ADVERTISEMENT

ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಗೆ ರಾಹುಲ್ ಗಾಂಧಿ ಆಗಮನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 10:18 IST
Last Updated 24 ಫೆಬ್ರುವರಿ 2018, 10:18 IST
ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಗೆ ರಾಹುಲ್ ಗಾಂಧಿ ಆಗಮನ
ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಗೆ ರಾಹುಲ್ ಗಾಂಧಿ ಆಗಮನ   

ಬೆಳಗಾವಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಳಗಾವಿ ಸಾಂಬ್ರಾ ವಿಮಾನನಿಲ್ದಾಣಕ್ಕೆ ಶನಿವಾರ ಬೆಳಿಗ್ಗೆ 12.10ಕ್ಕೆ ಆಗಮಿಸಿದರು.

ಸಂಸತ್ತಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಒಂದು ತಾಸು ಮುಂಚಿತವಾಗಿ ಆಗಮಿಸಿದ್ದರು. ರಾಹುಲ್ ಅವರನ್ನು ಬರಮಾಡಿಕೊಂಡರು.

ನಂತರ ರಾಹುಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹೆಲಿಕಾಪ್ಟರ್ ಮೂಲಕ ಅಥಣಿಯತ್ತ ಹಾರಿದರು. ಶಾಸಕ ಫಿರೋಜ್ ಸೇಠ್, ಅಂಜಲಿ ನಿಂಬಾಳಕರ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

ಜಿಲ್ಲಾಡಳಿತದ ವತಿಯಿಂದ ಮುಖ್ಯಮಂತ್ರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಡಿಸಿ ಎಸ್. ಜಿಯಾವುಲ್ಲಾ, ಕಮಿಷನರ್ ಡಿ.ಸಿ. ರಾಜಪ್ಪ, ಡಿಸಿಪಿ ಸೀಮಾ ಲಾಟಕರ ಇತರರು ಉಪಸ್ಥಿತರಿದ್ದರು.

ರಾಹುಲ್ ಪ್ರಧಾನಿ ಮಾಡಲು ಈ ಚುನಾವಣೆ ಮಹತ್ವದ್ದು: ಸತೀಶ ಜಾರಕಿಹೊಳಿ
ಅಥಣಿ: ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಆರಂಭವಾಗಿದ್ದು, ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ರಾಹುಲ್ ಗಾಂಧಿ ಪ್ರಧಾನಿ ಮಾಡಲು ಈ ಬಾರಿಯ ವಿಧಾನಸಭೆ ಚುನಾವಣೆ ಮಹತ್ವದ್ದಾಗಿದೆ. ಅಥಣಿಯಿಂದಲೆ ಗೆಲುವು ಆರಂಭವಾಗಲಿ ಎಂದು ಹೇಳಿದರು.

ಕೂಲಿ ಕೇಳುತ್ತಿದ್ದೇವೆ: ಲಕ್ಷ್ಮಿ ಹೆಬ್ಬಾಳಕರ
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ದೇಶದಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ್ದರಿಂದ ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಯುವಜನರು ಕೆಲಸ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಎಲ್ಲ ವರ್ಗದವರ ಹಿತ ಕಾಪಾಡುವ ಕೆಲಸ ಮಾಡಿದೆ. ಮಾಡಿದ ಕೆಲಸಕ್ಕೆ ಕೂಲಿಯನ್ನು ನಾವು ಕೇಳುತ್ತಿದ್ದೇವೆ ಎಂದು ಹೇಳಿದರು.

ಮೋದಿ ಭರವಸೆ ಈಡೇರಿಸಿಲ್ಲ: ಬಿ.ಕೆ. ಹರಿಪ್ರಸಾದ್
ಬಿ.ಕೆ. ಹರಿಪ್ರಸಾದ್ ಮಾತನಾಡಿ, ರೈತರು, ಯುವಕರು, ಮಹಿಳೆಯರು, ದಲಿತರು, ಕಾರ್ಮಿಕರು, ಬಡವರ ಪರವಾಗಿ ಕೆಲಸ ಮಾಡಿದವರನ್ನು ಬೆಂಬಲಿಸಬೇಕು ಎಂದರು.

ಕೇಂದ್ರದಲ್ಲಿ ನಾಲ್ಕು ವರ್ಷ ಸರ್ಕಾರ ನಡೆಸಿದ ನರೇಂದ್ರ ಮೋದಿ ಬಹಳ ಆಶ್ವಾಸನೆ ಕೊಡ್ತಾ ಇದ್ದರು. ಆಶ್ವಾಸನೆ ಕೊಡುವುದಷ್ಟೇ ಅವರಿಗೆ ಗೊತ್ತು. ಭ್ರಷ್ಟಾಚಾರ ತಡೆಯುತ್ತೇವೆ, ಕಪ್ಪುಹಣವನ್ನು ವಿದೇಶದಿಂದ ತರ್ತೀವಿ ಎಂದಿದ್ದರು. ಸುಳ್ಳಿನ ಸರದಾರ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಯಾವುದೇ ಭರವಸೆ ಈಡೇರಿಸಿಲ್ಲ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.