ADVERTISEMENT

15.42 ಲಕ್ಷ ಹೊಸ ಮತದಾರರು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 19:42 IST
Last Updated 28 ಫೆಬ್ರುವರಿ 2018, 19:42 IST
15.42 ಲಕ್ಷ ಹೊಸ ಮತದಾರರು
15.42 ಲಕ್ಷ ಹೊಸ ಮತದಾರರು   

ಬೆಂಗಳೂರು: ರಾಜ್ಯದಲ್ಲಿ 15.42 ಲಕ್ಷ ಯುವ ಮತದಾರರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ.

2018ರ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ.

ಕೇಂದ್ರ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ‘ಒಟ್ಟು 15,56,141 ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. 9,17,368 ಹೆಸರುಗಳನ್ನು ತೆಗೆದು ಹಾಕಿದ್ದು, 2,73,213 ಹೆಸರನ್ನು ಬದಲಾಯಿಸಲಾಗಿದೆ. ಪರಿಷ್ಕರಣೆಗೆ ಒಟ್ಟು 29,95,538 ಅರ್ಜಿಗಳು ಬಂದಿದ್ದವು. 27,46,722 ಅರ್ಜಿಗಳನ್ನು ಪುರಸ್ಕರಿಸಲಾಯಿತು’ ಎಂದರು.

ADVERTISEMENT

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಮತದಾರರ ಸಂಖ್ಯೆ 2.21 ಲಕ್ಷ ಇದೆ. 2013 ರಲ್ಲಿ 1.83 ಲಕ್ಷ ಇತ್ತು. ಮತದಾರರ ಪಟ್ಟಿಗೆ ಮಹಿಳೆಯರ ದಾಖಲಾತಿ ಪ್ರಮಾಣ 2013 ಕ್ಕೆ ಹೋಲಿಸಿದರೆ ಶೇ 13 ರಷ್ಟು ಹೆಚ್ಚಳವಾಗಿದೆ. ಲಿಂಗಾನುಪಾತ 2013 ಚುನಾವಣೆಯಲ್ಲಿ 1000 ಕ್ಕೆ 958 ಇದ್ದದ್ದು 2018 ಕರಡು ಪಟ್ಟಿಯಲ್ಲಿ 972 ಕ್ಕೆ ಏರಿಕೆ ಆಗಿದೆ ಎಂದರು.

ಶೃಂಗೇರಿ ವಿಧಾನಸಭಾ ಕ್ಷೇತ್ರ ಅತಿ ಕಡಿಮೆ ಮತದಾರರನ್ನು (1,62,108) ಹೊಂದಿದೆ. ಇಲ್ಲಿ ಪುರುಷ ಮತದಾರರ ಸಂಖ್ಯೆ 80,378, ಮಹಿಳೆಯರ ಸಂಖ್ಯೆ 81,725. ಬೆಂಗಳೂರು ದಕ್ಷಿಣ ಅತಿ ಹೆಚ್ಚು ಮಹಿಳಾ ಮತದಾರರನ್ನು ಹೊಂದಿದೆ. ಇಲ್ಲಿ ಪುರುಷರು 3,11,427, ಮಹಿಳಾ ಮತದಾರರು 2,69,878 ಇದ್ದಾರೆ. ಒಟ್ಟು ಮತದಾರರು 5,81,408 ಎಂದರು.

ಹೆಸರು ಸೇರಿಸಲು ಮತ್ತೆ ಅವಕಾಶ

ಮಾರ್ಚ್‌ 1 ರಿಂದ  ಪುನಃ ಮತದಾರರ ಪಟ್ಟಿಗೆ ಹೆಸರು ಸೇರಿಸುವ, ತೆಗೆಯುವ ಮತ್ತು ತಿದ್ದುಪಡಿಗಳಿಗೆ ಅರ್ಜಿ ಸ್ವೀಕರಿಸಲಾಗುವುದು. ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೂ ಹೆಸರು ಸೇರಿಸಲು ಅವಕಾಶವಿದೆ. ಗುರುತಿನ ಚೀಟಿಯ ಜೊತೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಸಂಜೀವ್‌ ಕುಮಾರ್‌ ಹೇಳಿದರು.

ಮತ ಕೇಂದ್ರವನ್ನು ತಿಳಿಯಲು ದೂರವಾಣಿ ಸಂಖ್ಯೆ 9731979899 ಎಸ್‌ಎಂಎಸ್‌ ಮಾಡಿ ತಿಳಿದುಕೊಳ್ಳಬಹುದು. ಅಂತಿಮ ಮತದಾರರ ಪಟ್ಟಿ
ಯಲ್ಲಿ ಹೆಸರು ಇದೆಯೇ ಎಂಬುದನ್ನು ಚುನಾವಣಾ ಆಯೋಗದ ಸಿಇಒ ವೆಬ್‌ಸೈಟ್‌ನಲ್ಲಿ (www.ceokarnataka.kar.nic.in) ಪರಿಶೀಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.