ADVERTISEMENT

ಮೊನ್ನೆ ಆ ಕಡೆ, ಇಂದು ಈ ಕಡೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:30 IST
Last Updated 25 ಮೇ 2018, 19:30 IST
ವಿಧಾನಸೌಧದಲ್ಲಿ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಬಹುಮತ ಸಾಬೀತಿಗೆ ಶುಕ್ರವಾರ ಕರೆಯಲಾಗಿದ್ದ ವಿಧಾನಸಭೆಯ ಅಧಿವೇಶನದಲ್ಲಿ ಬಹುಮತ ಸಾಬೀತಾದ ನಂತರ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಹಾಗೂ ಆಡಳಿತ ಪಕ್ಷದ ಸದಸ್ಯರು ವಿಜಯದ ಸಂಕೇತ ತೋರಿದರು –ಪ್ರಜಾವಾಣಿ ಚಿತ್ರ
ವಿಧಾನಸೌಧದಲ್ಲಿ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಬಹುಮತ ಸಾಬೀತಿಗೆ ಶುಕ್ರವಾರ ಕರೆಯಲಾಗಿದ್ದ ವಿಧಾನಸಭೆಯ ಅಧಿವೇಶನದಲ್ಲಿ ಬಹುಮತ ಸಾಬೀತಾದ ನಂತರ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಹಾಗೂ ಆಡಳಿತ ಪಕ್ಷದ ಸದಸ್ಯರು ವಿಜಯದ ಸಂಕೇತ ತೋರಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಒಂದೇ ವಾರದಲ್ಲಿ ‘ಅಧಿಕಾರ’ ಮಗ್ಗುಲು ಬದಲಾಯಿಸಿತ್ತು. ಕಳೆದ ಶನಿವಾರ ಸದನದಲ್ಲಿ ಸ್ಪೀಕರ್‌ ಪೀಠದ ಬಲ ಪಾರ್ಶ್ವದಲ್ಲಿ (ಆಡಳಿತ ಪಕ್ಷಕ್ಕೆ ಮೀಸಲು) ವಿರಾಜಮಾನರಾಗಿದ್ದ ನಾಯಕರೆಲ್ಲ ಶುಕ್ರವಾರ ಎಡ ಪಾರ್ಶ್ವದ ಆಸನಗಳಲ್ಲಿ (ವಿರೋಧ ಪಕ್ಷದವರಿಗೆ ಮೀಸಲು) ಕುಳಿತಿದ್ದರು.

ಆಡಳಿತ ಪಕ್ಷದ ಸಾಲಿನಲ್ಲಿ ಎಚ್‌.ಡಿ.ಕುಮಾರಸ್ವಾಮಿ ಪಕ್ಕ ಜಿ.ಪರಮೇಶ್ವರ, ಅವರ ಪಕ್ಕ ಸಿದ್ದರಾಮಯ್ಯ, ಆರ್‌.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್‌, ಆರ್‌.ರೋಷನ್‌ ಬೇಗ್‌ ಹಾಗೂ ರಾಮಲಿಂಗಾ ರೆಡ್ಡಿ ಆಸೀನರಾಗಿದ್ದರು. ಶನಿವಾರ ಮುಂದಿನ ಸಾಲಿನಲ್ಲಿ ಯಡಿಯೂರಪ್ಪ, ಅವರ ಪಕ್ಕದಲ್ಲಿ ಉಮೇಶ್‌ ಕತ್ತಿ, ಅವರ ಪಕ್ಕ ಜಗದೀಶ ಶೆಟ್ಟರ್‌, ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್‌.ಅಶೋಕ. ಎಸ್‌.ಅಂಗಾರ, ಸಿ.ಎಂ.ಉದಾಸಿ ಹಾಗೂ ಗೋವಿಂದ ಕಾರಜೋಳ ಕುಳಿತಿದ್ದರು.

ಶನಿವಾರ ವಿರೋಧ ಪಕ್ಷಗಳ ಮುಂದಿನ ಸಾಲಿನಲ್ಲಿ ಸಿದ್ದರಾಮಯ್ಯ, ಅವರ ಪಕ್ಕ ಆರ್‌.ವಿ.ದೇಶಪಾಂಡೆ, ಅವರ ಪಕ್ಕ ರೋಷನ್‌ ಬೇಗ್‌, ರಾಮಲಿಂಗಾ ರೆಡ್ಡಿ ಹಾಗೂ ಡಿ.ಕೆ.ಶಿವಕುಮಾರ್‌ ಕುಳಿತಿದ್ದರು. ಶುಕ್ರವಾರ ಈ ಸಾಲಿನಲ್ಲಿ ಯಡಿಯೂರಪ್ಪ, ಅವರ ಪಕ್ಕದಲ್ಲಿ ಗೋವಿಂದ ಕಾರಜೋಳ, ಅವರ ಪಕ್ಕ ಜಗದೀಶ ಶೆಟ್ಟರ್‌, ಆರ್.ಅಶೋಕ, ಕೆ.ಎಸ್‌.ಈಶ್ವರಪ್ಪ, ಉಮೇಶ ಕತ್ತಿ ಹಾಗೂ ಸಿ.ಎಂ.ಉದಾಸಿ ಕುಳಿತಿದ್ದರು.

ADVERTISEMENT

ಗ್ಯಾಲರಿಯಲ್ಲಿ ಸಂಸದರು: ಅಧಿಕಾರಿಗಳ ಗ್ಯಾಲರಿಯಲ್ಲಿ ಕಾಂಗ್ರೆಸ್‌ ಸಂಸದರ ದಂಡೇ ನೆರೆದಿತ್ತು. ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಎಂ.ವೀರಪ್ಪ ಮೊಯಿಲಿ, ಕೆ.ಎಚ್‌.ಮುನಿಯಪ್ಪ, ಪ್ರಕಾಶ ಹುಕ್ಕೇರಿ, ಧ್ರುವನಾರಾಯಣ್‌ ಹಾಗೂ ಎಸ್‌.ಪಿ.ಮುದ್ದಹನುಮೇಗೌಡ ಅವರು ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸುವುದನ್ನು
ವೀಕ್ಷಿಸಿದರು.

ವಿಧಾನ‍ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಕೆ.ಟಿ.ಶ್ರೀಕಂಠೇಗೌಡ, ಚುನಾವಣೆಯಲ್ಲಿ ಸೋಲುಂಡ ಎಚ್‌.ಆಂಜನೇಯ, ಅಶೋಕ ಎಂ. ಪಟ್ಟಣ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸಿದರು.

ಸೀಟಿಗಾಗಿ ಹುಡುಕಾಡಿದ ಸದಸ್ಯರು
ಬಿಜೆಪಿ ಸದಸ್ಯರು ಸದನದಲ್ಲಿ ತಮ್ಮ ಸೀಟಿಗಾಗಿ ಹಲವು ನಿಮಿಷ ಹುಡುಕಾಡಿದರು. ‘ನಿಮ್ಮ ನಂಬರ್‌ ಸಿಕ್ಕಿತಾ’, ‘ನಾನು ಒಂದು ಸುತ್ತು ಬಂದೆ. ಇನ್ನೂ ಜಾಗ ಸಿಕ್ಕಿಲ್ಲ’ ಎಂದು ಹಲವು ಸದಸ್ಯರು ಮಾತನಾಡಿಕೊಂಡರು. ‘ಕಳೆದ ಸಲ ಎರಡನೇ ಸಾಲಿನಲ್ಲಿದ್ದೆ. ಈಗ ಕೊನೆಯ ಸಾಲಿನಲ್ಲಿ ಸೀಟು ಮೀಸಲಿಟ್ಟಿದ್ದಾರೆ. ಯಾವ ಮಾನದಂಡದ ಮೇಲೆ ಹೀಗೆ ಮಾಡಿದ್ದೀರಿ’ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಅವರು ಮಾರ್ಷಲ್‌ಗಳನ್ನು ಪ್ರಶ್ನಿಸಿದರು. ‘ನಾವು ಸದಸ್ಯರ ಪಟ್ಟಿ ನೀಡಿಲ್ಲವಲ್ಲ. ನಿಮ್ಮ ಮನಸ್ಸಿಗೆ ಬಂದಂತೆ ನಂಬರ್‌ ಹಾಕಿದ್ದೀರಿ’ ಎಂದು ಅರವಿಂದ ಲಿಂಬಾವಳಿ ಗದರಿದರು.

ಯಡಿಯೂರಪ್ಪ ವಿರೋಧ ಪಕ್ಷದ ನಾಯಕ

ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಉಪನಾಯಕರಾಗಿ ಗೋವಿಂದ ಕಾರಜೋಳ ಆಯ್ಕೆಯಾಗಿದ್ದಾರೆ.

ಶುಕ್ರವಾರ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್‌ ಈ ವಿಷಯ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.