ADVERTISEMENT

ಸಂಪುಟ ರಚನೆ ನಂತರ ಸರ್ಕಾರ ಪತನ: ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 19:30 IST
Last Updated 26 ಮೇ 2018, 19:30 IST
ಶೋಭಾ
ಶೋಭಾ   

ಶಿವಮೊಗ್ಗ: ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಸಚಿವ ಸಂಪುಟ ರಚನೆ ನಂತರ ಪತನಗೊಳ್ಳುವುದು ಖಚಿತ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಚಿವ ಸಂಪುಟ ಮೇಲೆಯೇ ಎರಡು ಪಕ್ಷಗಳಿಗೂ ಕಣ್ಣಿದ್ದು, ಪ್ರಮುಖ ಖಾತೆಗಳನ್ನು ಪಡೆಯಲು ಪರಸ್ಪರ ಪೈಪೋಟಿ ನಡೆದಿದೆ. ಕಂದಾಯ, ನೀರಾವರಿ, ಗೃಹ, ಇಂಧನ ಖಾತೆಗಳ ಮೇಲೆ ಹಲವು ಶಾಸಕರಿಗೆ ಕಣ್ಣಿದೆ. ಈ ಹಂತದಲ್ಲಿಯೇ ಮೈತ್ರಿಯಲ್ಲಿನ ವೈಮನಸ್ಸು ಹೊರಬೀಳುವ ಲಕ್ಷಣಗಳು ಕಂಡುಬರುತ್ತಿವೆ ಎಂದು ಅನುಮಾನ ವ್ಯಕ್ತಪಡಿಸಿದರು.  

ADVERTISEMENT

‘ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಷಡ್ಯಂತ್ರ ಮಾಡಿ ಈ ಸರ್ಕಾರ ರಚನೆಯಾಗಿದೆ ಎಂದು ಮತ್ತೊಮ್ಮೆ ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ಕೆಲವೇ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿಗಳು ಸೋಲನ್ನು ಅನುಭವಿಸಿದ್ದು, ಕೆಲವೇ ಸಂಖ್ಯೆಗಳ ಕೊರತೆಯಿಂದ ಸಿ.ಎಂ ಸ್ಥಾನ ನಮ್ಮ ಕೈತಪ್ಪಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಸರ್ಕಾರ ರಚನೆ ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರಾಜ್ಯದ ವಿದ್ಯಾವಂತ ಮತದಾರರು ಬಿಜೆಪಿ ಜತೆ ಇದ್ದಾರೆ. ರಾಜ್ಯದಲ್ಲಿ ವಿಧಾನ ಪರಿಷತ್‌ನ ಎಂಟು ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.