ADVERTISEMENT

ಮುಖ್ಯಮಂತ್ರಿ ಬಳಿಯೇ ಹಣಕಾಸು ಖಾತೆ ಇರಲಿ: ಜಾಫರ್ ಷರೀಫ್

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಜಾಫರ್‌ ಷರೀಫ್‌
ಜಾಫರ್‌ ಷರೀಫ್‌   

ಬೆಂಗಳೂರು: ‘ಎಲ್ಲದಕ್ಕೂ ಉತ್ತರ ಕೊಡಬೇಕಾದುದು ಮುಖ್ಯಮಂತ್ರಿ ಜವಾಬ್ದಾರಿ. ಹೀಗಾಗಿ, ಹಣಕಾಸು ಖಾತೆಯನ್ನು ಅವರೇ ನಿಭಾಯಿಸುವುದು ಉತ್ತಮ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಸಿ.ಕೆ. ಜಾಫರ್ ಷರೀಫ್ ಅಭಿಪ್ರಾಯಪಟ್ಟರು.

ಸುದ್ದಿಗಾರರ ಜತೆಗೆ ಮಾತನಾಡಿ, ‘ಈ ಹಿಂದೆ ಕೂಡಾ ಮುಖ್ಯಮಂತ್ರಿ ಆಗಿದ್ದವರೇ ಹಣಕಾಸು ಇಲಾಖೆ ನಿಭಾಯಿಸಿದ್ದರು’ ಎಂದ ಅವರು, ‘ಈ ವಿಷಯದಲ್ಲಿ ಕಾಂಗ್ರೆಸ್‌ ಪಟ್ಟು ಹಿಡಿಯುವುದು ಸರಿಯಲ್ಲ’ ಎಂದು ಹೇಳಿದರು.

‘ಜೆಡಿಎಸ್‌– ಕಾಂಗ್ರೆಸ್‌ ಮಧ್ಯೆ 30:30 ತಿಂಗಳ ಅಧಿಕಾರ ಹಂಚಿಕೆ ಕೂಡಾ ಅಗತ್ಯ ಇಲ್ಲ. ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿ. ಉಭಯ ಪಕ್ಷಗಳ ನಾಯಕರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು’ ಎಂದು ಅವರು ಸಲಹೆ ನೀಡಿದರು.

ADVERTISEMENT

‘ಡಿ.ಕೆ. ಶಿವಕುಮಾರ್ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಇಂಥಹದ್ದೇ ಸ್ಥಾನ ಬೇಕು ಎಂದು ಪಟ್ಟು ಹಿಡಿಯಬಾರದು. ಕುಮಾರಸ್ವಾಮಿ ಒಕ್ಕಲಿಗರಾಗಿರುವ ಕಾರಣಕ್ಕೆ ಶಿವಕುಮಾರ್‌ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿಲ್ಲದಿರಬಹುದು. ಹಾಗೆ ನೋಡಿದರೆ, ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೂ ಪಕ್ಷದಲ್ಲಿ ಆದ್ಯತೆ ನೀಡಬೇಕಾಗುತ್ತದೆ’ ಎಂದು ಅವರು ಹೇಳಿದರು.

ಮೊಮ್ಮಗನಿಗೆ ಸೀಟು–ಪಟ್ಟು: ಮೊಮ್ಮಗ ರೆಹಮಾನ್ ಷರೀಫ್‌ಗೆ ಪರಿಷತ್ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಜಾಫರ್‌ ಷರೀಫ್‌ ಅವರು ಹಿರಿಯ ಮುಖಂಡರಿಗೆ ಒತ್ತಡ ಹೇರಿದ್ದಾರೆ. ಈ ಸಂಬಂಧ ಹಲವು ನಾಯಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಪರಿಷತ್ ಸ್ಥಾನದ ಭರವಸೆ ಸಿಕ್ಕ ಕಾರಣ ಹೆಬ್ಬಾಳ ಕ್ಷೇತ್ರದಿಂದ ರೆಹಮಾನ್‌ ಹಿಂದಕ್ಕೆ ಸರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.