗೆದ್ದಿತ್ತು. ಬಿಜೆಪಿ, ಜೆಡಿಎಸ್‌ನ ತಲಾ 40 ಅಭ್ಯರ್ಥಿಗಳು ಚುನಾಯಿತರಾಗಿದ್ದರು. ಬಿಜೆಪಿ ವಿರುದ್ಧ ಬಂಡೆದ್ದಿದ್ದ ಬಿ.ಎಸ್‌. ಯಡಿಯೂರಪ್ಪನವರ ಕೆಜೆಪಿ ಸೇರಿದ್ದ ಆರು ಮಂದಿ ಆಯ್ಕೆಯಾಗಿದ್ದರು.

ADVERTISEMENT

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಈ ಸಲ ತಮ್ಮ ಪಕ್ಷದ ನಾಯಕರಿಗೆ ‘ಮಿಷನ್‌– 150’ ಗುರಿ ನಿಗದಿಪಡಿಸಿದ್ದಾರೆ. ಕಾಂಗ್ರೆಸ್‌ 130 ಸ್ಥಾನ ಗೆಲ್ಲುವ ಉದ್ದೇಶ ಹೊಂದಿದೆ. ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ಕನಿಷ್ಠ 80 ಕ್ಷೇತ್ರಗಳನ್ನಾದರೂ ಗೆಲ್ಲಬೇಕೆಂಬ ನಿರೀಕ್ಷೆ ಇಟ್ಟುಕೊಂಡಿದೆ.

ಸದ್ಯ, ತಮ್ಮ ಪಕ್ಷದ ಸುಮಾರು ಎರಡು ಡಜನ್‌ ಹಾಲಿ ಶಾಸಕರು ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಸಮೀಕ್ಷೆ ಹೇಳಿದೆ. ಹೀಗಾಗಿ ಈ ಶಾಸಕರಿಗೆ ಟಿಕೆಟ್‌ ಕೈತಪ್ಪಲಿದೆ. ಬದಲಿಗೆ, ಬೇರೆ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗುತ್ತದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಅಲ್ಲದೆ, 2013ರ ಚುನಾವಣೆಯಲ್ಲಿ ಪಕ್ಷ ಎರಡು ಡಜನ್‌ಗೂ ಹೆಚ್ಚು ಕ್ಷೇತ್ರಗಳಲ್ಲಿ ಹತ್ತು ಸಾವಿರ ಮತಗಳಿಗಿಂತಲೂ ಕಡಿಮೆ ಅಂತರದಿಂದ ಸೋತಿದೆ. ಅದರಲ್ಲೂ ಬಹುತೇಕ ಕ್ಷೇತ್ರಗಳ ಅಂತರ ಐದು ಸಾವಿರಕ್ಕಿಂತಲೂ ಕಡಿಮೆ. ಈ ಕ್ಷೇತ್ರಗಳಲ್ಲಿ ಸೋತ ಅಭ್ಯರ್ಥಿಗಳಿಗೇ ಟಿಕೆಟ್‌ ಕೊಡಲು ಪಕ್ಷದ ನಾಯಕರು ಒಲವು ತೋರಿದ್ದಾರೆ.

ಕಾಂಗ್ರೆಸ್‌ನ 150 ಅಭ್ಯರ್ಥಿಗಳ ಹೆಸರು ಹೆಚ್ಚುಕಡಿಮೆ ಅಂತಿಮಗೊಂಡಿದೆ. ಉಳಿದ 74 ಅಭ್ಯರ್ಥಿಗಳ ಹೆಸರಷ್ಟೇ ಅಂತಿಮಗೊಳ್ಳಬೇಕಿದೆ. ಈ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಬಳಿಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಪ್ರತ್ಯೇಕವಾಗಿ ಸಮಾಲೋಚಿಸಿದ ಬಳಿಕ ಪ್ರತಿ ಕ್ಷೇತ್ರಕ್ಕೂ ಎರಡು ಅಥವಾ ಮೂರು ಹೆಸರುಗಳನ್ನು ಒಳಗೊಂಡ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್‌ಗೆ ಕೊಡಲಿದ್ದಾರೆ. ಹೈಕಮಾಂಡ್‌ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ಪಕ್ಷದ ಅಭ್ಯರ್ಥಿಗಳ ವಿಷಯದಲ್ಲಿ ಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷರಿಗೆ ಮಾತ್ರವೇ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಇರಬಾರದು, ಈ ವಿಷಯದಲ್ಲಿ ಯಾರೊಬ್ಬರ ಕೈ ಮೇಲಾಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಚುನಾವಣಾ ಸಮಿತಿ ರಚಿಸಿದ್ದಾರೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.