ADVERTISEMENT

ದುಡ್ಡು ಕೆಟ್ಟದ್ದು ನೋಡಾ ಎಂಬ ಷರೀಫರ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ ದುಡ್ಡೇ ದೊಡ್ಡಪ್ಪ ಎನ್ನುತ್ತಿದೆ: ಮೋದಿ

​ಪ್ರಜಾವಾಣಿ ವಾರ್ತೆ
Published 5 ಮೇ 2018, 9:25 IST
Last Updated 5 ಮೇ 2018, 9:25 IST
ದುಡ್ಡು ಕೆಟ್ಟದ್ದು ನೋಡಾ ಎಂಬ ಷರೀಫರ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ ದುಡ್ಡೇ ದೊಡ್ಡಪ್ಪ ಎನ್ನುತ್ತಿದೆ: ಮೋದಿ
ದುಡ್ಡು ಕೆಟ್ಟದ್ದು ನೋಡಾ ಎಂಬ ಷರೀಫರ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ ದುಡ್ಡೇ ದೊಡ್ಡಪ್ಪ ಎನ್ನುತ್ತಿದೆ: ಮೋದಿ   

ಗದಗ: ದುಡ್ಡು ಕೆಟ್ಟದ್ದು ನೋಡಾ ಎಂದು ಈ ನಾಡಿನ ಸಂತ ಶಿಶುನಾಳ ಷರೀಫರು ನುಡಿದಿದ್ದರು. ಆದರೆ, ಅವರ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ ಲೂಟಿ ಮಾಡಿ ದುಡ್ಡು ಮಾಡುವ ಕೆಲಸ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮಾಡಿದರು.

ಗದಗದಲ್ಲಿ ಶನಿವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಸಂತ ಶಿಶುನಾಳ ಷರೀಫರ ಮಾತನ್ನು ಕಾಂಗ್ರೆಸ್‌ ಉಲ್ಟಾ ಮಾಡಿದೆ. ಅಪ್ಪನೂ ದೊಡ್ಡವನಲ್ಲ, ದುಡ್ಡೇ ದೊಡ್ಡಪ್ಪ ಅಂತ ಮಾಡಿದೆ ಕಾಂಗ್ರೆಸ್. ಇಲ್ಲಿನ ಮುಖ್ಯಮಂತ್ರಿಗಳಂತೂ ದುಡ್ಡೇ ಮುಖ್ಯವೆಂದುಕೊಂಡಿದ್ದು, ಸೀದಾ ರುಪಯ್ಯಾ ಸರ್ಕಾರ ಮಾಡಿದ್ದಾರೆ ಎಂದು ಟೀಕಿಸಿದರು.

ADVERTISEMENT

ಎಲ್ಲ ರಾಜ್ಯಗಳಲ್ಲಿ ಸೋತಾಗ ಕಾಂಗ್ರೆಸ್‌ ಧೃತಿಗೆಡಲಿಲ್ಲ. ಕರ್ನಾಟಕದಲ್ಲಿ ಸೋಲಲಿದೆ ಎಂದಾಗ ಎಲ್ಲರೂ ದಡಬಡಾಯಿಸುತ್ತಿದ್ದಾರೆ. ಯಾಕೆಂದರೆ ಸರ್ಕಾರದ ಹಣ ಲೂಟಿ ಮಾಡಲು ಕಾಂಗ್ರೆಸ್‌ ಟ್ಯಾಂಕ್ ನಿರ್ಮಾಣ ಮಾಡಿದೆ. ಟ್ಯಾಂಕ್‌ನ ಸ್ವಲ್ಪ ಹಣ ಮಂತ್ರಿಗಳ ಮನೆಗೆ ಹೋಗುತ್ತಿದೆ. ಉಳಿದದ್ದು ದೆಹಲಿಗೆ ಹೋಗುತ್ತಿದೆ ಎಂದು ಮೋದಿ ಟೀಕಿಸಿದರು.

ಈ ಭ್ರಷ್ಟಾಚಾರದ ಟ್ಯಾಂಕ್‌ ತುಂಬಲು ವಸೂಲಿ ಮಾಫಿಯಾ ಸೃಷ್ಟಿಸಲಾಗಿದೆ. ಅಕಸ್ಮಾತ್ ಅಧಿಕಾರ ಕಳಕೊಂಡರೆ ಮಾಫಿಯಾ ರಕ್ಷಿಸುವವರು ಯಾರು ಎಂಬ ಚಿಂತೆ ಕಾಂಗ್ರೆಸ್‌ಗಿದೆ ಎಂದು ಛೇಡಿಸಿದರು.

ಕೆರೆಗಳನ್ನು ಹೂಳೆತ್ತುವ ಪ್ರಯತ್ನವನ್ನು ಕಾಂಗ್ರೆಸ್‌ ಸರ್ಕಾರ ಮಾಡಿಲ್ಲ. ಕೆರೆ ಬರಿದಾಗುವುದನ್ನೇ ಅವರು ಕಾಯುತ್ತಿದ್ದಾರೆ, ಬಿಲ್ಡರ್‌ಗಳಿಗೆ ಮಾರಾಟ ಮಾಡಲು ಮುಂದಾಗಿದ್ದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.