ADVERTISEMENT

ರಾಜಾಜಿನಗರದ ಮತಬೇಟೆಗೆ ‘ಬ್ಯೂಟಿ ಸ್ಪಾಟ್‌’

ಸುರೇಶ್‌ಕುಮಾರ್‌ ಪ್ರಚಾರ ವೈಖರಿ

ಸಂತೋಷ ಜಿಗಳಿಕೊಪ್ಪ
Published 3 ಮೇ 2018, 19:40 IST
Last Updated 3 ಮೇ 2018, 19:40 IST
ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರ ಕಾಲಿಗೆ ಎಸ್‌. ಸುರೇಶ್ ಕುಮಾರ್ ನಮಸ್ಕರಿಸಿದರು – ಪ್ರಜಾವಾಣಿ ಚಿತ್ರ/ಮಂಜುನಾಥ್‌ ಎಂ.ಎಸ್.
ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರ ಕಾಲಿಗೆ ಎಸ್‌. ಸುರೇಶ್ ಕುಮಾರ್ ನಮಸ್ಕರಿಸಿದರು – ಪ್ರಜಾವಾಣಿ ಚಿತ್ರ/ಮಂಜುನಾಥ್‌ ಎಂ.ಎಸ್.   

ಬೆಂಗಳೂರು: ನಗುತ್ತಲೇ ಮತದಾರರ ಕೈ ಕುಲುಕಿ, ದಾರಿಯುದ್ದಕ್ಕೂ ಎದುರಾದವರ ಹೆಗಲ ಮೇಲೆ ಕೈ ಹಾಕಿ ‘ಏನಪ್ಪಾ ಆರಾಮಾಗಿದ್ದೀಯ’ ಎಂದು ವಿಚಾರಿಸಿದರು. ಮತದಾರರ ಜೊತೆ ಸೆಲ್ಫಿಗೆ ಫೋಸು ಕೊಟ್ಟರು. ಆಡುತ್ತಿದ್ದ ಹಾಗೂ ಮನೆ ಬಳಿ ನಿಂತಿದ್ದ ಮಕ್ಕಳನ್ನು ಅಪ್ಪಿಕೊಂಡು ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದರು. ಹಿರಿಯ ನಾಗರಿಕರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

ಇದು, ರಾಜಾಜಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಸುರೇಶ್‌ಕುಮಾರ್‌ ಅವರ ಪ್ರಚಾರದ ವೈಖರಿ.

ಗುರುವಾರ ಬೆಳಿಗ್ಗೆ 5 ಗಂಟೆಗೆ ಎದ್ದಿದ್ದ ಅವರು 7.15ಕ್ಕೆ ಮನೆಯಿಂದ ಹೊರಟು ಶ್ರೀರಾಮಮಂದಿರ ವಾರ್ಡ್‌ನಲ್ಲಿ ದಿನವಿಡೀ ಪ್ರಚಾರ ಕೈಗೊಂಡರು. ಕಾರ್ಯಕರ್ತರ ದಂಡಿನೊಂದಿಗೆ ಪಾದಯಾತ್ರೆಯಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿದರು. ಉದ್ಯಾನಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮತದಾರರನ್ನು ಭೇಟಿ ಮಾಡಿದರು. ಸಮಸ್ಯೆಗಳನ್ನು ಆಲಿಸುತ್ತಲೇ, ‘ನವ ಕರ್ನಾಟಕ ನಿರ್ಮಾಣಕ್ಕೆ ರಾಜಾಜಿನಗರದಲ್ಲೂ ಬಿಜೆಪಿ’ ಶೀರ್ಷಿಕೆಯ ಕರಪತ್ರ ವಿತರಿಸಿ ‘ಬಿಜೆಪಿಗೆ ಮತ ನೀಡಿ’ ಎಂದು ಕೋರಿದರು.

ADVERTISEMENT

‘ಇಂದಿನ ರಾಜಕಾರಣದಲ್ಲಿ ವಿಶ್ವಾಸ ಕಾಯ್ದುಕೊಂಡು ಹೋಗುವವರು ಕಡಿಮೆ. ಆದರೆ, ನೀವು (ಮತದಾರ) ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ’ ಎಂಬ ಮಾತು ಅವರ ಪ್ರಚಾರದ ಪ್ರಮುಖ ಅಸ್ತ್ರವಾಗಿತ್ತು.

ಸಾಮಾನ್ಯ ದಿನಗಳಲ್ಲೂ ಬೆಳಿಗ್ಗೆ 5 ಗಂಟೆಗೇ ಸುರೇಶ್‌ಕುಮಾರ್‌ ಎದ್ದೇಳುತ್ತಾರೆ. ಚುನಾವಣೆ ಘೋಷಣೆಯಾದ ಬಳಿಕವೂ ಏಳುವ ವೇಳೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಒಂದು ತಿಂಗಳಿನಿಂದ ನಿತ್ಯವೂ 10 ಗಂಟೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಬಹಿರಂಗ ಸಭೆಗಳಿಗಿಂತ ಮತದಾರರ ಮನೆಗೇ ತೆರಳಿ ಮತಯಾಚನೆ ಮಾಡುವುದಕ್ಕೆ ಆದ್ಯತೆ ನೀಡಿದ್ದಾರೆ.

ಗುರುವಾರವೂ ವೆಸ್ಟ್‌ ಈಸ್ಟ್‌ ಅಕಾಡೆಮಿ ಹಿಂಭಾಗದ ‘ಬ್ಯೂಟಿ ಸ್ಪಾಟ್‌’ ಗಾರ್ಡನ್‌ನಿಂದ ಪ್ರಚಾರ ಆರಂಭಿಸಿದ ಅವರು, ವಾಯುವಿಹಾರಕ್ಕೆ ಬಂದಿದ್ದ ನಿವಾಸಿಗಳಲ್ಲಿ ಮತಯಾಚಿಸಿದರು. ನಂತರ, ರಸ್ತೆಯುದ್ದಕ್ಕೂ ಕಾಲ್ನಡಿಗೆಯಲ್ಲೇ ಸಾಗಿದರು.

ಮನೆಗಳ ಗೇಟಿನ ಬಾಗಿಲು ತೆರೆದು ಮೊದಲಿಗೆ ಒಳಗೆ ಹೋಗುತ್ತಿದ್ದ ಕಾರ್ಯಕರ್ತರು, ‘ಸುರೇಶ್‌ ಕುಮಾರ್‌ ಬಂದಿದ್ದಾರೆ’ ಎಂದು ಮತದಾರರನ್ನು ಹೊರಗೆ ಕರೆದರು. ನಂತರ ಸುರೇಶ್‌ಕುಮಾರ್, ಮತದಾರರ ಕುಟುಂಬದವರ ಆರೋಗ್ಯ ಹಾಗೂ ಮಕ್ಕಳ ಬಗ್ಗೆ ವಿಚಾರಿಸಿ ಮತಯಾಚನೆ ಮಾಡಿದರು.

ಕೆಲವು ಮನೆಗಳ ಮುಚ್ಚಿದ ಬಾಗಿಲುಗಳೇ ಅವರನ್ನು ಸ್ವಾಗತಿಸಿದವು. ಎಷ್ಟೇ ಬೆಲ್‌ ಬಾರಿಸಿದರೂ ಸ್ಪಂದನೆ ಸಿಗಲಿಲ್ಲ. ‘ಮಲಗಿದ್ದಾರೆ. ಮಲಗಲಿ ಬಿಡಿ’ ಎಂದು ಹೇಳಿ ಮುಂದಿನ ಮನೆಗೆ ಹೋದರು. ಕೆಲ ಬಹುಮಹಡಿ ಕಟ್ಟಡಗಳ ಮಹಡಿಗಳನ್ನು ಹತ್ತಿ ಮತದಾರರನ್ನು ಭೇಟಿ ಮಾಡಿದರು. ಕೆಲವೆಡೆ ಕಟ್ಟಡಗಳ ಮಹಡಿಯಲ್ಲಿ ನಿಂತುಕೊಂಡಿದ್ದ ನಿವಾಸಿಗಳಿಗೆ ರಸ್ತೆಯಲ್ಲಿ ನಿಂತುಕೊಂಡೇ ಕೈ ಮುಗಿದರು.

ಶಾಸಕರನ್ನು ನಿಲ್ಲಿಸಿ ಸಮಸ್ಯೆ ಹೇಳಿದರು: ಕೆಲ ಮತದಾರರು ಶಾಸಕರನ್ನು ನಿಲ್ಲಿಸಿಕೊಂಡು ತಮ್ಮ ಸಮಸ್ಯೆ ಹೇಳಿಕೊಂಡರು. ಆಗ ಸುರೇಶ್‌ಕುಮಾರ್‌, ತಮ್ಮ ಜತೆ ಪ್ರಚಾರಕ್ಕೆ ಬಂದಿದ್ದ ಪಾಲಿಕೆ ಸದಸ್ಯೆ ದೀಪಾ ನಾಗೇಶ್ ಅವರನ್ನು ಕರೆದು, ’ಸಮಸ್ಯೆ ಸರಿಪಡಿಸಿ’ ಎಂದು ಸೂಚಿಸಿದರು. ಸಮಸ್ಯೆ ಹೇಳಿದವರನ್ನು ಸಮಾಧಾನ ಪಡಿಸಿದ ದೀಪಾ, ‘ಮೊನ್ನೆ ಡಾಂಬರ್‌ ಕೇಳಿದಿರಿ, ಹಾಕಿಸಿದ್ದೇನೆ. ಚುನಾವಣಾ ನೀತಿ ಸಂಹಿತೆ ಮುಗಿಯಲಿ. ಆನಂತರ ಉಳಿದೆಲ್ಲ ಕೆಲಸ ಮಾಡಿಸುತ್ತೇನೆ. ಈ ಬಾರಿ ನಮ್ಮ ಪಕ್ಷಕ್ಕೆ ಮತ ನೀಡಿ’ ಎಂದು ಹೇಳಿ, ಸುರೇಶ್‌ಕುಮಾರ್‌ ಅವರನ್ನು ಹಿಂಬಾಲಿಸಿದರು.

ಕಾರ್ಯಕರ್ತನ ಹುಟ್ಟುಹಬ್ಬ ಆಚರಣೆ

ಪ್ರಚಾರದ ವೇಳೆಯೇ ಕಾರ್ಯಕರ್ತ ಲಕ್ಷ್ಮಿನಾರಾಯಣ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಪ್ರಚಾರಕ್ಕೆ ಕೆಲ ನಿಮಿಷ ಬಿಡುವು ಕೊಟ್ಟು ತಿಂಡಿ ತಿನ್ನಲು ಉದ್ಯಾನದಲ್ಲಿ ಸೇರಿದ್ದ ಸುರೇಶ್‌ಕುಮಾರ್‌, ಲಕ್ಷ್ಮಿನಾರಾಯಣರಿಗೆ ಸಿಹಿ ತಿನಿಸಿ ಅಪ್ಪಿಕೊಂಡು ಶುಭಾಶಯ ಕೋರಿದರು. ನಂತರ, ಕಾರ್ಯಕರ್ತ
ರೊಂದಿಗೆ ಉದ್ಯಾನದಲ್ಲೇ ಕುಳಿತು ಕೆಲ ನಿಮಿಷ ವಿಶ್ರಾಂತಿ ಪಡೆದುಕೊಂಡರು.

‘ಡಾಂಬರ್‌ ಹಾಕಿಸಿ ಮನೆಗೆ ಬಂದಿದ್ದೇನೆ’

ಜೇಡರಹಳ್ಳಿಯಲ್ಲಿರುವ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಮನೆಗೆ ಭೇಟಿ ನೀಡಿದ ಸುರೇಶ್‌ಕುಮಾರ್, ‘ಡಾಂಬರ್ ಹಾಕಿಸುವವರೆಗೂ ಮನೆಗೆ ಬರಬೇಡ ಅಂತಾ ಹೇಳಿದ್ರಿ. ಈಗ ಡಾಂಬರ್‌ ಹಾಕಿಸಿದ್ದೇನೆ. ಮತ ಕೇಳಲು ಮನೆಗೂ ಬಂದಿದ್ದೇನೆ’ ಎಂದರು. ನಾಗರಾಜಯ್ಯ, ‘ಗೆದ್ದು ಬಾ’ ಎಂದು ಆಶೀರ್ವಾದ ಮಾಡಿ ಬೀಳ್ಕೊಟ್ಟರು.

ಲಾಂಡ್ರಿ ಇಟ್ಟುಕೊಂಡಿರುವ ಯುವಕನೊಬ್ಬ, ‘ಬರೀ ಕರಪತ್ರವಷ್ಟೆನಾ, ನೋಟು ಇಲ್ವಾ’ ಎಂದು ಕೇಳಿದ. ಸುರೇಶ್‌ಕುಮಾರ್, ‘ಹಣ ಕೊಡುವ ಪಕ್ಷ ನಮ್ಮದಲ್ಲ’ ಎಂದು ಮುಂದೆ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.