ADVERTISEMENT

ಸರ್ಕಾರಿ ನೌಕರರಿಗೆ ಭೋಜನ; ಡಿಕೆಶಿ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:44 IST
Last Updated 6 ಮೇ 2018, 19:44 IST

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಸರ್ಕಾರಿ ನೌಕರರಿಗೆ ಭೋಜನ ಕೂಟ ಏರ್ಪಡಿಸಿದ್ದ ಆರೋಪದಡಿ ಸಚಿವ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹತ್ತು ನೌಕರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಶಾಂತಿನಗರ ವಿಧಾನಸಭಾ ಕ್ಷೇತ್ರದ ಸಂಚಾರ ದಳದ ಅಧಿಕಾರಿ ಲಾಲ್‌ಸಿಂಗ್‌ ಲಮಾಣಿ ದೂರು ನೀಡಿದ್ದರು. ಶಿವಕುಮಾರ್‌ ಅವರ ಜತೆಗೆ ಕೆಪಿಸಿಸಿ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಬಿ.ಎಂ.ಪಟೇಲ್‌ ಪಾಂಡು, ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಪುಟ್ಟಸ್ವಾಮಿ, ಪದಾಧಿಕಾರಿ ಗಿರಿಗೌಡ, ಆರೋಗ್ಯ ಇಲಾಖೆಯ ಎಫ್‌ಡಿಎಗಳಾದ ಜಗನ್ನಾಥ್, ರಮೇಶ್, ಫ್ರಾಂಕ್ಲಿನ್, ಕುಮಾರ್, ಕೃಷ್ಣೇಗೌಡ ಸೇರಿದಂತೆ ಹಲವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಕಬ್ಬನ್‌ ಪಾರ್ಕ್‌ ಪೊಲೀಸರು ತಿಳಿಸಿದರು.

‘ಪಟೇಲ್‌ ಪಾಂಡು, ಸರ್ಕಾರಿ ನೌಕರರಿಗಾಗಿ ಮೇ 4ರಂದು ಲ್ಯಾವೆಲ್ಲೆ ರಸ್ತೆಯಲ್ಲಿರುವ ಚಾನ್ಸರಿ ಹೋಟೆಲ್‌ನಲ್ಲಿ ಭೋಜನ ಕೂಟ ಏರ್ಪಡಿಸಿದ್ದರು. ಆ ಮಾಹಿತಿ ಪಡೆದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೋಟೆಲ್‌ ಮೇಲೆ ದಾಳಿ ಮಾಡಿದ್ದೆವು. ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ನೌಕರರು ಕೂಟದಲ್ಲಿ ಪಾಲ್ಗೊಂಡಿದ್ದು ಕಂಡುಬಂತು. ಚುನಾವಣೆ ಕರ್ತವ್ಯಕ್ಕೆ ಹಾಜರಾಗುವ ನೌಕರರನ್ನು ಸೆಳೆಯುವ ಉದ್ದೇಶದಿಂದ ಈ ಭೋಜನ ಕೂಟ ಏರ್ಪಡಿಸಲಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ದೂರಿನಲ್ಲಿ ಲಾಲ್‌ಸಿಂಗ್‌ ಹೇಳಿದ್ದಾರೆ.

ADVERTISEMENT

‘ಭೋಜನ ಕೂಟಕ್ಕೆ ಆಯೋಗದಿಂದ ಯಾವುದೇ ಅನುಮತಿ ಪಡೆದಿಲ್ಲ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ. ಹೋಟೆಲ್ ಮುಂದೆ ನಿಲ್ಲಿಸಿದ್ದ ವಾಹನಗಳು ಹಾಗೂ ಭೋಜನ ಕೂಟದ ವಿಡಿಯೊ ಚಿತ್ರೀಕರಣ ಮಾಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.