ADVERTISEMENT

ಶಕ್ತಿಕೇಂದ್ರದ ಮೆಟ್ಟಿಲುಗಳಿಗೆ ನಮನ

ಅತ್ತ ಪ್ರಮಾಣವಚನ... ಇತ್ತ ಕಸ ಹೊಡೆದ ವಿಧಾನಸೌಧದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 17 ಮೇ 2018, 19:30 IST
Last Updated 17 ಮೇ 2018, 19:30 IST
ಶಕ್ತಿಕೇಂದ್ರದ ಮೆಟ್ಟಿಲುಗಳಿಗೆ ನಮನ
ಶಕ್ತಿಕೇಂದ್ರದ ಮೆಟ್ಟಿಲುಗಳಿಗೆ ನಮನ   

ಬೆಂಗಳೂರು: ಅತ್ತ ರಾಜಭವನದಲ್ಲಿ ಬಿ.ಎಸ್‌. ಯಡಿಯೂರಪ್ಪ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರು. ಇತ್ತ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕಚೇರಿಯೊಳಗೆ ಮತ್ತು ಕಾರಿಡಾರ್‌ನಲ್ಲಿ ಸಿಬ್ಬಂದಿ ಕಸ ಹೊಡೆದು, ಧೂಳು ಸ್ವಚ್ಛಗೊಳಿಸುವ ಗಡಿಬಿಡಿಯಲ್ಲಿದ್ದರು.

ಅಲ್ಲಿ ಸಡಗರ– ಸಂಭ್ರಮದ ವಾತಾವರಣ ಇರಲಿಲ್ಲ. ಕಾರಿಡಾರ್‌ಗಳು ಬಿಕೋ ಎನ್ನುತ್ತಿದ್ದವು. ಎರಡು ಮತ್ತು ಮೂರನೇ ಮಹಡಿಯಲ್ಲಿ ನಡೆಯುತ್ತಿರುವ ಹಲವು ಕೊಠಡಿಗಳ ನವೀಕರಣ ಕಾರ್ಯದ ತ್ಯಾಜ್ಯ ರಾಶಿ ಕಾರಿಡಾರ್‌ಗಳಲ್ಲಿ ಬಿದ್ದಿದ್ದವು.

ಗುರುವಾರ ಬೆಳಿಗ್ಗೆ 9ಕ್ಕೆ ಪ್ರಮಾಣ ವಚನ ನಿಗದಿ ಆಗಿತ್ತು. ಆದರೆ, ಹೊಸ ಮುಖ್ಯಮಂತ್ರಿಯವರನ್ನು ಬರ ಮಾಡಿಕೊಳ್ಳಲು ವಿಧಾನಸೌಧದಲ್ಲಿ ಅಬ್ಬರ, ಸಡಗರ ಕಂಡು ಬರಲಿಲ್ಲ. ಸಾಮಾನ್ಯವಾಗಿ ಹೊಸ ಮುಖ್ಯಮಂತ್ರಿ ಸ್ವಾಗತಿಸುವಾಗ ಕಚೇರಿಯನ್ನು ಭವ್ಯವಾಗಿ ಸಿಂಗರಿಸುವುದು ವಾಡಿಕೆ. ಆದರೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಳ್ಳುವ ಆದೇಶ ತಡ ರಾತ್ರಿ ಹೊರ ಬಿದ್ದಿತ್ತು. ಆದ್ದರಿಂದ ಸಿಂಗರಿಸಲು ಸಮಯವೇ ಇರಲಿಲ್ಲ ಎಂಬುದು ಸಿಬ್ಬಂದಿ ಸಮಜಾಯಿಷಿ.

ADVERTISEMENT

ರಾಜಭವನದಲ್ಲಿ ಪ್ರಮಾಣ ವಚನಕ್ಕೆ ಮುನ್ನ ನುಡಿಸುತ್ತಿದ್ದ ಬ್ಯಾಂಡ್‌ ಸದ್ದು ವಿಧಾನಸೌಧಕ್ಕೂ ಕೇಳಿ ಬರುತ್ತಿತ್ತು. ಆಗ ಸಿಬ್ಬಂದಿ ಕಾರಿಡಾರ್‌ ನೆಲವನ್ನು ಒರೆಸಿ ಸ್ವಚ್ಛ ಮಾಡುತ್ತಿದ್ದರು. ಇನ್ನು ಕೆಲವರು ಹೂದಾನಿಗಳೊಳಗೆ ತಾಜಾ ಹೂವುಗಳನ್ನು ಇಡುತ್ತಿದ್ದರು. ಅತ್ತ ಪ್ರಮಾಣ ವಚನ ಸ್ವೀಕಾರ ನಡೆಯುತ್ತಿರುವಾಗ (ಮೊಬೈಲ್‌ನಲ್ಲಿ ಸುದ್ದಿ ವಾಹಿನಿ ನೇರ ಪ್ರಸಾರ ವೀಕ್ಷಿಸುತ್ತಲೇ) ಮುಖ್ಯಮಂತ್ರಿ ಕಚೇರಿ ಬಾಗಿಲಿನಲ್ಲಿದ್ದ ‘ಸಿದ್ದರಾಮಯ್ಯ– ಮುಖ್ಯಮಂತ್ರಿ’ ಫಲಕವನ್ನು ಸಿಬ್ಬಂದಿ ತೆಗೆದರು. ಆದರೆ, ಆ ವೇಳೆಗೆ ಹೊಸ ಫಲಕ ಸಿದ್ಧವಾಗಿರಲಿಲ್ಲ. ತಕ್ಷಣವೇ ಸಮೀಪದ ಕೊಠಡಿಗೆ ಓಡಿದ ಸಿಬ್ಬಂದಿ ‘ಬಿ.ಎಸ್.ಯಡಿಯೂರಪ್ಪ– ಮುಖ್ಯಮಂತ್ರಿ’ ಎಂದು ಕಂಪ್ಯೂಟರ್‌ನಲ್ಲಿ ಟೈಪ್‌ ಮಾಡಿ ಪ್ರಿಂಟ್‌ ತೆಗೆದು, ಹೊಸ ಫಲಕಕ್ಕೆ ಅಂಟಿಸಿ ಸಿದ್ಧವಾಗಿಟ್ಟುಕೊಂಡರು. ಪ್ರಮಾಣ ವಚನ ಮುಗಿದದ್ದನ್ನು ಖಚಿತಪಡಿಸಿಕೊಂಡ ಬಳಿಕ ಹೊಸ ಫಲಕ ತೂಗು ಹಾಕಿದರು.

ಶಿರಬಾಗಿ ನಮನ: ಪ್ರಮಾಣ ವಚನ ಸ್ವೀಕರಿಸಿ ಭಾವುಕರಾಗಿದ್ದ ಯಡಿಯೂರಪ್ಪ ವಿಧಾನಸೌಧದೊಳಗೆ ಪ್ರವೇಶಿಸುವಾಗ ಮೆಟ್ಟಿಲುಗಳಿಗೆ ಶಿರಬಾಗಿ ನಮಸ್ಕರಿಸಿದರು (ಪ್ರಧಾನಿ ನರೇಂದ್ರ ಮೋದಿ ಸಂಸತ್ತನ್ನು ಮೊದಲ ಬಾರಿಗೆ ಪ್ರವೇಶಿಸುವಾಗ ಇದೇ ರೀತಿ ಮಾಡಿದ್ದರು). ಆಗ ಅವರ ಜೊತೆಯಲ್ಲಿ ಶಾಸಕರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ. ಎಸ್‌.ಆರ್‌. ವಿಶ್ವನಾಥ್‌ ಮುಂತಾದವರು ಇದ್ದರು. ಮುಖ್ಯಮಂತ್ರಿ ಕಚೇರಿ ಪ್ರವೇಶಿಸುವಾಗ ನಿರಾಳರಾಗಿದ್ದಂತೆ ಕಂಡು ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.