ADVERTISEMENT

ಕೂಡ್ಲಿಗಿ: ಪಕ್ಷಾಂತರಿ ಗೋಪಾಲಕೃಷ್ಣಗೆ ಗೆಲುವು ; ಜೆಡಿಎಸ್‌ನ ಎನ್‌.ಟಿ.ಬೊಮ್ಮಣ್ಣ ಸೋಲು

​ಪ್ರಜಾವಾಣಿ ವಾರ್ತೆ
Published 15 ಮೇ 2018, 11:22 IST
Last Updated 15 ಮೇ 2018, 11:22 IST
ಕೂಡ್ಲಿಗಿ: ಪಕ್ಷಾಂತರಿ ಗೋಪಾಲಕೃಷ್ಣಗೆ ಗೆಲುವು ; ಜೆಡಿಎಸ್‌ನ ಎನ್‌.ಟಿ.ಬೊಮ್ಮಣ್ಣ ಸೋಲು
ಕೂಡ್ಲಿಗಿ: ಪಕ್ಷಾಂತರಿ ಗೋಪಾಲಕೃಷ್ಣಗೆ ಗೆಲುವು ; ಜೆಡಿಎಸ್‌ನ ಎನ್‌.ಟಿ.ಬೊಮ್ಮಣ್ಣ ಸೋಲು   

ಬಳ್ಳಾರಿ: ಕೂಡ್ಲಿಗಿಯಲ್ಲಿ ಎಲ್ಲರ ನಿರೀಕ್ಷೆ, ಲೆಕ್ಕಾಚಾರ ಮೀರಿ ಪಕ್ಷಾಂತರಿ, ಬಿಜೆಪಿ ಅಭ್ಯರ್ಥಿ ಎನ್‌.ವೈ.ಗೋಪಾಲಕೃಷ್ಣ ಗೆದ್ದಿದ್ದಾರೆ. ಜೆಡಿಎಸ್‌ನ ಸ್ಥಳೀಯ ಅಭ್ಯರ್ಥಿ ಎನ್‌.ಟಿ.ಬೊಮ್ಮಣ್ಣ ಸೋಲುಂಡಿದ್ದಾರೆ.
ಆ ಪಕ್ಷದ ಏಕೈಕ ಆಶಾಕಿರಣ ಎಂದೇ ಹೇಳಲಾಗಿದ್ದ ಕೂಡ್ಲಿಗಿ ಅನ್ಯ ಪಕ್ಷದ ಪಾಲಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಜೆಡಿಎಸ್‌ ಬೇರು ಬಿಡಲು ಆಗಿಲ್ಲ. ಭರವಸೆ ಇದ್ದ ಕ್ಷೇತ್ರವನ್ನು ಕಳೆದುಕೊಂಡಿದೆ.

ಕಾಂಗ್ರೆಸ್ ಟಿಕೆಟ್‌ ಬಯಸಿ ದೊರಕದೇ ಪಕ್ಷೇತರರಾಗಿದ್ದ ಸ್ಪರ್ಧಿಸಿದ್ದ ಲೋಕೇಶ್‌ ವಿ. ನಾಯ್ಕ ಮೂರನೇ ಸ್ಥಾನಕ್ಕೆ ಬಂದು, ಪಕ್ಷವನ್ನ ನಾಲ್ಕನೇ ಸ್ಥಾನಕ್ಕೆ ತಳ್ಳಿದ್ದಾರೆ.

2014ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಗೋಪಾಲಕೃಷ್ಣ ತಮ್ಮ ತವರು ಕ್ಷೇತ್ರವಾದ ಮೊಳಕಾಲ್ಮುರಿನಲ್ಲಿ ಟಿಕೆಟ್‌ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.
ಕೂಡ್ಲಿಗಿಯಲ್ಲಿದ್ದ ಪಕ್ಷೇತರ ಶಾಸಕ ಬಿಜೆಪಿ ತೊರೆದು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಯಾಗುವುದು ಖಚಿತ ಎಂಬ ಸನ್ನಿವೇಶದಲ್ಲಿ, ಬಿಜೆಪಿಯ ಜಿ.ಜನಾರ್ದನರೆಡ್ಡಿ ಮತ್ತು ಸಂಸದ ಬಿ.ಶ್ರೀರಾಮುಲು ಕಾರ್ಯಾಚರಣೆ ನಡೆಸಿ ಗೋಪಾಲಕೃಷ್ಣ ಅವರನ್ನು ಪಕ್ಷಕ್ಕೆ ಕರೆತಂದು, ಕೂಡ್ಲಿಗಿಯಲ್ಲಿನ ಕೊರತೆಯನ್ನು ತುಂಬಿಕೊಳ್ಳುವ ಪ್ರಯತ್ನ ಮಾಡಿದ್ದರು. ಅವರ ಪ್ರಯತ್ನ ಯಶಕಂಡಿದೆ.
ಟಿಕೆಟ್‌ ಹಂಚಿಕೆಯಲ್ಲಿ ಸಿರುಗುಪ್ಪದಲ್ಲಿ ಮಾಡಿದ್ದ ತಪ್ಪನ್ನೇ ಇಲ್ಲಿಯೂ ಮಾಡಿದ್ದ ಕಾಂಗ್ರೆಸ್‌ ಹೊಸಪೇಟೆಯ ರಾಘವೇಂದ್ರ ಅವರನ್ನು ಕಣಕ್ಕೆ ಇಳಿಸಿತ್ತು. ಇಲ್ಲಿಯೂ ಮತದಾರರಿಗೆ ತಮ್ಮನ್ನು ಪರಿಚಯ ಮಾಡಿಕೊಳ್ಳುವುದೇ ಅಭ್ಯರ್ಥಿಗೆ ದೊಡ್ಡ ಸವಾಲಾಗಿತ್ತು.
ಆದರೆ ‘ಪಕ್ಷಾಂತರಕ್ಕೆ’ ಹಾಗೂ ‘ಹೊಸ ಮುಖ’ಕ್ಕೆ ಮತದಾರರು ಅವಕಾಶ ಕೊಡುವುದಿಲ್ಲ ಎಂಬ ಲೆಕ್ಕಾಚಾರ ಇಲ್ಲಿ ಉಲ್ಟಾ ಆಗಿದೆ. ಪಕ್ಷಾಂತರಿ ಗೋಪಾಲಕೃಷ್ಣಗೆ ಗೆಲುವು ತರುವ ಮೂಲಕ, ಕ್ಷೇತ್ರದಲ್ಲಿ ಬಿಜೆಪಿಯು ಬಲವಾಗಿದೆ ಎಂಬ ಸಂದೇಶವನ್ನೂ ರವಾನಿಸಿದಂತಾಗಿದೆ.

ADVERTISEMENT

ಗೆಲುವಿಗೆ ಕಾರಣವಾದ ಐದು ಅಂಶಗಳು
1 ಕ್ಷೇತ್ರದಲ್ಲಿ ಬಿಜೆಪಿ ಪರವಾಗಿದ್ದ ಅಲೆ
2 ಗೋಪಾಲಕೃಷ್ಣ ಕ್ಷೇತ್ರಕ್ಕೆ ಸಮೀಪದ ಮೊಳಕಾಲ್ಮೂರಿನವರು
3 ಬೊಮ್ಮಣ್ಣ ಅವರ ನಿಷ್ಠುರ ನಡೆ–ನುಡಿ
4 ಬಲವಾದ ಅಭ್ಯರ್ಥಿ ಇಲ್ಲದ ಕಾಂಗ್ರೆಸ್‌
5 ಕಾಂಗ್ರೆಸ್‌–ಜೆಡಿಎಸ್‌ನ ಅತಿಯಾದ ಆತ್ಮವಿಶ್ವಾಸ

ಕೂಡ್ಲಿಗಿ-ಯಾರಿಗೆ ಎಷ್ಟು ಮತ?
ಎನ್‌.ವೈ.ಗೋಪಾಲಕೃಷ್ಣ (ಬಿಜೆಪಿ)50,085 (ಗೆಲುವಿನ ಅಂತರ 10,813)
ಎನ್‌,ಟಿ,ಬೊಮ್ಮಣ್ಣ (ಜೆಡಿಎಸ್‌) 39,272
ಲೋಕೇಶ್‌ ವಿ.ನಾಯ್ಕ (ಪಕ್ಷೇತರ) 29,514
ರಘು ಗುಜ್ಜಲ್‌ (ಕಾಂಗ್ರೆಸ್‌) 23,316
ಎಂ.ವೀರಣ್ಣ (ಸಿಪಿಐ) 3414
ಬಸಪ್ಪ ಎನ್‌. (ಸರ್ವ ಜನತಾ ಪಾರ್ಟಿ)1412
ಎಚ್,ಪಿ.ಶರಣಪ್ಪ (ಆಲ್‌ ಇಂಡಿಯಾ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ)1035
ಮಹಾದೇಪ್ಪ (ಪಕ್ಷೇತರ) 1016
ಜಿ.ಈಶಪ್ಪ (ಜೆಡಿಯು) 957
ನೋಟಾ 2055

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.