ADVERTISEMENT

ರಾಷ್ಟ್ರೀಯ ಪಕ್ಷಗಳೇ ನಮ್ಮ ಮನೆ ಬಾಗಿಲಿಗೆ ಬರಬೇಕು: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ರಾಷ್ಟ್ರೀಯ ಪಕ್ಷಗಳೇ ನಮ್ಮ ಮನೆ ಬಾಗಿಲಿಗೆ ಬರಬೇಕು: ಎಚ್‌ಡಿಕೆ
ರಾಷ್ಟ್ರೀಯ ಪಕ್ಷಗಳೇ ನಮ್ಮ ಮನೆ ಬಾಗಿಲಿಗೆ ಬರಬೇಕು: ಎಚ್‌ಡಿಕೆ   

ಬೆಂಗಳೂರು: ‘ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾದರೆ, ಮುಖ್ಯಮಂತ್ರಿ ಮಾಡಿ ಎಂದು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ರಾಷ್ಟ್ರೀಯ ಪಕ್ಷಗಳೇ ನನ್ನ ಮನೆ ಬಾಗಿಲಿಗೆ ಬರಬೇಕಾಗುತ್ತದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

‘ನನಗೆ ಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ. ಆರೂವರೆ ಕೋಟಿ ಕನ್ನಡಿಗರ ಹಿತರಕ್ಷಣೆ ಮುಖ್ಯ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಚುನಾವಣೆಯಲ್ಲಿ 113 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ತ್ರಿಶಂಕು ಫಲಿತಾಂಶದ ಪ್ರಶ್ನೆಯೇ ಇಲ್ಲ. ಮತದಾನಕ್ಕೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿವೆ. ನಿಸ್ಸಂದೇಹವಾಗಿ ನಮ್ಮ ಗುರಿ ತಲುಪುತ್ತೇವೆ. ಆದರೆ, ಸಮೀಕ್ಷೆಗಳು ಯಾವುದೇ ಪಕ್ಷಕ್ಕೂ ಬಹುಮತ ಬರುವುದಿಲ್ಲ ಎಂದು ಹೇಳುತ್ತಿವೆ. ಆ ಕಾರಣಕ್ಕಾಗಿ, ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದೇನೆ. ನಾವು ಅವಕಾಶವಾದಿಗಳಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಅವಕಾಶವಾದಿಗಳು’ ಎಂದು ಅವರು ಕಿಡಿಕಾರಿದರು.

ADVERTISEMENT

‘ಮಾಧ್ಯಮಗಳ ಸಮೀಕ್ಷೆಯನ್ನು ಒಪ್ಪಲು ನಾನು ತಯಾರಿಲ್ಲ. ನಮ್ಮನ್ನು ಕಡೆಗಣಿಸಲಾಗಿದೆ. ಸುದ್ದಿವಾಹಿನಿಗಳು ಉತ್ತರ ಪ್ರದೇಶದ ಮುಖ್ಯಮಂತ್ರಿ ಹೆಲಿಕಾಪ್ಟರ್‌ ಹತ್ತುವುದರಿಂದ ಹಿಡಿದು ಇಲ್ಲಿ ಬಂದು ಇಳಿಯುವವರೆಗೆ ಪ್ರಚಾರ ನೀಡುತ್ತವೆ. ಆದರೆ, ರಾಜ್ಯದಲ್ಲಿ ಪ್ರತಿನಿತ್ಯ, ಅನಾರೋಗ್ಯದ ನಡುವೆಯೂ ಹತ್ತಾರು ಕಡೆ ಸಮಾವೇಶಗಳನ್ನು ಮಾಡುತ್ತೇನೆ. ವಾಹಿನಿಗಳು ಒಂದು ಸಾಲು ಕೂಡ ತೋರಿಸುವುದಿಲ್ಲ’ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರದಲ್ಲಿ ಪರ್ಸೆಂಟೇಜ್‌ ವ್ಯವಸ್ಥೆ ಆರಂಭಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಅವರಿಂದ ಪಾಠ ಕಲಿತ ಸಿದ್ದರಾಮಯ್ಯ ಪರ್ಸೆಂಟೇಜ್‌ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿ ಮಾಡಿದ್ದಾರೆ. ವಿಧಾನಸೌಧದ ಮೂರನೇ ಮಹಡಿ ಸ್ವಚ್ಛ ಆಗಬೇಕು. ಸಿ.ಎಂ ಕಚೇರಿಯೇ ಗಬ್ಬೆದ್ದು ಹೋಗಿದೆ. ರಾಜ್ಯದ ಹಣ ಲೂಟಿ ಮಾಡುವುದನ್ನು ತಪ್ಪಿಸುವುದು ನಮ್ಮ ಉದ್ದೇಶ’ ಎಂದರು.

ಅಪ್ಪನಾಣೆಗೂ ಎಂಎಲ್‌ಎ ಆಗಲ್ಲ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಪ್ಪನಾಣೆಗೂ ಈ ಬಾರಿ ಎಂಎಲ್‌ಎ ಆಗುವುದಿಲ್ಲ’ ಎಂದು ಆವರು ಹೇಳಿದರು.

‘ಕುಮಾರಸ್ವಾಮಿ ಅವರಪ್ಪನಾಣೆಗೂ ಮುಖ್ಯಮಂತ್ರಿ ಆಗುವುದಿಲ್ಲ’ ಎಂಬ ಸಿದ್ದರಾಮಯ್ಯ ವಾಗ್ಬಾಣಕ್ಕೆ ಕುಮಾರಸ್ವಾಮಿ ಈ ರೀತಿ ತಿರುಗೇಟು ನೀಡಿದರು.

ಆರೋಗ್ಯ ನೆನೆದು ಗದ್ಗದಿತರಾದರು

ಶ್ರೀರಂಗಪಟ್ಟಣ: ‘ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ದಿನೇ ದಿನೇ ನನ್ನ ಆರೋಗ್ಯ ಕ್ಷೀಣಿಸುತ್ತಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಗದ್ಗದಿತರಾದರು.

ಬಾಬುರಾಯನಕೊಪ್ಪಲು ವೃತ್ತದಲ್ಲಿ ಮಂಗಳವಾರ ಜೆಡಿಎಸ್‌ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರ ಪರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.

‘ಜನರ ಪ್ರೀತಿಯಿಂದ ನಾನು ಚುನಾವಣಾ ಕಣಕ್ಕಿಳಿದಿದ್ದೇನೆ. ದೈಹಿಕವಾಗಿ, ಮಾನಸಿಕವಾಗಿ ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದರೂ ಪ್ರಚಾರ ಮಾಡುತ್ತಿದ್ದೇನೆ. ರಾಜ್ಯದ ರೈತರ ಸ್ಥಿತಿಯನ್ನು ನನ್ನಿಂದ ನೋಡಲು ಸಾಧ್ಯವಾಗುತ್ತಿಲ್ಲ. 5 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರೈತರನ್ನು ಆತ್ಮಹತ್ಯೆಯ ಹಾದಿಗೆ ದೂಡಿದೆ. ನಿರುದ್ಯೋಗ ತಾಂಡವವಾಡುತ್ತಿದೆ’ ಎಂದರು.

‘ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂಬ ಉದ್ದೇಶದಿಂದ ಹೋರಾಟ ಮಾಡುತ್ತಿದ್ದೇನೆ. ಈ ಚುನಾವಣೆಯಲ್ಲಿ ನೀವು ನನಗೆ ಬಲ ತುಂಬ
ಬೇಕು. ನನಗೆ ಶಕ್ತಿ ಕೊಟ್ಟರೆ ನಿಮ್ಮ ಬದುಕನ್ನು ಹಸನು ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.