ADVERTISEMENT

ಮತದಾನ ಮಾಡಿದ ಫೋಟೊ, ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 13 ಮೇ 2018, 19:30 IST
Last Updated 13 ಮೇ 2018, 19:30 IST
ಮತದಾನ ಮಾಡಿದ ಫೋಟೊ, ವಿಡಿಯೊ ವೈರಲ್
ಮತದಾನ ಮಾಡಿದ ಫೋಟೊ, ವಿಡಿಯೊ ವೈರಲ್   

ಕಾರವಾರ: ಮತದಾರರೊಬ್ಬರು ಇಲ್ಲಿನ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೊ ಲಿಂಕ್‌ ಭಾನುವಾರ ವೈರಲ್‌ ಆಗಿದೆ.

ವೀರೇನ್‌ ವೀರ್‌ ಎಂಬುವವರು, ‘ಮೈ ವೋಟ್ ಜೆಡಿಎಸ್’ ಎಂಬ ಅಡಿ ಬರಹದೊಂದಿಗೆ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ‌ಅಪ್‌ಲೋಡ್ ಮಾಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಹೊನ್ನಾವರದ ಬಿಜೆಪಿ ಕಾರ್ಯಕರ್ತ ಗಣಪತಿಗೌಡ ಚಿತ್ತಾರ, ಭಟ್ಕಳ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿರುವ ಬಗ್ಗೆ ವಿವಿಪ್ಯಾಟ್‌ನಲ್ಲಿ  ಬಂದ ರಸೀದಿಯ ಫೋಟೊ ತೆಗೆದು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದಕ್ಕೆ, ‘ಕಳೆದುಕೊಂಡ 24 ಹಿಂದೂ ಸಹೋದರರ ನೋವಿನ, ಸೇಡಿನ ಮತ ಇದು...’ ಎಂಬ ಅಡಿಬರಹವನ್ನೂ ಅವರು ನೀಡಿದ್ದಾರೆ.

ADVERTISEMENT

‘ಸುರಕ್ಷತೆ ದೃಷ್ಟಿಯಿಂದ ಮತಗಟ್ಟೆಯ ಒಳಗೆ ಮೊಬೈಲ್‌ ಫೋನ್‌ ಒಯ್ಯುವುದನ್ನು ನಿಷೇಧಿಸಲಾಗಿತ್ತು. ಆದರೂ, ಅಲ್ಲಿ ಮತದಾನದ ದೃಶ್ಯವನ್ನು ಚಿತ್ರೀಕರಿಸಿ ವಿಡಿಯೊ ಹಾಗೂ ಪೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ ಎಂಬ ಮಾಹಿತಿ ಬಂದಿದೆ. ಆದರೆ, ಅದು ಮತದಾನದ ವೇಳೆಯೇ ನಡೆದಿದೆ ಎನ್ನುವುದು ಇನ್ನೂ ಖಾತ್ರಿಯಾಗಿಲ್ಲ’ ಎಂದು ಹೆಚ್ಚುವರಿ ಚುನಾವಣಾ ಅಧಿಕಾರಿ ಡಾ.ಸುರೇಶ್ ಇಟ್ನಾಳ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಡಿದ ಮತದಾನವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಅಪರಾಧ. ಈ ಬಗ್ಗೆ ಪರಿಶೀಲಿಸಲಾಗುವುದು. ಗೋಪ್ಯವಾಗಿರಬೇಕಿದ್ದ ಮಾಹಿತಿಯನ್ನು ಬಹಿರಂಗ ಪಡಿಸಿ ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.